ಮಾವು ಸಂಸ್ಕರಣ ಘಟಕ ಶೀಘ್ರ ಆರಂಭ

20-02-rama-mango processing unit
Published on

*ರೈತರ ಸಂತಸಕ್ಕೆ ಕಾರಣವಾದ ಮಹತ್ವಾಕಾಂಕ್ಷೆ ಯೋಜನೆ

* ಕಾಮಗಾರಿಗೆ ಕೇಂದ್ರದಿಂದ ನೆರವು

ಗಂಗಾಧರ್ ಬೈರಾಪಟ್ಟಣ ರಾಮನಗರ

ಜಿಲ್ಲೆಯ ಮಹಾತ್ವಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಮಾವು ಸಂಸ್ಕರಣ ಘಟಕ ಪ್ರಸ್ತುತ ಹಂಗಾಮಿನಲ್ಲಿಯೇ ಕಾರ್ಯಾರಂಭ ಮಾಡುವುದು ಬಹುತೇಕ ಖಚಿತವಾಗಿದೆ.

ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಬೈರಾಪಟ್ಟಣ ಬಳಿಯ ತೋಟಗಾರಿಕೆ ಇಲಾಖೆಯ ಫಾರ್ಮ್‌ನಲ್ಲಿ ಮಾವು ಸಂಸ್ಕರಣಾ ಘಟಕ ನಿರ್ಮಾಣ ಕಾರ್ಯ ಬರದಿಂದ ಸಾಗಿದ್ದು, ಬಹುತೇಕ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಮತ್ತೊಂದೆಡೆ ಯಂತ್ರಗಳ ಪ್ರಾಯೋಗಿಕ ಪರೀಕ್ಷೆಗೆ ಚಾಲನೆ ನೀಡಲಾಗಿದ್ದು, ಏಪ್ರಿಲ್ ಅಂತ್ಯದ ವೇಳೆಗೆ ಈ ಕಾರ್ಯವೂ ಪೂರ್ಣಗೊಂಡು ಈ ಬಾರಿಯ ಬೆಳೆ ಮಾವು ಸಂಸ್ಕರಣ ಘಟಕಕ್ಕೂ ಲಗ್ಗೆ ಇಡಲಿದೆ.

ಪ್ರತಿ ವರ್ಷ ಬರ, ಮಳೆ, ಬೆಲೆ ಕುಸಿತ ಹೀಗೆ ಒಂದಿಲ್ಲೊಂದು ಕಾರಣದಿಂದಾಗಿ ನಷ್ಟಕ್ಕೆ ಒಳಗಾಗಿರುವ ಜಿಲ್ಲೆಯ ಮಾವು ಬೆಳೆಗಾರರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ಮಾವು ಸಂಸ್ಕರಣ ಘಟಕ ಆರಂಭಿಸಬೇಕೆನ್ನುವ ಬೇಡಿಕೆ ಕಳೆದ ಹಲವು ವರ್ಷಗಳಿಂದಲೂ ಇದೆ. ಇದಕ್ಕೆ ಪೂರಕ ಎನ್ನುವಂತೆ ಜಿಲ್ಲೆಯ ಬೈರಾಪಟ್ಟಣ ಬಳಿ ಇರುವ ತೋಟಗಾರಿಕೆ ಇಲಾಖೆ ಜಮೀನನ್ನು ನಿಗದಿಪಡಿಸಿ, ನಿರ್ಮಾಣ ಕಾರ್ಯಕ್ಕೂ ಚಾಲನೆ ನೀಡಲಾಗಿತ್ತು. ಆದರೆ, ನಿಧಾನ ಗತಿಯ ಕಾಮಗಾರಿ ಪರಿಣಾಮ ಘಟಕ ಆರಂಭವೂ ವಿಳಂಬವಾಗಿತ್ತು. ಆದರೆ, ಈಗ ಬಹುತೇಕ ಕಾರ್ಯ ಪೂರ್ಣಗೊಂಡಿರುವುದು ಜಿಲ್ಲೆಯ ಮಾವು ಬೆಳೆಗಾರರ ಸಂತಸಕ್ಕೆ ಕಾರಣವಾಗಿದೆ.

ಕೇಂದ್ರದಿಂದ ನೆರವು

ಬೈರಾಪಟ್ಟಣದಲ್ಲಿ ನಿರ್ಮಾಣವಾಗಲಿರುವ ಮಾವು ಸಂಸ್ಕರಣ ಘಟಕಕ್ಕೆ ಕೇಂದ್ರದ ಆರ್‌ಕೆವಿವೈ ಯೋಜನೆಯಡಿ 10 ಕೋಟಿ ರೂ. ಅನುದಾನವೂ ದೊರೆತಿದೆ. ಇದರ ಅಡಿಯಲ್ಲಿಯೇ ಮಾವು ಸಂಸ್ಕರಣ ಘಟಕ ನಿರ್ಮಾಣ ಕಾರ್ಯವೂ ನಡೆದಿದೆ. ಇದರ ಹೊರತಾಗಿ ಮಾವು ಮಾತ್ರವಲ್ಲದೆ, ಇತರ ಹಣ್ಣುಗಳ ಸಂಸ್ಕರಣೆ ಘಟಕಗಳು ಇಲ್ಲಿಯೇ ಇರಲಿವೆ.

ರಾಜ್ಯಕ್ಕೆ ಮೊದಲು

ರಾಜ್ಯಕ್ಕೆ ಮಾವಿನ ಫಸಲು ರಾಮನಗರ ಜಿಲ್ಲೆಯಿಂದಲೇ ಮಾರುಕಟ್ಟೆಗೆ ಬರುವುದು. ಕೋಲಾರ ಅತಿ ಹೆಚ್ಚು ಮಾವು ಬೆಳೆಯುವ ಜಿಲ್ಲೆಯಾಗಿದ್ದರೆ, ನಂತರದ ಸ್ಥಾನ ರಾಮನಗರದ್ದು. ಇವುಗಳ ಸಮೀಪ ಅಲ್ಲಲ್ಲಿ ಅಲ್ಪ ಪ್ರಮಾಣದ ಸಂಸ್ಕರಣಾ ಘಟಕಗಳು ಇವೆ. ಕೆಲವು ಕಾರ್ಖಾನೆಗಳು ಮಾವು ಋತುವಿನಲ್ಲಿ ಹಣ್ಣನ್ನು ಪಲ್ಪ್ ಆಗಿ ಪರಿವರ್ತಿಸಿ ಸಂಗ್ರಹಿಸಿಟ್ಟುಕೊಳ್ಳುತ್ತವೆ. ಅದನ್ನು ಹೊರತುಪಡಿಸಿ ಕರ್ನಾಟಕದಲ್ಲಿ ಎಲ್ಲಿಯೂ ಬೃಹತ್ ಸಂಸ್ಕರಣಾ ಘಟಕಗಳು ಇಲ್ಲ. ನೆರೆಯ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಬೃಹತ್ ಸಂಸ್ಕರಣಾ ಘಟಕವಿದ್ದು, ಈ ಭಾಗದ ಹಣ್ಣು ಬಹುತೇಕ ಅಲ್ಲಿಗೆ ಸರಬರಾಜಾಗುತ್ತದೆ.

ಏನು ಲಾಭ?

ಜಿಲ್ಲೆಯಲ್ಲಿ ಸುಮಾರು 30 ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ವಾರ್ಷಿಕ ಸುಮಾರು 2.5 ಲಕ್ಷ ಟನ್‌ಗಳಷ್ಟು ಇಳುವರಿ ಇದ್ದು, ಸುಮಾರು 400 ಕೋಟಿ ರೂ. ನಷ್ಟು ವಹಿವಾಟು ನಡೆಯುತ್ತಿದೆ, ಒಟ್ಟು ಉತ್ಪನ್ನದಲ್ಲಿ ಸುಮಾರು 50 ಸಾವಿರ ಟನ್‌ನಷ್ಟು ಹಣ್ಣು ಸಂಸ್ಕರಣೆಗೆ ಸಿಗಲಿದೆ. ಮಾವಿನ ಕಾಲದಲ್ಲಿ ಮಾವು ಸಂಸ್ಕರಣೆ ಮಾಡಿ, ಉಳಿದ ಅವಧಿಯಲ್ಲಿ ಬಾಳೆ, ಸಪೋಟಾ, ಪಪ್ಪಾಯ, ನೀಲಿದ್ರಾಕ್ಷಿ ಹಣ್ಣುಗಳ ಸಂಸ್ಕರಣೆ ಹಾಗೂ ಎಳೆನೀರಿನ ಟೆಟ್ರಾಪ್ಯಾಕ್ ಮಾಡಲು ಈ ಘಟಕವನ್ನು ಬಳಸಿಕೊಳ್ಳಬಹುದಾಗಿದೆ.

ಏಪ್ರಿಲ್ ವೇಳೆಗೆ ಚಾಲನೆ!

ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಇನ್ನೇನಿದ್ದರೂ ಯಂತ್ರಗಳ ಪ್ರಾಯೋಗಿಕ ಪರೀಕ್ಷೆ ಪೂರ್ಣಗೊಳ್ಳಬೇಕಿದೆ. ಈ ಕೆಲಸ ಮಾರ್ಚ್‌ನಲ್ಲಿ ಪೂರ್ಣಗೊಳ್ಳಲಿದೆ. ಅಷ್ಟರಲ್ಲಿ ರಾಮನಗರ ಮಾರುಕಟ್ಟೆಗೆ ಮಾವು ಬರಲಿದೆ. ಹೆಚ್ಚಿನ ಮಾವಿನ ಹಣ್ಣು ಹೊರ ರಾಜ್ಯಗಳಿಗೆ ರವಾನೆ ಆಗಲಿದೆ. ಬೈರಾಪಟ್ಟಣ ಘಟಕಕ್ಕೂ ಮಾವು ಬೇಕಾಗಲಿದ್ದು, ಹಣ್ಣು ಇಲ್ಲಿಗೂ ಪೂರೈಕೆ ಆಗಲಿದೆ. ಈ ಕೆಲಸ ಬಹುತೇಕ ಏಪ್ರಿಲ್‌ನಿಂದ ಪ್ರಾರಂಭಗೊಳ್ಳಲಿದೆ.

ಜಿಲ್ಲೆಗೆ ಮಾವು ಸಂಸ್ಕರಣ ಘಟಕದ ಅಗತ್ಯವನ್ನು ಹಿಂದಿನಿಂದಲೂ ಹೇಳತ್ತಲೇ ಬಂದಿದ್ದೆವು. ಈ ಹಂಗಾಮಿನಲ್ಲಿ ಬೈರಾಪಟ್ಟಣ ಘಟಕ ಕಾರ್ಯಾರಂಭ ಮಾಡಲಿದೆ ಎನ್ನುವ ಸುದ್ದಿ ನಿಜವಾಗಬೇಕು. ಮಾವು ಅಭಿವೃದ್ಧಿ ಮಂಡಳಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು.ಸಿ.ಪುಟ್ಟಸ್ವಾಮಿ, ರೈತ ಮುಖಂಡರುಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಯಂತ್ರಗಳ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದ್ದು, ಬಹುತೇಕ ಏಪ್ರಿಲ್ ವೇಳೆಗೆ ಘಟಕ ಕಾರ್ಯಾರಂಭ ಮಾಡಲಿದೆ. ಈ ಹಂಗಾಮಿನಲ್ಲಿಯೇ ಮಾವು ಸಂಸ್ಕರಣೆ ಆರಂಭವಾಗಲಿದೆ.ರವಿ ಬಾಬು, ಉಪನಿರ್ದೇಶಕರು, ಮಾವು ಅಭಿವೃದ್ಧಿ ಮಂಡಳಿ, ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net