ಶ್ರೀರಂಗಪಟ್ಟಣ: ನೈಸ್ ವಿಚಾರದಲ್ಲಿ ರಾಜ್ಯ ಸರ್ಕಾರ ನ್ಯಾಯಾಲಯದ ನಿರ್ದೇಶನಗಳನ್ನ ಅನುಷ್ಠನಾಗೊಳಿಸಿದೆಯೇ ಎಂಬುದನ್ನು ಮೊದಲು ಸಿಎಂ ಸ್ಪಷ್ಟ ಪಡಿಸಬೇಕು. ಇಲ್ಲಿ ನಾನು ಯಾರನ್ನೂ ಬ್ಲ್ಯಾಕ್‌ಮೇಲ್ ಮಾಡುವ ಅವಶ್ಯಕತೆ ಇಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ತಿರುಗೇಟು ನೀಡಿದರು.
ಪಟ್ಟಣದಲ್ಲಿ ಸೋಮವಾರ ನೂತನವಾಗಿ ಕಾರ್ಯಾರಂಭಗೊಂಡ ಎಚ್‌ಡಿಎಫ್‌ಸಿ ಬ್ಯಾಂಕ್ ಉದ್ಘಾಟಿಸಿ ಬಳಿಕ ಅವರು ಮಾತನಾಡಿದರು.
ನೈಸ್ ರಸ್ತೆ ಯೋಜನೆಗೆ ಸಂಬಂಧಿಸಿದಂತೆ ಟೋಲ್ ಸಂಗ್ರಹ ಸೇರಿದಂತೆ ಹಲವು ವಿಚಾರಗಳನ್ನು ನಾನು ಈ ಹಿಂದೆ ಪ್ರಶ್ನಿಸಿದ್ದೇನೆ. ಸರ್ಕಾರ ಯೋಜನೆಗೆ ಸಂಬಂಧಿಸಿದ ನ್ಯಾಯಾಲಯದ ನಿರ್ದೇಶನಗಳನ್ನು ಅನುಷ್ಠಾನಗೊಳಿಸುತ್ತಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು. ಅಲ್ಲದೆ ನೈಸ್ ಯೋಜನೆಗೆ ಸಂಬಂಧಿಸಿದಂತೆ ನ್ಯಾಯಾಲಯಗಳು ನೀಡಿರುವ ತೀರ್ಪು ಹಾಗೂ ನಿರ್ದೇಶನಗಳನ್ನು ಗಮನಿಸಬೇಕು. ನಾಡಿನ ಸಂಪತ್ತಿನ ರಕ್ಷಣೆಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಆದರೆ ನ್ಯಾಯಾಲಯದ ಆದೇಶಗಳಲ್ಲಿ ಉಲ್ಲೇಖವಾಗಿರುವ ಅಂಶಗಳನ್ನು ಮರೆಮಾಚುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಈ ವಿಚಾರವಾಗಿ ಮುಂದಿನ ದಿನಗಳಲ್ಲಿ ಮಾಧ್ಯಮಗಳ ಮುಂದೆ ಮತ್ತಷ್ಟು ಮಾಹಿತಿ ನೀಡುವುದಾಗಿ ಕುಮಾರಸ್ವಾಮಿ ತಿಳಿಸಿದರು.
ಶಾಸಕ ಕದಲೂರು ಉದಯ್ ಹಾಗೂ ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಎಚ್‌ಡಿಕೆ, ಪಿಕ್ ಪಾಕೆಟ್ ಮಾಡುವವರು ಹಾಗೂ ಯುವಕರನ್ನು ದಾರಿ ತಪ್ಪಿಸಿ, ಆನ್‌ಲೈನ್ ಮಟ್ಕಾ ದಂಧೆ ನಡೆಸುವವರ ಬಗ್ಗೆ ನಾನು ಉತ್ತರಿಸಬೇಕೇ? ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾಂಗ್ರೆಸ್ ಸಿಇಒ ಬದಲಾವಣೆ ಸಾಧ್ಯವೇ: ಕೇಂದ್ರ ಮುಖ್ಯ ಚುನಾವಣಾಧಿಕಾರಿ ಬದಲಾವಣೆ ಕುರಿತ ಚರ್ಚೆಗೂ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ನಾಯಕರು ಹೇಳಿದಂತೆ ಮುಖ್ಯ ಚುನಾವಣಾಧಿಕಾರಿಯನ್ನು ಬದಲಾವಣೆ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಎಸ್‌ಐಆರ್ ಪ್ರಕ್ರಿಯೆ ಕುರಿತು ಈಗಾಗಲೇ ಚುನಾವಣಾ ಆಯೋಗದಿಂದ ವಿವಿಧ ಮಾಹಿತಿ ಹೊರಬಂದಿದ್ದು, ಸೆಪ್ಟೆಂಬರ್ ಆರಂಭದ ವೇಳೆಗೆ ಲಕ್ಷಾಂತರ ನೋಟಿಸ್‌ಗಳನ್ನು ಸಿದ್ಧಪಡಿಸಿ ಮತದಾರರಿಗೆ ವಿತರಿಸಲಾಗುತ್ತಿದೆ ಎಂದರು.
ಶಾಸಕ ಎಚ್.ಟಿ ಮಂಜು, ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ, ಜೆಡಿಎಸ್ ಮುಖಂಡ ರಾಮಚಂದ್ರು, ಜಿಲ್ಲಾಧ್ಯಕ್ಷ ಡಿ.ರಮೇಶ್, ತಾಲೂಕು ಅಧ್ಯಕ್ಷ ದಶರಥ್, ಯುವ ಜೆಡಿಎಸ್ ಮುಖಂಡ ಕಡತನಾಳು ಸಂಜಯ್, ಮುಖಂಡರಾದ ಶಿವಸ್ವಾಮಿ, ಪುರಸಭಾ ಮಾಜಿ ಸದಸ್ಯರಾದ ಎಸ್.ಪ್ರಕಾಶ್, ಸಾಯಿಕುಮಾರ್, ಕಾಯಿ ವೆಂಕಟೇಶ್, ಕೆ.ಶೆಟ್ಟಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಬೋರಪ್ಪ, ಬೆಳಗೊಳ ಸುರೇಶ್, ಪೈ.ಮುಕುಂದ, ಟೆಂಪೊ ಪ್ರಕಾಶ್ ಇತರರು ಇದ್ದರು.
ಈಗಿನ ಸರ್ಕಾರದ ನಡುವಳಿಕೆಯನ್ನ ಜನ ಗಮನಿಸುತ್ತಿದ್ದಾರೆ. ನಾನು ರಾಜ್ಯಕ್ಕೆ ಬರಬೇಕು ಅನ್ನೋದು ಜನರ ದೊಡ್ಡ ಮಟ್ಟದ ಕೂಗಿದೆ. ನಮ್ಮ ಪಕ್ಷದ ಅಭಿಮಾನಿಗಳಲ್ಲದೆ, ಬೇರೆ ಪಕ್ಷದವರ ಭಾವನೆ ಕೂಡ ಇದೇ ಆಗಿದೆ. ಈ ಬಗ್ಗೆ ಸೂಕ್ತವಾದ ಸಮಯದಲ್ಲಿ ನಿರ್ಧಾರ ಮಾಡುತ್ತೇನೆ. ಕೇಂದ್ರದಲ್ಲಿ ಇದ್ದರೂ ರಾಜ್ಯದ ಗಮನದಿಂದ ಹಿಂದೆ ಸರಿದಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ರೈತರ ಸಮಸ್ಯೆ, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದೇನೆ. ರಾಜ್ಯದಲ್ಲಿ ಸಾಕಷ್ಟು ಅಕ್ರಮ ನಡೆಯುತ್ತಿದ್ದು, ದಾಖಲೆ ಸಮೇತ ಭ್ರಷ್ಟಾಚಾರದ ಬಗ್ಗೆ ಹೇಳಬಲ್ಲೆ. ಮುಂದಿನ ದಿನಗಳಲ್ಲಿ ಜನರೇ ಎಲ್ಲವನ್ನ ಗಮನಿಸುತ್ತಾರೆ ಎಂದು ತಿಳಿಸಿದರು.