ದೊಡ್ಡಬ್ಯಾಡರಹಳ್ಳಿ ಗೋಶಾಲೆ ಎದುರು ಪ್ರತಿಭಟನೆ

ಕೋರ್ಟ್ ಆದೇಶವಿದ್ದರೂ ಹಸುಗಳನ್ನು ನೀಡದ್ದಕ್ಕೆ ಆಕ್ರೋಶ
ಪಾಂಡವಪುರ ತಾಲೂಕಿನ ದೊಡ್ಡಬ್ಯಾಡರಹಳ್ಳಿ ಗ್ರಾಮದ ಹೊರವಲಯದಲ್ಲಿ ಇರುವ ಚೈತ್ರ ಗೋಶಾಲೆಗೆ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.
ಪಾಂಡವಪುರ ತಾಲೂಕಿನ ದೊಡ್ಡಬ್ಯಾಡರಹಳ್ಳಿ ಗ್ರಾಮದ ಹೊರವಲಯದಲ್ಲಿ ಇರುವ ಚೈತ್ರ ಗೋಶಾಲೆಗೆ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.
Published on: 

ಪಾಂಡವಪುರ: ಗೋಶಾಲೆಗೆ ಪೊಲೀಸರು ಬಿಟ್ಟಿರುವ ಹಸುಗಳನ್ನು ವಾಪಸ್ ರೈತರಿಗೆ ನೀಡುವಂತೆ ಕೋರ್ಟ್ ಆದೇಶವಿದ್ದರೂ ಸಹ ಹಸುಗಳನ್ನು ನೀಡಿದ ಹಿನ್ನೆಲೆಯಲ್ಲಿ ರೈತ ಸಂಘದ ಕಾರ್ಯಕರ್ತರು ತಾಲೂಕಿನ ದೊಡ್ಡಬ್ಯಾಡರಹಳ್ಳಿ ಗ್ರಾಮದ ಹೊರವಲಯದಲ್ಲಿ ಇರುವ ಚೈತ್ರ ಗೋಶಾಲೆಗೆ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಚೈತ್ರ ಗೋಶಾಲೆಯ ಎದುರು ಜಮಾಹಿಸಿದ ರೈತ ಸಂಘದ ಕಾರ್ಯಕರ್ತರು ಚೈತ್ರ ಗೋಶಾಲೆಯ ಮಾಲೀಕರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.

ರೈತ ಸಂಘದ ಕಾರ್ಯಕರ್ತರು, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಮಂಜುನಾಥ್, ಸಹಾಯಕ ನಿರ್ದೇಶಕ ಶಿವಯ್ಯ ಹಾಗೂ ಪೊಲೀಸರು ಬಂದರೂ ಗೋಶಾಲೆಯ ಬಾಗಿಲು ತೆಗೆಯದ ಕಾರಣ ರೈತಸಂಘದ ಕಾರ್ಯಕರ್ತರು ಗೇಟ್ ಮುಂದೆಯೇ ಟೆಂಟ್ ಹಾಕಿ ಪ್ರತಿಭಟನೆ ನಡೆಸಿದರು. ರೊಚ್ಚಿಗೆದ್ದ ರೈತಸಂಘದ ಕಾರ್ಯಕರ್ತರು ಗೇಟ್ ಬಾಗಿಲು ಮುರಿದು ಒಳನುಗ್ಗಿದರು. ಗೋಶಾಲೆಯ ಒಳಗೆ ಹೋದಾಗ ಹಸುಗಳು ಕಾಲುಮುರಿದಿರುವ ಹಸುಗಳು, ಕರುಳು ಹೊರಗಡೆ ಬಂದಿರುವ, ಅನಾರೋಗ್ಯಕ್ಕೆ ಒಳಗಾಗಿರುವ ಹಸುಗಳು, ಮೇವೇ ಇಲ್ಲದೆ ಬಳಲುತ್ತಿರುವ ಹಸುಗಳನ್ನು ಕಂಡು ಗೋಶಾಲೆಯ ಮಾಲೀಕರ ವಿರುದ್ಧ ಆಕ್ರೋಶ ಹೊರಹಾಕಿದರು.

ರೈತಸಂಘದ ಮುಖಂಡ ಜಗದೀಶ್ ಮಾತನಾಡಿ, ಕಳೆದ ಸೆ.4ರಂದು ಹುಣಸೂರು ತಾಲೂಕಿನ ದೊಡ್ಡೇಗೌಡನಕೊಪ್ಪಲು ಗ್ರಾಮದ ರೈತರಾದ ಸಣ್ಣೇಗೌಡ, ಸ್ವಾಮೀಗೌಡ ಎಂಬುವರು ಚನ್ನರಾಯಪಟ್ಟಣ ಸಂತೆಯಲ್ಲಿ ಹಾಲು ಕರೆಯುವ ನಾಲ್ಲು ಹಸು, ಒಂದು ಕರು ಹಾಗೂ ಉಳುಮೆ ಮಾಡುವ ಎರಡು ಹೋರಿಗಳನ್ನು ಖರೀದಿಸಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಕೆ.ಆರ್.ಪೇಟೆ ಬಳಿ ಜಲ್ಸೂರು ಮುಖ್ಯರಸ್ತೆಯಲ್ಲಿ ಬಜರಂಗದಳದ ಕಾರ್ಯಕರ್ತರು ಅಡ್ಡಗಟ್ಟಿ ಹಸುಗಳನ್ನು ಖಸಾಯಿ ಖಾನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆಂದು ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ. ರೈತರು ಹಸು ಖರೀದಿಸಿರುವುದಕ್ಕೆ ಸೂಕ್ತ ದಾಖಲೆ ನೀಡಿದ್ದಾರೆ. ಜತೆಗೆ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಇವು ಹಾಲು ಕರೆಯುವ ಹಸುಗಳು ಎಂದು ಧೃಡೀಕರಿಸಿದರೂ ಪೊಲೀಸರು ದೂರು ದಾಖಲಿಸಿಕೊಂಡು ಹಸುಗಳನ್ನು ಚೈತ್ರ ಗೋಶಾಲೆಗೆ ಬಿಟ್ಟಿದ್ದಾರೆ. ಆ ಬಳಿಕ ಹಸುವಿನ ಮಾಲೀಕರು ಕೋರ್ಟ್ ಮೆಟ್ಟಿಲೇರಿ ಹಸುಗಳ ನಿರ್ವಹಣೆ ಮಾಡಿರುವುದಕ್ಕೆ ಕೋರ್ಟ್‌ಗೆ 29 ಸಾವಿರ ರೂ. ಕೊಟ್ಟು ಹಸುಗಳ ಬಿಡುಗಡೆಗೆ ಅನುಮತಿ ತಂದರೂ ಚೈತ್ರ ಗೋಶಾಲೆಯ ಮಾಲೀಕರು ಹಸುಗಳನ್ನು ಬಿಡುಗಡೆ ಮಾಡಲು ನಿರಾಕರಿಸಿ, ಕೋರ್ಟ್ ಆದೇಶ ಉಲ್ಲಂಘಿಸಿದ್ದಾರೆ ಎಂದು ಕಿಡಿಕಾರಿದರು.

ಚೈತ್ರ ಗೋಶಾಲೆಯವರು ಹಸುಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಇಲ್ಲಿನ ಹಸುಗಳನ್ನು ಅಕ್ರಮವಾಗಿ ಹೊರರಾಜ್ಯಗಳ ಖಸಾಯಿಖಾನೆಗೆ ಸಾಗಾಣಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕೆನ್ನಾಳು ವಿಜಿಕುಮಾರ್ ಮಾತನಾಡಿ, ಚೈತ್ರ ಗೋಶಾಲೆಯವರು ಹಸುಗಳನ್ನು ಸರಿಯಾಗಿ ನಿರ್ಣಹಣೆ ಮಾಡುತ್ತಿಲ್ಲ. ಅಧಿಕಾರಿಗಳು ಬಂದರೂ ಬಾಗಿಲು ತೆಗೆಯುತ್ತಿಲ್ಲ. ಹಾಗಾಗಿ ಚೈತ್ರ ಗೋಶಾಲೆಯ ಅನುಮತಿಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆ ಸ್ಥಳಕ್ಕೆ ತಹಸೀಲ್ದಾರ್ ಆದರ್ಶ ಸೇರಿದಂತೆ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಆಗಮಿಸಿ ಸಮಸ್ಯೆ ಆಲಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ಮಂಜುನಾಥ್, ಮುಖಂಡರಾದ ಕೆ.ಟಿ.ಗೋವಿಂದೇಗೌಡ, ಮಾಕೇಗೌಡ, ರಘು, ನುಗ್ಗಹಳ್ಳಿ ಸುದರ್ಶನ್, ಗಿರಿಯಾರಹಳ್ಳಿ ಮೂರ್ತಿ, ಅಮೃತಿ ರಾಜಶೇಖರ್, ತಿಮ್ಮೇಗೌಡ, ರೂಪಾ ನಿತಿನ್, ಹಾಳಯ್ಯ ಸೇರಿದಂತೆ ಹಲವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net