ಮಂಗಳೂರು-ಕುಕ್ಕೆ ಸುಬ್ರಹ್ಮಣ್ಯ ನಡುವೆ ಹೊಸ ರೈಲು

Somanna_Railway
Published on

ತುಮಕೂರು: ಮಂಗಳೂರು-ಕುಕ್ಕೆಸುಬ್ರಹ್ಮಣ್ಯ ರೋಡ್​ ನಡುವೆ ಹೊಸ ರೈಲು ಸಂಚಾರ ಆರಂಭಕ್ಕೆ ಏ.12 ರಂದು ಹಸಿರು ನಿಶಾನೆ ತೋರಿಸಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ನಗರದ ಬಟವಾಡಿ ಗೇಟ್​, ಬಡ್ಡಿಹಳ್ಳಿಗೇಟ್​ ಹಾಗೂ ಮೈದಾಳ ಗೇಟ್​ಗಳಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಬುಧವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸಲು ಹೊಸ ರೈಲು ಸಂಚಾರ ಆರಂಭಿಸಲಾಗುತ್ತಿದೆ. ಮಂಗಳೂರಿಂದ ಕುಕ್ಕೆ ಸುಬ್ರಹ್ಮಣ್ಯ ರೋಡ್​ ನಿಲ್ದಾಣದ ನಡುವೆ ಓಡಾಡಲಿರುವ 2 ರೈಲುಗಳ ಪ್ರತಿನಿತ್ಯ ನಾಲ್ಕು ಬಾರಿ ಸಂಚರಿಸಲಿವೆ ಎಂದರು.

ವಂದೇ ಭಾರತ್​ ಹಾವೇರಿಯಲ್ಲಿ ನಿಲುಗಡೆ : ಧಾರವಾಡ&ಬೆಂಗಳೂರು ನಡುವೆ ಸಂಚರಿಸಲಿರುವ ವಂದೇ ಭಾರತ್​ ರೈಲು ನಿಲುಗಡೆಗೆ ಚಾಲನೆ ಕೊಡುತ್ತಿದ್ದೇವೆ. ಮುಂದಿನ 15 ದಿನಗಳಲ್ಲಿ ಗದಗ-ವಾಡಿ-ಕುಷ್ಠಗಿ-ಯಲಬುರ್ಗಿ ಮಾರ್ಗವು ಪೂರ್ಣಗೊಂಡಿದ್ದು ಈ ಮಾರ್ಗವನ್ನು ರೈಲು ಸಂಚಾರಕ್ಕೆ ಲೋಕಾರ್ಪಣೆ ಮಾಡಲಾಗುವುದು ಸಚಿವ ಸೋಮಣ್ಣ ಹೇಳಿದರು.

ರಾಜ್ಯದಲ್ಲಿ 1900 ಕೋಟಿ ರೂ. ವೆಚ್ಚದಲ್ಲಿ 61 ಅಮೃತ್​ ಭಾರತ್​ ರೈಲ್ವೆ ಸ್ಟೇಷನ್​ಗಳ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಇದರಲ್ಲಿ 16 ಕೋಟಿ ರೂ., ವೆಚ್ಚದಲ್ಲಿ ಗುಬ್ಬಿ ಹಾಗೂ 24 ಕೋಟಿ ರೂ.. ವೆಚ್ಚದಲ್ಲಿ ತಿಪಟೂರು ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿ ಪಡಿಸಲಾಗುವುದು. ಅಲ್ಲದೆ 89 ಕೋಟಿ ರೂ. ವೆಚ್ಚದಲ್ಲಿ ತುಮಕೂರು ನಗರದ ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

ಕರ್ನಾಟಕದಲ್ಲಿ ರೈಲ್ವೆ ಯುಗ! : ಭಾರತದ ರೈಲ್ವೆ ವ್ಯವಸ್ಥೆಯನ್ನು ಮತ್ತಷ್ಟು ಆಧುನೀಕರಿಸುವ ಹಾಗೂ ರೈಲ್ವೆ ಪ್ರಯಾಣಿಕರಿಗೆ ಉತ್ತಮ ಸೇವೆ ಮತ್ತು ಸುರಕ್ಷತೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗಿದೆ. ಕರ್ನಾಟಕದಲ್ಲಿ ರೈಲ್ವೆ ಹೊಸ ಯುಗ ಆರಂಭವಾಗಿದ್ದು ನನೆಗುದಿಗೆ ಬಿದ್ದಿದ್ದ ರೈಲ್ವೆ ಯೋಜನೆಗಳಿಗೆ ಸಚಿವರಾದ ಬಳಿಕ ವೇಗ ನೀಡಲಾಗಿದೆ. ಒಟ್ಟಾರೆ ರಾಜ್ಯದಲ್ಲಿ 33 ಸಾವಿರ ಕೋಟಿ ರೂ.,ಗಳನ್ನು ರೈಲ್ವೆ ಯೋಜನೆಗಳಿಗೆ ಬಳಸಲಾಗುತ್ತಿದೆ ಎಂದು ಸೋಮಣ್ಣ ಹೇಳಿದರು.

ಜಿಲ್ಲೆಯಲ್ಲಿ 650 ಕೋಟಿ ರೂ., ವೆಚ್ಚದ 22 ರೈಲ್ವೆ ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದರಲ್ಲಿ 10 ಕಾಮಗಾರಿಗೆ ಚಾಲನೆ ನೀಡಲಾಗಿದೆ. ತುಮಕೂರು ಲೋಕಸಭಾಕ್ಷೇತ್ರದಲ್ಲಿ ಒಂದೇ ಒಂದು ರೈಲ್ವೆ ಗೇಟ್​ ಇಲ್ಲದಂತೆ ಮೇಲ್ಸೇತುವೆ ನಿರ್ಮಾಣ ಮಾಡುವ ಸಂಕಲ್ಪ ಮಾಡಿದ್ದು ಜನರಿಗೆ ಯಾವುದೇ ರೀತಿಯಲ್ಲು ತೊಂದರೆಯಾಗದಂತೆ ಕ್ರಮವಹಿಸಲಾಗಿದೆ ಎಂದರು.

ನಗರ ಶಾಸಕ ಜಿ.ಬಿ. ಜ್ಯೋತಿ ಗಣೇಶ್​ ಮಾತನಾಡಿ, ಸೋಮಣ್ಣ ತುಮಕೂರಿನ ಲೋಕಸಭಾ ಸದಸ್ಯ ಮತ್ತು ಕೇಂದ್ರದ ಸಚಿವರಾಗಿ ಅಧಿಕಾರ ವಹಿಸಿಕೊಂಡ 6 ತಿಂಗಳೊಳಗಾಗಿ ನೂರಾರು ಕೋಟಿ ರೂ. ಗಳ ಅನುದಾನವನ್ನು ನಗರದ ಅಭಿವೃದ್ಧಿಗೆ ತಂದುಕೊಟ್ಟಿದ್ದಾರೆ. ಈಗ ಕೈಗೆತ್ತಿಕೊಂಡಿರುವ ರೈಲ್ವೆ ಮೇಲ್ಸೇತುವೆ ನಿರ್ಮಾಣ ಯೋಜನೆಗಳಿಗೆ ಒಂದೇ ಒಂದು ನಯಾಪೈಸೆ ರಾಜ್ಯ ಸರ್ಕಾರದ ನೆರವು ಪಡೆದಿಲ್ಲ. ಪೂರ್ಣಪ್ರಮಾಣವಾಗಿ ಕೇಂದ್ರ ಸರ್ಕಾರದ ಅನುದಾನದಲ್ಲಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮಾಂತರ ಶಾಸಕ ಬಿ.ಸುರೇಶ್​ ಗೌಡ, ಪಾಲಿಕೆ ಆಯುಕ್ತಿ ಬಿ.ವಿ ಅಶ್ವಿಜ, ತುಮಕೂರು ತಹಶೀಲ್ದಾರ್​ ರಾಜೇಶ್ವರಿ, ನೈರುತ್ಯ ರೈಲ್ವೆ ನಿಮಾರ್ಣದ ಮುಖ್ಯ ಆಡಳಿತ ಅಧಿಕಾರಿ ಅಜಯ್​ ಶರ್ಮ, ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಮಿತೇಶ್​ ಕುಮಾರ್​ ಸಿನ್ಹಾ, ಅಪರ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪರೀಕ್ಷಿತ್​ ಮೋಹನ್​ ಪುರಿಯ, ಮುಖ್ಯ ಇಂಜಿನಿಯರ್​ ನೈರುತ್ಯ ರೈಲ್ವೆ ನಿಮಾರ್ಣ ಅಧಿಕಾರಿ ಪ್ರದಿಪ್​ ಪೂರಿ, ದಿಶಾ ಸಮಿತಿ ಸದಸ್ಯ ವೈ.ಎಚ್​. ಹುಚ್ಚಯ್ಯ, ಮಾಜಿ ಮೇಯರ್​ ಬಿ.ಜಿ.ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net