

* ಬೆಳೆ ಉಳಿಸಿಕೊಳ್ಳಲು ಪರದಾಟ
*ಮರದಲ್ಲಿಯೇ ಕೊಳೆಯುತ್ತಿವೆ ಕಾಯಿ
* ಬೆಳೆಗಾರರಿಗೆ ಮತ್ತೆ ನಷ್ಟದ ಭೀತಿ
ಗಂಗಾಧರ್ ಬೈರಾಪಟ್ಟಣ ರಾಮನಗರ
ಬಿಸಿಲು & ಮಳೆಯ ಆಟಕ್ಕೆ ನಲುಗಿರುವ ಮಾವು ಬೆಳೆಗಾರರಿಗೆ ಈಗ ಜೋನಿ ರೋಗದ ಕಾಟ ಆರಂಭಗೊಂಡಿದೆ. ಅಷ್ಟೋ ಇಷ್ಟೋ ಈ ಬಾರಿ ಒಂದಿಷ್ಟು ಹಣ ನೋಡಬಹುದು ಎನ್ನುವ ಖುಷಿಯಲ್ಲಿದ್ದ ಮಾವು ಬೆಳೆಗಾರರು ಈಗ ಇರುವ ಬೆಳೆ ಉಳಿಸಿಕೊಳ್ಳಲು ಕಷ್ಟಪಡುವಂತೆ ಆಗಿದ್ದು, ಜೋನಿ ರೋಗದ ಹೊಡೆತಕ್ಕೆ ಕಂಗಾಲಾಗಿದ್ದಾರೆ.
ರಾಜ್ಯದ ಮಾರುಕಟ್ಟೆಗೆ ಮೊದಲಿಗೆ ಪ್ರವೇಶ ಪಡೆಯುವ ರಾಮನಗರ ಜಿಲ್ಲೆಯ ಮಾವಿಗೆ ಈಗ ಜೋನಿ ರೋಗ ಕಾಡ ತೊಡಗಿದೆ. ಮಧ್ಯಂತರ ಬಿದ್ದ ಮಳೆಯ ಪರಿಣಾಮ ಎರಡನೇ ಬಾರಿಗೆ ಹೂವು ಕಚ್ಚಿದ್ದು, ಇದರೊಟ್ಟಿಗೆ ಈಗಾಗಲೇ ಕಚ್ಚಿರುವ ಕಾಯಿಗೆ ಜೋನಿ ರೋಗ ಆವರಿಸಿ, ಕಾಯಿಗಳು ಮರದಲ್ಲಿಯೇ ಕೊಳೆಯಲು ಆರಂಭಿಸಿವೆ. ಇದರಿಂದ ಲಾಭದ ನಿರೀಕ್ಷೆಯಲ್ಲಿದ್ದ ಬೆಳೆಗಾರರು ಈಗ ಮತ್ತೆ ನಷ್ಟದ ಹಾದಿಗೆ ಇಳಿದಿದ್ದಾರೆ.
ಪ್ರಕೃತಿ ವಿಕೋಪದಿಂದ ಈ ಬಾರಿ ಮಾವಿನ ಮರಗಳಲ್ಲಿ 2 ಹಂತಗಳಲ್ಲಿ ಹೂವು ಕಾಣಿಸಿಕೊಂಡಿದೆ. ನವೆಂಬರ್ ಮತ್ತು ಡಿಸೆಂಬರ್ನಲ್ಲಿ ಬಂದ ಹೂವಿನಲ್ಲಿ ಸ್ವಲ್ಪ ಫಸಲು ಕಾಣುವಂತಾದರೆ, ಫೆಬ್ರವರಿ ಮತ್ತು ಮಾರ್ಚ್ನಲ್ಲಿ ಕಾಣಿಸಿಕೊಂಡ ಹೂವು ನೆಲಕ್ಕಚ್ಚಿದೆ. ತಡವಾಗಿ ಹೂವು ಕಾಣಿಸಿಕೊಂಡ ಹಿಂದೆಯೇ ಮಾವಿನ ಮರಗಳಲ್ಲಿ ಚಿಗುರು ಕಾಣಿಸಿಕೊಂಡ ಕಾರಣ ಕೀಟಬಾಧೆ ಹೆಚ್ಚಾಗಿದೆ. ಮೊದಲನೇ ಹಂತದಲ್ಲಿ ಹೂವಿನಲ್ಲಿ ಕಚ್ಚಿದ ಕಾಯಿಗೆ ಯಾವುದೇ ರೋಗ ಇರಲಿಲ್ಲವಾದರೂ 2ನೇ ಹಂತದಲ್ಲಿ ಕಾಣಿಸಿಕೊಂಡ ಹೂವಿನಲ್ಲಿ ಕಚ್ಚಿದ ಕಾಯಿಗೆ ಕೀಟಬಾಧೆ ಹೆಚ್ಚಾಗಿ ಕಾಯಿ ಕಪ್ಪು ಬಣ್ಣಕ್ಕೆ ತಿರುಗುತ್ತಿವೆ. ಕಪ್ಪು ಬಣ್ಣಕ್ಕೆ ತಿರುಗಿದ ಕಾಯಿಯನ್ನು ಯಾರೂ ಕೇಳುವುದಿಲ್ಲ. ಜತೆಗೆ ಇವು ಉಪ್ಪಿನ ಕಾಯಿ ಹಾಕಲು ಯೋಗ್ಯವಲ್ಲದ ಕಾಯಿಗಳಾಗಿದ್ದು, ಉತ್ತಮ ಸಲು ನಿರೀೆಯಲ್ಲಿದ್ದ ಬೆಳೆಗಾರರಿಗೆ ದಿಕ್ಕೆ ತೋಚದಂತಾಗಿದೆ.
ಪ್ರಸ್ತುತ ಸನ್ನಿವೇಶದಲ್ಲಿ ಸೇಂದುರಾ, ಬಾದಾಮಿ, ತೋತಾಪುರಿ ಹೀಗೆ ಎಲ್ಲ ಜಾತಿಯ ಕಾಯಿಗಳಲ್ಲಿಯೂ ರೋಗ ಕಾಣಿಸಿಕೊಂಡಿದೆ. ಅಲ್ಲದೆ, ಒಂದೆಡೆ ಕಾಯಿ ಇದ್ದರೆ, ಎರಡನೇ ಬಾರಿಗೆ ಹೂವು ಕಚ್ಚಿದೆ. ಇಂತಹ ಸನ್ನಿವೇಶದಲ್ಲಿ ಔಷಧ ಸಿಂಪಡಣೆಯೂ ಕಷ್ಟದ ಕೆಲಸವಾಗಲಿದೆ. ಔಷಧ ಸಿಂಪಡಣೆ ಮಾಡಿದರೆ ಇರುವ ಕಾಯಿಯನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡಿದ ನಂತರ ಬಳಕೆ ಮಾಡುವ ಗ್ರಾಹಕರು ತೊಂದರೆಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಇದು ರೈತರನ್ನು ಧರ್ಮ ಸಂಕಟಕ್ಕೆ ಸಿಲುಕಿಸಿದೆ.
ಜೋನಿ ರೋಗ ಹೆಚ್ಚಾಗುತ್ತಿರುವ ಕಾರಣ ಕೆಲವು ರೈತರು ಬಲಿತ ಮಾವಿನ ಕಾಯಿಯ ಜತೆಗೆ ಎಳಸು ಕಾಯಿಗಳನ್ನು ಕಿತ್ತು ಮಾರುಕಟ್ಟೆಗೆ ತರುತ್ತಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದು, ರೋಗಕ್ಕೆ ತುತ್ತಾಗ ಎಳೆ ಕಾಯಿಗಳನ್ನು ರೈತರು ತಂದು ಮಾರಾಟ ಮಾಡುತ್ತಿದ್ದಾರೆ. ಕೆಲವರು ಕಡಿಮೆ ಬೆಲೆಗೆ ಖರೀದಿ ಮಾಡುತ್ತಿದ್ದರೆ, ಮತ್ತೆ ಕೆಲವು ಖರೀದಿದಾರರು ಎಳೆ ಕಾಯಿಗಳನ್ನು ತಿರಸ್ಕರಿಸುತ್ತಿದ್ದಾರೆ.
ಅನಿರೀಕ್ಷಿತ ಮಳೆಯ ಪರಿಣಾಮ ಮಾವಿಗೆ ಜೋನಿ ರೋಗ ಆರಂಭಗೊಂಡಿದೆ. ಏನು ಮಾಡಬೇಕು ಎನ್ನುವುದೇ ತಿಳಿಯುತ್ತಿಲ್ಲ. ಇರುವ ಕಾಯಿಯನ್ನು ಕಿತ್ತರೂ ಇವುಗಳಿಗೆ ಮಾರುಕಟ್ಟೆಯಲ್ಲಿ ಬೆಲೆಯಿಲ್ಲ. ತೋಟಗಾರಿಕೆ ಇಲಾಖೆ ಇತ್ತ ಗಮನ ಹರಿಸಲಿ. > ಸ್ವಾಮಿ, ಲಕ್ಕೋಜನಹಳ್ಳಿ, ಮಾವು ಬೆಳೆಗಾರಹವಾಮಾನ ವೈಫರೀತ್ಯ ಮತ್ತು ಅಕಾಲಿಕ ಮಳೆಯಿಂದಾಗಿ ಎರಡನೇ ಬಾರಿಗೆ ಹೂ ಬಿಟ್ಟು ಚಿಗಿರಿದ ಕಾರಣ ಜೋನಿ ರೋಗ ಕಾಣಿಸಿಕೊಂಡಿದೆ. ಕಾಯಿ ಇರುವ ಕಾರಣ ಔಷಧ ಸಿಂಪಡಣೆ ಸೂಕ್ತವಲ್ಲ. ಆದರೆ ಬಾದಿತ ಕಾಯಿಗಳನ್ನು ನಾಶ ಮಾಡಬೇಕು ಮತ್ತು ಹೂಗಳಿಗೆ ಸುರಕ್ಷಿತವಾಗಿ ಹೂಗಳಿಗೆ ಔಷಧ ಸಿಂಪಡಣೆ ಮಾಡುವ ನಿಟ್ಟಿನಲ್ಲಿ ರೈತರು ಗಮನ ಹರಿಸಬೇಕು. > ರಾಜು, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ ರಾಮನಗರ