ಜೋಕೆ… ಬಾಯ್ತೆರೆದಿದೆ ಮೃತ್ಯುಲೋಕ!

Nantooru Road
ನಂತೂರು ಸರ್ಕಲ್ ಬಳಿ ಪಡೀಲ್ ಕಡೆಗೆ ತೆರಳುವ ರಸ್ತೆಯಲ್ಲಿ ಬೃಹತ್ ಗುಂಡಿ ಸೃಷ್ಟಿಯಾಗಿರುವುದು.
Published on

ಮಂಗಳೂರು: ನಗರದ ರಸ್ತೆಯಲ್ಲಿ ಸಂಚರಿಸಿ, ಸುರಕ್ಷಿತವಾಗಿ ಮನೆ ಸೇರಿದರೆಂದರೆ ನಿಜಕ್ಕೂ ಅವರ ಜನ್ಮ ಸಾರ್ಥಕ. ಏಕೆಂದರೆ, ನಗರದ ರಸ್ತೆಗಳಲ್ಲಿ ಮೃತ್ಯುಲೋಕವೇ ಬಾಯ್ತೆರೆದ ರೀತಿಯಲ್ಲಿ ಬೃಹತ್ ಹೊಂಡಗಳು ನಿರ್ಮಾಣಗೊಂಡಿದ್ದು, ಸಂಚರಿಸುವಾಗ ಜೀವ ಉಳಿಯುತ್ತದೆ ಎಂಬ ಭರವಸೆಯೇ ಇಲ್ಲ. ಜೋಕೆ… ನಿಧಾನವಾಗಿ ಸಾಗಿರಿ. ರಸ್ತೆಯಲ್ಲಿ ತೆರೆದಿದೆ ಯಮಲೋಕದ ದಾರಿ..!

ನಗರದ ರಸ್ತೆಯ ಸಾಮರ್ಥ್ಯ, ಮಾಡಿರುವ ಕಾಮಗಾರಿಯ ಗುಣಮಟ್ಟ ಎಷ್ಟಿದೆ ಎನ್ನುವುದನ್ನು ನಿರಂತರವಾಗಿ ಸುರಿಯುತ್ತಿರುವ ಮಳೆ ಹೊಂಡ-ಗುಂಡಿಗಳ ಮೂಲಕ ಸಾಕ್ಷೀಕರಿಸುತ್ತಿದೆ. ತುಸು ಮಳೆ ಬಂದರೂ ಸಾಕು ಮಂಗಳೂರು ನಗರದ ರಸ್ತೆಯಲ್ಲಿ ಸಂಚಾರವೇ ಭೀಕರವೆನಿಸುವಷ್ಟು ಅಪಾಯಕಾರಿಯಾಗಿದೆ.

ಹೆದ್ದಾರಿಯಲ್ಲಿ ಪರದಾಟ

ನಗರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆ ಹೇಳತೀರದು. ಅಸಮರ್ಪಕ ಕಾಮಗಾರಿಯಿಂದ ಹಾಗೂ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನಗರದ ರಸ್ತೆಗಳಲ್ಲಿ ಬೃಹತ್‌ಗಾತ್ರದ ಹೊಂಡಗಳು ಸೃಷ್ಟಿಯಾಗುತ್ತಿವೆ. ಕೂಳೂರಿನಿಂದ ನಂತೂರು ವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವಾಗ ಮರಣಮೃದಂಗದ ಸದ್ದು. ಹೊಂಡಗಳಲ್ಲಿ ಮಳೆ ನೀರೂ ನಿಂತಿರುವುದರಿಂದ ಆಳ ಅರಿಯಲಾಗದೆ ವಾಹನಗಳ ಚಾಲಕರು ಇಕ್ಕಟ್ಟಿಗೆ ಸಿಲುಕುತ್ತಾರೆ. ವಾಹನ ನಿಯಂತ್ರಣಕ್ಕೆ ತರಲು ಯತ್ನಿಸಿ, ಇನ್ನೊಂದು ವಾಹನಕ್ಕೆ ಇನ್ನೇನು ಡಿಕ್ಕಿಯಾಗುತ್ತದೆ ಎನ್ನುವಷ್ಟರಲ್ಲಿ ಕೂದಲೆಳೆಯಷ್ಟು ಅಂತರದಲ್ಲಿ ಪಾರಾಗುತ್ತಾರೆ. ಅಥವಾ ಮುಂದಿನ ವಾಹನಕ್ಕೆ ಡಿಕ್ಕಿ ಹೊಡೆದುಕೊಳ್ಳುತ್ತಾರೆ. ಇದು ಹೆದ್ದಾರಿಯಲ್ಲೀಗ ನಿತ್ಯ ಗೋಚರಿಸಿವ ದೃಶ್ಯ.

ಕಾಡುವ ಹೊಂಡ

ಕೆಪಿಟಿ ಜಂಕ್ಷನ್ ಬಳಿ ಜನಿಸಿರುವ ಗುಂಡಿಯೀಗ ಬೃಹತ್ ಹೊಂಡವಾಗಿ ಬೆಳೆದಿದೆ. ನಂತೂರು ಸರ್ಕಲ್ ಬಳಿ ಹೊಂಡಗಳದ್ದೇ ಭರಾಟೆಯಾಗಿದ್ದು, ರಸ್ತೆ ಎಲ್ಲಿದೆ ಎಂದು ಹುಡುಕಿ ವಾಹನ ಓಡಿಸಬೇಕಿದೆ. ಪ್ರತಿದಿನ ನಂತೂರು ಸರ್ಕಲ್ ಬಳಿ ಕನಿಷ್ಠ 10 ಮಂದಿ ಬೈಕ್ ಸವಾರರು ನಿಯಂತ್ರಣ ತಪ್ಪಿ ಹೊಂಡದಲ್ಲಿ ಬಿದ್ದೇಳುವುದು ಈಗ ಸಾಮಾನ್ಯ ಎಂಬಂತಾಗಿದೆ. ಅತಿ ಹೆಚ್ಚು ವಾಹನಗಳು ಸಂಚರಿಸುವ ಸ್ಥಳ ಹಾಗೂ ರಾಷ್ಟ್ರೀಯ ಹೆದ್ದಾರಿ ಹಾಗೂ ಪಾಲಿಕೆ ರಸ್ತೆ ಸಂಧಿಸುವ ಕೆಪಿಟಿ ಜಂಕ್ಷನ್‌ನಲ್ಲಿಯೇ ಹೆಚ್ಚು ಗುಂಡಿ ಬಿದ್ದಿದೆ. ದಿನವೂ ಒಂದೊಂದು ಅದ್ವಾನ ಆಗುತ್ತಲೇ ಇದೆ.

ತೇಪೆಯೂ ಕಳಪೆ

ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ನಂತೂರು, ಕೆಪಿಟಿ, ಕೂಳೂರು ವ್ಯಾಪ್ತಿಯಲ್ಲಿನ 100ಕ್ಕೂ ಅಧಿಕ ಗುಂಡಿ ಮುಚ್ಚುವ ತೇಪೆ ಕಾರ್ಯ ಇತ್ತೀಚೆಗೆ ನಡೆದಿತ್ತು. ಆದರೆ, ನಿರಂತರ ಮಳೆಯಿಂದಾಗಿ ಹಾಕಿದ ತೇಪೆಯೆಲ್ಲ ಎದ್ದಿದ್ದು, ಈ ಹಿಂದಿಗಿಂತಲೂ ದೊಡ್ಡ ಹೊಂಡಗಳಾಗಿ ಮಾರ್ಪಟ್ಟಿದೆ. ಪಾಲಿಕೆ ವ್ಯಾಪ್ತಿಯಲ್ಲಿನ ರಸ್ತೆಗಳು ಗುಂಡಿ ಬಿದ್ದು, ಜೀವಬಲಿಗೆ ಕಾದಿದೆಯಾದರೂ ಗುಂಡಿಗಳನ್ನು ಮುಚ್ಚಿಸುವ ಕಾರ್ಯಕ್ಕೆ ಪಾಲಿಕೆ ಅಧಿಕಾರಿಗಳು ಈವರೆಗೂ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

ಆ ಗುಂಡಿ ನಮ್ಮದಲ್ರೀ…!

ಬೆಂದೂರ್‌ವೆಲ್ ಭಾಗದಲ್ಲಿ ಟ್ರಾಫಿಕ್ ಇಲ್ಲದ ದಿನವಿಲ್ಲ. ಇಲ್ಲಿನ ಹೊಂಡ-ಗುಂಡಿಯ ಮಧ್ಯೆ ವಾಹನಗಳನ್ನು ಓಡಿಸುವುದೇ ನಿತ್ಯದ ಜಂಜಾಟ. ನಂತೂರು ಬಸ್ ನಿಲ್ದಾಣ, ಬಿಕರ್ನಕಟ್ಟೆಯಲ್ಲಿ ಮಸಣಕ್ಕೆ ದಾರಿ ತೋರುವಂತೆ ರಸ್ತೆಗಳು ಬಾಯಿ ತೆರೆದಿದೆ. ದಿನವೂ ಇದೇ ರಸ್ತೆಯಲ್ಲಿ ಸಂಚರಿಸುವ ನೋಡಿದ್ದರೂ ಅಧಿಕಾರಿಗಳು ಮೌನವ್ರತ ತಾಳಿದ್ದಾರೆ. ‘ಗುಂಡಿ ಬಿದ್ದ ಜಾಗ ನಮ್ಮದಲ್ಲ‘ ಎನ್ನುವುದು ಪಾಲಿಕೆ ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ವಾದ. ಈ ಕಾರಣಕ್ಕೆ ಇಲ್ಲಿಯ ಗುಂಡಿಗೆ ತೇಪೆಯೂ ಇಲ್ಲ, ಗುಂಡಿಮುಚ್ಚುವ ಕಾರ್ಯವೂ ನಡೆದಿಲ್ಲ. ಹೀಗಾಗಿ ಮೃತ್ಯುಲೋಕದ ದ್ವಾರ ದಿನೇದಿನೆ ಉದ್ದ-ಅಗಲ-ಆಳವನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ.

ಪಾಲಿಕೆ ವ್ಯಾಪ್ತಿಯ ಪ್ರಮುಖ ರಸ್ತೆಗಳು ಮಳೆಯಿಂದ ಹಾನಿಯಾಗಿರುವ ಬಗ್ಗೆ ಮಾಹಿತಿ ಪಡೆಯಲಾಗಿದೆ. ಈಗಾಗಲೇ ಅಪಾಯಕಾರಿ ಹೊಂಡ-ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಮಳೆಯ ತೀವ್ರತೆಗೆ ಮತ್ತೆ ಗುಂಡಿಯಾಗುತ್ತಿದೆ. ಮಳೆ ನಿಂತ ಬಳಿಕ ಹೊಂಡ-ಗುಂಡಿಗಳನ್ನು ಮುಚ್ಚಲಾಗುವುದು.- ಜಯಾನಂದ ಅಂಚನ್ ಮೇಯರ್, ಮಹಾನಗರ ಪಾಲಿಕೆ, ಮಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net