

ಅಂಕೋಲಾ: ಅತಿ ನಾಚಿಕೆ ಸ್ವಭಾವ ಹೊಂದಿರುವ ಹಾರ್ನ್ಬಿಲ್ (ಮಂಗಟ್ಟೆ)ಪಕ್ಷಿ ಅಂಕೋಲಾದ ಕುಟುಂಬವೊಂದರ ಮಾನವರ ಸಾಂಗತ್ಯ ಸಾಧಿಸಿ ಅಚ್ಚರಿ ಮೂಡಿಸಿದೆ.
ಹೊನ್ನಿಕೇರಿ ಗ್ರಾಮದ ಕೃಷ್ಣಾನಂದ ಶೆಟ್ಟಿ ಅವರ ಮನೆಗೆ ಕಳೆದ 6 ತಿಂಗಳಿಂದ ಹಾರ್ನ್ಬಿಲ್ ಪ್ರತಿ ದಿನ ಬೆಳಗ್ಗೆ, ಮಧ್ಯಾಹ್ನ ಹಾಗೂ ಸಾಯಂಕಾಲ ಸೇರಿ ಮೂರು ಬಾರಿ ಬರುತ್ತದೆ. ಅವರು ಕೊಟ್ಟ ಆಹಾರ ತಿನ್ನುತ್ತದೆ. ಮನೆಯವರೊಟ್ಟಿಗೆ ಆಟವಾಡುತ್ತದೆ. ಶೆಟ್ಟಿ ಅವರ ಚಿಕ್ಕ ಮಗ ಅಕ್ಷಯ ಎಂದರೆ ಎಲ್ಲಿಲ್ಲದ ಪ್ರೀತಿ ಆತನೊಟ್ಟಿಗೆ ಕಣ್ಣಾಮುಚ್ಚಾಲೆ ಆಡುತ್ತದೆ. ಇದನ್ನು ನೋಡಲು ಈಗ ಹಲವರು ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ.
ಕನ್ನಡದಲ್ಲಿ ಮಂಗಟ್ಟೆ ಎಂದು ಕರೆಸಿಕೊಳ್ಳುವ ದೊಡ್ಡ ದೇಹ, ಅದಕ್ಕಿಂದ ದೊಡ್ಡ ಕೊಕ್ಕು ಅದರ ಮೇಲೊಂದು ಆಕರ್ಷಕ ಕಿರೀಟ ಹೊಂದಿರುವ ಅಪರೂಪದ ಪಕ್ಷಿ ಹಾರ್ನ್ಬಿಲ್. ಉತ್ತರ ಕನ್ನಡದಲ್ಲಿ ನಾಲ್ಕು ಪ್ರಭೇದದ ಹಾರ್ನ್ಬಿಲ್ಗಳಿವೆ. ಅದರಲ್ಲಿ ಇದು ಗ್ರೇಟ್ ಇಂಡಿಯನ್ ಅಥವಾ ಗ್ರೇಟ್ ಪೈಡ್ ಹಾರ್ನ್ ಬಿಲ್ ಎಂದು ಕರೆಯಲ್ಪಡುತ್ತದೆ.