ವಡ್ಡರಹಟ್ಟಿಯಲ್ಲಿ ನ್ಯಾಯಬೆಲೆ ಉಪಕೇಂದ್ರ ಆರಂಭ

ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ ಉದ್ಘಾಟನೆ
ಉದ್ಘಾಟನೆ
ನಾಗಮಂಗಲ ತಾಲೂಕಿನ ವಡ್ಡರಹಟ್ಟಿ ಗ್ರಾಮದಲ್ಲಿ ಸರ್ಕಾರಿ ನ್ಯಾಯಬೆಲೆ ಅಂಗಡಿಯ ಉಪಕೇಂದ್ರವನ್ನು ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚ್ಚಿನ್ ಚಲುವರಾಯಸ್ವಾಮಿ ಉದ್ಘಾಟಿಸಿದರು.ನಾಗಮಂಗಲ
Published on

ನಾಗಮಂಗಲ: ಗ್ರಾಮೀಣ ಪ್ರದೇಶದ ಬಡ ಜನರ ಅನುಕೂಲಕ್ಕಾಗಿ ನ್ಯಾಯಬೆಲೆ ಅಂಗಡಿ ಉಪಕೇಂದ್ರವನ್ನು ತೆರೆಯಲಾಗಿದ್ದು, ಈ ಭಾಗದ ಜನರು ಇನ್ನು ಮುಂದೆ ಅನ್ನಭಾಗ್ಯ ಯೋಜನೆಯ ಪಡಿತರ ಪದಾರ್ಥ ಪಡೆಯಲು ದೂರದ ಊರಿಗೆ ಹೋಗುವ ಅಗತ್ಯವಿಲ್ಲ ಎಂದು ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ ಹೇಳಿದರು.

ತಾಲೂಕಿನ ಬಿಂಡಿಗನವಿಲೆ ಹೋಬಳಿಯ ವಡ್ಡರಹಟ್ಟಿ ಗ್ರಾಮದಲ್ಲಿ ಸರ್ಕಾರಿ ನ್ಯಾಯಬೆಲೆ ಅಂಗಡಿಯ ಉಪಕೇಂದ್ರವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

ತಾಲೂಕಿನ ಬಿದರಕೆರೆ ನ್ಯಾಯಬೆಲೆ ಅಂಗಡಿ ವ್ಯಾಪ್ತಿಯ ವಡ್ಡರಹಟ್ಟಿ ಗ್ರಾಮವು 5-6 ಕಿ.ಮೀ.ದೂರವಿರುವುದರಿಂದ ಪ್ರತಿ ತಿಂಗಳು ಪಡಿತರ ಪದಾರ್ಥಗಳನ್ನು ಪಡೆಯಲು ಹೋಗಿಬರುವುದು ಕಷ್ಟವಾಗುತ್ತಿದೆ ಎಂದು ಸ್ಥಳೀಯರು ಹಾಗೂ ಕಾರ್ಡ್‌ದಾರರು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದ್ದರು. ಕಾರ್ಡ್‌ದಾರರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಚಿವರು ಇಲಾಖೆಯ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿ ಉಪಕೇಂದ್ರ ತೆರೆಯಲು ಕ್ರಮ ಕೈಗೊಂಡಿದ್ದಾರೆ ಎಂದರು.

ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಮೂಡ್ಲೀಗೌಡ ಮಾತನಾಡಿ, ಬಡ ಕೂಲಿ ಕಾರ್ಮಿಕರೇ ವಾಸಿಸುತ್ತಿರುವ ವಡ್ಡರಹಟ್ಟಿ, ಆಚಾರ್+ಪುರ ಮತ್ತು ಬ್ಯಾಡರಹಳ್ಳಿ ಗ್ರಾಮಗಳಲ್ಲಿ 150ಕ್ಕೂ ಹೆಚ್ಚು ಕುಟುಂಬಗಳಿವೆ. ಅನ್ನಭಾಗ್ಯ ಯೋಜನೆಯ ಪಡಿತರ ಪದಾರ್ಥ ಪಡೆಯಲು ಐದು ಕಿ.ಮೀ.ಗೂ ಹೆಚ್ಚು ದೂರವಿರುವ ಬಿದರಕೆರೆ ಗ್ರಾಮದ ನ್ಯಾಯಬೆಲೆ ಅಂಗಡಿಗೆ ಹೋಗಬೇಕಾದ ಪರಿಸ್ಥಿತಿ ನಿಮಾರ್ಣವಾಗಿತ್ತು. ಈ ಸಮಸ್ಯೆಗೆ ಪರಿಹಾರ ಸಿಗಬೇಕೆಂಬುದು ಇಲ್ಲಿನ ಜನರ ಬಹುವರ್ಷಗಳ ಬೇಡಿಕೆಯಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ತಾಲೂಕು ಗ್ಯಾರಂಟಿ ಯೋಜನೆ ಸಮಿತಿಗೆ ಈ ಗ್ರಾಮಗಳ ಜನರು ಮನವಿ ಸಲ್ಲಿಸಿದ್ದರಿಂದ ಕಾರ್ಡ್‌ದಾರರ ಅನುಕೂಲಕ್ಕಾಗಿ ವಡ್ಡರಹಟ್ಟಿ ಗ್ರಾಮದಲ್ಲಿ ಉಪಕೇಂದ್ರ ತೆರೆಯಲಾಗಿದೆ. ಪ್ರತಿ ನಿತ್ಯ ಬೆಳಿಗ್ಗೆ 7ರಿಂದ 10 ಹಾಗೂ ಸಂಜೆ 6ರಿಂದ 9 ಗಂಟೆವರೆಗೆ ಉಪಕೇಂದ್ರದಲ್ಲಿಯೇ ಮೂರು ಗ್ರಾಮಗಳ ಕಾರ್ಡ್‌ದರರಿಗೆ ಆಹಾರ ಪದಾರ್ಥ ವಿತರಿಸಲು ಕ್ರಮವಹಿಸುವಂತೆ ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ತಾಪಂ ಇಒ ಬಿ.ಎಸ್.ಸತೀಶ್, ಆಹಾರ ನಿರೀಕ್ಷಕ ಅನಿಲ್‌ಕುಮಾರ್ ಸೇರಿದಂತೆ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net