ಮದ್ದೂರು ನಗರದ ತಾಲೂಕು ಕಚೇರಿಯ ಶಾಸಕ ಕಚೇರಿಯಲ್ಲಿ ಶಾಸಕ ಕೆ.ಎಂ.ಉದಯ್ ಸ್ಥಳಿಯ ಸಾರ್ವಜನಿಕರ ಕುಂದು-ಕೊರತೆಗಳ ಅಹವಾಲು ಸ್ವೀಕರಿಸಿದರು. ಶಿವಕುಮಾರ್ ಬಿರಾದಾರ, ಬಸವರಾಜು, ಚಲುವರಾಜು, ರಾಮಲಿಂಗಯ್ಯ ಇದ್ದರು.
ನಗರದ ತಾಲೂಕು ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಸಾರ್ವಜನಿಕರ ಕುಂದು-ಕೊರತೆ ಪರಿಶೀಲನಾ ಸಭೆ ವೇಳೆ ಕಂದಾಯ, ಭೂಮಾಪನ, ಆಹಾರ ಮತ್ತು ಪಡಿತರ ವಿತರಣೆ, ಒತ್ತುವರಿ ತೆರವು ವಿವಿಧ ಭತ್ಯೆಗಳು ಸೇರಿದಂತೆ ಹತ್ತು ಹಲವು ವಿಚಾರಗಳ ಕುರಿತಾಗಿ ನೂರಕ್ಕೂ ಹೆಚ್ಚು ಮನವಿ ಪತ್ರಗಳು ಸಲ್ಲಿಕೆಯಾದವು.
ತಾಲೂಕು ಕಚೇರಿಯ ಶಾಸಕರ ಕಾರ್ಯಾಲಯದಲ್ಲಿ ಶಾಸಕ ಕೆ.ಎಂ.ಉದಯ ಮತ್ತು ತಹಸೀಲ್ದಾರ್ ಶಿವಕುಮಾರ್ ಬಿರಾದಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಾರ್ವಜನಿಕರು, ರೈತರು ಲಿಖಿತ ಅಹವಾಲು ಸಲ್ಲಿಸಿದರು.
ವೃದ್ಧಾಪ್ಯ ಸೇರಿದಂತೆ ಇತರ ವೇತನಗಳು, ಒತ್ತುವರಿ ತೆರವು, ಪರಿಸರ ಆಹಾರ ವಿತರಣೆ, ಭೂಮಾಪನ ಕಾರ್ಯ ವಿಳಂಬ ಒಳಗೊಂಡಂತೆ ಹತ್ತು ಹಲವು ಸಮಸ್ಯೆಗಳ ಕುರಿತಾಗಿ ಸಲ್ಲಿಕೆಯಾದ ಅರ್ಜಿಗಳ ಸಂಬಂಧ ಸ್ಥಳದಲ್ಲಿದ್ದ ತಹಸೀಲ್ದಾರ್ ಮತ್ತು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ಮೂಲಕ ಸ್ಥಳದಲ್ಲೇ ಕೆಲ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲಾಯಿತು.
ಉಳಿದ ಕೆಲವು ಅರ್ಜಿಗಳನ್ನು ಇಲಾಖಾವಾರು ಅಧಿಕಾರಿಗಳಿಗೆ ಹಸ್ತಾಂತರಿಸಿ ಶೀಘ್ರವೇ ಕ್ರಮವಹಿಸಲು ಸೂಚಿಸಲಾಯಿತು.
ಶಾಸಕ ಕೆ.ಎಂ.ಉದಯ್ ಮಾತನಾಡಿ, ತಾಲೂಕು ಮಟ್ಟದ ಅಧಿಕಾರಿಗಳು ರೈತರ ಹಾಗೂ ಸಾರ್ವಜನಿಕರ ಕೆಲಸಗಳನ್ನು ವಿಳಂಬ ಮಾಡದೆ ತ್ವರಿತಗತಿಯಲ್ಲಿ ಮಾಡಿಕೊಡಬೇಕು. ಅನಗತ್ಯವಾಗಿ ವಿಳಂಬ ಮಾಡಿದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಬಸವರಾಜು, ಡಿ.ಸಿ.ಸಿ.ಬ್ಯಾಂಕ್ ಉಪಾಧ್ಯಕ್ಷ ಚಲುವರಾಜು, ತಾಪಂ ಇಒ ರಾಮಲಿಂಗಯ್ಯ, ಸೇರಿದಂತೆ ಕಂದಾಯ, ಆಹಾರ, ಭೂಮಾಪನ ವಿಭಾಗದ ಅಧಿಕಾರಿಗಳು ಹಾಜರಿದ್ದರು.