

ಮದ್ದೂರು: ಮನ್ ಮುಲ್‌ನಲ್ಲಿ ನಡೆದಿರುವ ಹಾಲಿನ ಪುಡಿ ಕಲಬೆರಕೆ, ಹಾಲು ನೀರು ಹಗರಣ, ಮೆಗಾ ಡೇರಿ ನೇಮಕಾತಿಯಲ್ಲಿನ ಅಕ್ರಮಗಳನ್ನು ಸಿಬಿಐ ತನಿಖೆಗೆ ವಹಿಸುವಂತೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಪ್ರಧಾನ ಮಂತ್ರಿ ಹಾಗೂ ಕೇಂದ್ರ ಸಚಿವರಿಗೆ ರಿಜಿಸ್ಟರ್ ಪೋಸ್ಟ್ ಮಾಡುವ ಮೂಲಕ ಪತ್ರ ಚಳವಳಿ ನಡೆಸಿದರು.
ನಗರದ ಅಂಚೆ ಕಚೇರಿ ಬಳಿ ಸೋಮವಾರ ಜಮಾಯಿಸಿದ ಕಾರ್ಯಕರ್ತರು ಮನ್‌ಮುಲ್‌ನಲ್ಲಿ ನಡೆಸಿರುವ ಭ್ರಷ್ಟಾಚಾರಕ್ಕೆ ಪಾಲುದಾರರಾಗಿರುವವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿ, ಭ್ರಷ್ಟಾಚಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ವೇದಿಕೆಯ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ ಮಾತನಾಡಿ, ಮಂಡ್ಯ ಜಿಲ್ಲಾ ಹಾಲು ಒಕ್ಕೂಟಕ್ಕೆ ಭವ್ಯ ಇತಿಹಾಸವಿದೆ 80-90ರ ದಶಕದಲ್ಲಿ ಸ್ಥಾಪಿತಗೊಂಡ ಸಂಸ್ಥೆ ವಿಶ್ವ ಮಟ್ಟದಲ್ಲಿ ತನ್ನ ಉತ್ಪನ್ನಗಳಿಗೆ ಹೆಸರು ಪಡೆದು ಪ್ರಸಿದ್ಧಿಯಾಗಿದೆ ಎಂದರು.
ಹಾಲಿನ ಪುಡಿ, ಬೆಣ್ಣೆ ಮತ್ತು ತುಪ್ಪ ಪೇಡಾ ಸೇರಿದಂತೆ ಅನೇಕ ರೀತಿಯ ಉತ್ಪನ್ನಗಳು ಭಾರತೀಯ ಸೇನೆಗೆ ಸರಬರಾಜು ಹಾಗೂ ತಿರುಪತಿ ತಿಮ್ಮಪ್ಪನಿಗೆ ಲಡ್ಡು ತಯಾರಿಸಲು ತುಪ್ಪ ಒದಗಿಸುತ್ತಿರುವ ಕೀರ್ತಿ ಮನ್ ಮುಲ್‌ಗಿದೆ. ಪ್ರತಿನಿತ್ಯ 12 ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸುವ ಮೂಲಕ ದಾಖಲೆ ನಿರ್ಮಿಸಿದೆ ಎಂದರು.
ಆದರೆ, ಒಕ್ಕೂಟದಲ್ಲಿ ಹಾಲಿಗೆ ನೀರು ಬೆರೆಸುವ ಹಗರಣ, ನೇಮಕಾತಿಯಲ್ಲಿ ಭ್ರಷ್ಟಾಚಾರ ಇತ್ತೀಚೆಗೆ ಹಾಲಿನ ಪುಡಿಗೆ ಕಲಬೆರಕೆ ಪುಡಿ ಬೆರೆಸಿ 100 ಕೋಟಿಗೂ ಅಧಿಕ ಭಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದರೂ ಸಹ ಕಾನೂನು ಕ್ರಮ ಕೈಗೊಳ್ಳಲು ವಿಳಂಬವಾಗಿರುವುದನ್ನು ವೇದಿಕೆ ತೀವ್ರವಾಗಿ ಖಂಡಿಸುತ್ತದೆ ಎಂದರು.
ತಾಲೂಕು ಅಧ್ಯಕ್ಷ ತಿಪ್ಪೂರು ರಾಜೇಶ್ ಮಾತನಾಡಿ, ಆಹಾರ ಸುರಕ್ಷತೆಯ ನಿರ್ವಹಣಾ ವ್ಯವಸ್ಥೆಯ ಲೋಪ ಘನ ಘೋರ ಅಪರಾಧವಾಗಿದೆ. ಇದಕ್ಕೆ ಕಾರಣಕರ್ತರನ್ನು ಕೂಡಲೇ ಕಾನೂನಿಗೆ ಒಳಪಡಿಸಿ ಸಿಬಿಐ ತನಿಖೆಯ ಮೂಲಕ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಹಾಗಿರುವ ನಷ್ಟವನ್ನು ಒಕ್ಕೂಟಕ್ಕೆ ತುಂಬಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವೇದಿಕೆಯ ಯುವ ಘಟಕ ರಾಜ್ಯಾಧ್ಯಕ್ಷ ಮಳವಳ್ಳಿ ಶ್ರೀನಿವಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ.ಲಿಂಗರಾಜು, ತಾಲೂಕು ಅಧ್ಯಕ್ಷ ತಿಪ್ಪೂರು ರಾಜೇಶ, ಯುವ ಘಟಕ ಅಧ್ಯಕ್ಷ ವಿ.ಪಿ.ವಿಶ್ವಾಸ್, ಗೌರವ ಅಧ್ಯಕ್ಷರುಗಳಾದ ವಿ.ಎಚ್.ಶಿವಲಿಂಗಯ್ಯ, ಪಟೇಲ್ ಹರೀಶ್, ಎಂ.ವೀರಪ್ಪ, ಉಮೇಶ್, ಕುಳ್ಳಪ್ಪ, ಶೇಖರ್, ಸಿದ್ದರಾಮ, ದಿನೇಶ್, ಶಿವಲಿಂಗಯ್ಯ, ರಾಮಣ್ಣ, ಚೇತನ್, ಮಹೇಂದ್ರ ರೈತ ಮುಖಂಡರಾದ ಕುದುರಗುಂಡಿ ನಾಗರಾಜು, ವೀರಪ್ಪ, ಚನ್ನೇಶ್ ಇದ್ದರು.
05ಎಂಡಿಆರ್1