

ಕೆ.ಆರ್.ಪೇಟೆ: ರೈತರ ಕೃಷಿಭೂಮಿ ಒತ್ತುವರಿ ಮಾಡಿಕೊಂಡು ದಬ್ಬಾಳಿಕೆ ನಡೆಸಿ, ಬೇಸಾಯ ಮಾಡುತ್ತಿರುವವರಿಗೆ ಜೀವ ಬೆದರಿಕೆ ಹಾಕುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆ ಕೆ.ಆರ್.ಪೇಟೆ ತಾಲೂಕು ಘಟಕದ ಅಧ್ಯಕ್ಷ ಟೆಂಪೋ ಶ್ರೀನಿವಾಸ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಗ್ರಹಾರಬಾಚಹಳ್ಳಿ ಗ್ರಾಮದ ರೈತರು ಆಗ್ರಹಿಸಿದ್ದಾರೆ.
ಅಗ್ರಹಾರಬಾಚಹಳ್ಳಿ ಗ್ರಾಮದ ಸರಹದ್ದಿನ ಬಿ.ಕೋಡಿಹಳ್ಳಿ ಗ್ರಾಮದ ಸರ್ವೇ ನಂ.1ರಲ್ಲಿ 32 ಎಕರೆಗೂ ಹೆಚ್ಚು ಗೋಮಾಳ ಸೇರಿದಂತೆ ಸರ್ಕಾರಿ ಭೂಮಿಯಿದೆ. 1961-62ನೇ ಸಾಲಿನಲ್ಲಿ ಕಂದಾಯ ಇಲಾಖೆಯು 15ಕ್ಕೂ ಹೆಚ್ಚು ಬಡ ರೈತರಿಗೆ ದರಖಾಸ್ತು ಮೂಲಕ ಭೂಮಿ ಮಂಜೂರು ಮಾಡಿತ್ತು. ಅಂದಿನಿಂದ ರೈತರು ಕಬ್ಬು, ಭತ್ತ, ತೆಂಗು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದು ಜೀವನ ನಡೆಸುತ್ತಿದ್ದಾರೆ ಎಂದು ರೈತರು ತಿಳಿಸಿದ್ದಾರೆ.
ಇತ್ತೀಚೆಗೆ ಟೆಂಪೋ ಶ್ರೀನಿವಾಸ್ ಅವರು ತಾವು ಸಾಗುವಳಿ ಮಾಡುತ್ತಿರುವ ಜಮೀನಿನ ಬಗ್ಗೆ ತಕರಾರು ತೆಗೆದು ಬೇಸಾಯಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಭೂಮಿ ತಮಗೆ ಸೇರಿದ್ದು, ರೈತರಿಗೆ ಯಾವುದೇ ಹಕ್ಕಿಲ್ಲ ಎಂದು ಹೇಳಿ ಕಿರುಕುಳ ನೀಡುತ್ತಿದ್ದಾರೆ. ಜಮೀನಿಗೆ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕುವುದರ ಜತೆಗೆ ಸೈಜುಗಲ್ಲುಗಳನ್ನು ಎತ್ತಿ ಹಾಕಿ ಆತಂಕ ಸೃಷ್ಟಿಸುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಸಾಗುವಳಿ ಭೂಮಿಯ ದಾಖಲೆಗಳನ್ನು ಪರಿಶೀಲಿಸಿ, ಕಾನೂನುಬದ್ಧವಾಗಿ ಮಂಜೂರಾಗಿರುವ ಜಮೀನಿನ ಹಕ್ಕು ರಕ್ಷಿಸಬೇಕು. ಒತ್ತುವರಿಯಾಗಿದ್ದರೆ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಜೀವ ಬೆದರಿಕೆ ಆರೋಪದ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂಬಂಧ ತಹಸೀಲ್ದಾರ್, ಪೊಲೀಸ್ ಇನ್‌ಸ್ಪೆಕ್ಟರ್, ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಹಾಗೂ ಶಾಸಕ ಎಚ್.ಟಿ. ಮಂಜು ಅವರಿಗೆ ದೂರು ಸಲ್ಲಿಸಿರುವ ರೈತರ ನಿಯೋಗ, ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದೆ.
ನಿಯೋಗದಲ್ಲಿ ರೈತರಾದ ಗುರುಮೂರ್ತಾಚಾರ್, ವೇಣುಗೋಪಾಲ್, ನಟೇಶ, ರಾಜಗೋಪಾಲ್, ಮಂಚಮ್ಮ, ಶಂಕರಶೆಟ್ಟಿ, ಕೃಷ್ಣಶೆಟ್ಟಿ, ಭದ್ರಶೆಟ್ಟಿ, ವೀರಭದ್ರಶೆಟ್ಟಿ, ಹರೀಶ್, ಗೌಡಸ್ವಾಮಿ, ರಾಜಕುಮಾರ, ಕುಂದೂರು ಶೆಟ್ಟಿ, ಭಾರತಿ, ಅಣ್ಣಯ್ಯ ಶೆಟ್ಟಿ, ಮಂಜುಳಾ, ಸುಂದರಮ್ಮ ಮತ್ತಿತರರು ಇದ್ದರು.