ದೇಹವನ್ನು ಕೋಟೆಯಂತೆ ಬಲಪಡಿಸಿಕೊಳ್ಳಲಿ: ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಸಲಹೆ

ಮಂಡ್ಯ ನಗರದಲ್ಲಿ ಆಯೋಜಿಸಿದ್ದ ವಿಶ್ವ ಆರೋಗ್ಯ ದಿನಾಚರಣೆಯನ್ನು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಉದ್ಘಾಟಿಸಿದರು.
ಮಂಡ್ಯ ನಗರದಲ್ಲಿ ಆಯೋಜಿಸಿದ್ದ ವಿಶ್ವ ಆರೋಗ್ಯ ದಿನಾಚರಣೆಯನ್ನು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ವಿಶ್ವ ಆರೋಗ್ಯ ದಿನಾಚರಣೆ
  • ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಸರ್ಕಾರಿ ಮಹಿಳಾ ಕಾಲೇಜು, ಯುವ ರೆಡ್‌ಕ್ರಾಸ್ ಘಟಕದಿಂದ ಆಯೋಜನೆ
ಮಂಡ್ಯ: ಪ್ರತಿಯೊಬ್ಬರು ತಮ್ಮ ದೇಹವನ್ನು ಕೋಟೆ ರೀತಿಯಲ್ಲಿ ಬಲಪಡಿಸಿಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಸಲಹೆ ನೀಡಿದರು.
ನಗರದ ಸರ್ಕಾರಿ ಮಹಿಳಾ ಕಾಲೇಜಿ(ಸ್ವಾಯತ್ತ)ನಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಸರ್ಕಾರಿ ಮಹಿಳಾ ಕಾಲೇಜು, ಯುವ ರೆಡ್‌ಕ್ರಾಸ್ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಆರೋಗ್ಯ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯವಂತ ಮನುಷ್ಯನಿಂದ ಮಾತ್ರ ಸಧೃಡ ದೇಶ ಕಟ್ಟಲು ಸಾಧ್ಯ. ಆದ್ದರಿಂದ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಬೇಕು. ನಿತ್ಯ ವ್ಯಾಯಾಮ, ಸಮತೋಲನ ಆಹಾರ ಸೇವಿಸಬೇಕು ಎಂದರು. 
ಕಾಯಿಲೆಗಳಿಂದಲೂ ವಿಶ್ವವನ್ನು ಒಗ್ಗೂಡಿಸಲು ಸಾಧ್ಯ ಎಂಬುದನ್ನು ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ತಿಳಿಸಿಕೊಟ್ಟಿದೆ. ಕೋವಿಡ್ ನಂತರದ ದಿನಗಳೂ ಸಹ ಹೇಗೆಲ್ಲ ಇರಬೇಕು ಎಂದು ಅರಿಯುವುದರೊಂದಿಗೆ ಆರೋಗ್ಯದ ಪ್ರಭಾವ ಹೇಗಿರಬೇಕೆಂದು ತಿಳಿಯಿತು. ತಾಂತ್ರಿಕತೆ ಬೆಳೆದಂತೆಲ್ಲ ಹೊಸ ಸಂಶೋಧನೆಗಳು ನಡೆಯುತ್ತಿವೆ. ಇದರ ಪರಿಣಾಮ ಐಷಾರಾಮಿ ಜೀವನಕ್ಕೆ ಎಲ್ಲರೂ ಮಾರು ಹೋಗಿದ್ದೇವೆ. ಅದರಲ್ಲೂ ಮೊಬೈಲ್ ಬಂದ ನಂತರ ಜೀವನ ಶೈಲಿ ಯಾವ ರೀತಿ ಬದಲಾಯಿಸಿದೆ. ಇದರಿಂದ ನಾವು ಪಾಠ ಕಲಿತು ಒಳ್ಳೆಯ ಜೀವನ ಶೈಲಿಗೆ ವಾಪಾಸಾಗಬೇಕಿದೆ. ಒಳ್ಳೆಯದನ್ನು ಬಳಸುವುದು ತಪ್ಪಲ್ಲ. ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ಬರುವುದಕ್ಕಿಂತಲೂ ಮುನ್ನ ನಾವು ಅದರಿಂದ ಒಳ್ಳೆಯ ಪಾಠವನ್ನು ಕಲಿಯುತ್ತಿದ್ದೇವೆ ಎಂದು ಎಚ್ಚರಿಸಿದರು.
ರೆಡ್‌ಕ್ರಾಸ್ ಸಂಸ್ಥೆ ಪ್ರಾರಂಭವಾಗಿದ್ದೇ ಶುಶ್ರೂಷೆಯಿಂದ. ಎಲ್ಲಿ ಯುದ್ಧ ಆಗಲಿ ಅಲ್ಲಿ ರೆಡ್‌ಕ್ರಾಸ್ ಇರುತ್ತದೆ. ಅಂತಹ ಕಡೆ ಹೋಗಲು ರೆಡ್‌ಕ್ರಾಸ್‌ಗೆ ಯಾವುದೇ ನಿರ್ಬಂಧವಿರುವುದಿಲ್ಲ. ರೆಡ್‌ಕ್ರಾಸ್ ಎಲ್ಲೆಡೆ ತನ್ನ ಅಂತಃಕರಣ, ಮಾನವೀಯತೆಯನ್ನು ಹರಡುತ್ತಿದೆ. ಜೀವನ ಶೈಲಿಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಲ್ಲಿ ಎಲ್ಲ ರೀತಿಯಲ್ಲೂ ನಾವು ಆರೋಗ್ಯವಂತರಾಗಿರಲು ಸಾಧ್ಯವಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರ ಜೊತೆಗೆ ಸ್ವಚ್ಚ ಮತ್ತು ಸುಸ್ಥಿರ ಪರಿಸರ ನಿರ್ಮಾಣಕ್ಕೆ ನಾವೆಲ್ಲರೂ ಪಣ ತೊಡಬೇಕಾಗಿದೆ. ಪ್ರಸ್ತುತ ದಿನಗಳಲ್ಲಿ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಪರಿಸರಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕಾಗಿದೆ. ಪ್ರತಿಯೊಬ್ಬರೂ ಗಿಡ ನೆಟ್ಟು ಮರವನ್ನಾಗಿ ಬೆಳೆಸುವುದರೊಂದಿಗೆ ಪ್ರಕೃತಿಗೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ಧರಣ ವೆಲ್‌ನೆಸ್ ಸಂಸ್ಥಾಪಕಿ ಡಾ.ಎನ್.ಅಕ್ಷತಾ ಮಾತನಾಡಿ, ಇಂದು ಬದಲಾಗುತ್ತಿರುವ ಸಮಾಜದಲ್ಲಿ ಹೆಚ್ಚಾಗುತ್ತಿರುವ ರೋಗಗಳು ಅದರಲ್ಲಿಯೂ ದೈಹಿಕವಾಗಿ ಡಯಾಬಿಟಿಸ್, ಬಿಪಿ, ಹೃದ್ರೋಗಗಳು, ಮೆದುಳಿನ ರೋಗಗಳು, ಕ್ಯಾನ್ಸರ್, ಅನಾರೋಗ್ಯಕರ ಜೀವನಶೈಲಿ, ಅಲರ್ಜಿ, ಅಪಘಾತಗಳು, ಸ್ಥೂಲಕಾಯ, ಅತಿ ಆಹಾರ ಸೇವನೆ, ದೈಹಿಕ ಚಟುವಟಿಕೆಗಳು-ವ್ಯಾಯಾಮಗಳ ಕೊರತೆ, ಐಷಾರಾಮದ ದುರಭ್ಯಾಸಗಳು, ಅಪೌಷ್ಟಿಕತೆ, ರೋಗನಿರೋಧಕತೆ ಕಡಿಮೆಯಾಗಿರುವುದು, ಪರಿಸರದಲ್ಲಿ ಮತ್ತು ಮನೆಯಲ್ಲಿ ಸ್ವಚ್ಛತೆಯ ಕೊರತೆ, ಶೌಚಗೃಹ ಇಲ್ಲದಿರುವುದು, ಒತ್ತಡ, ಆತಂಕ, ಯೋಚನೆ, ಕಿರಿಕಿರಿ ಮತ್ತು ಖಿನ್ನತೆಗಳಂತಹ ಮಾನಸಿಕ ಸಮಸ್ಯೆಗಳಿಂದಾಗಿ ಅರೋಗ್ಯ ಹಲವರಿಗೆ ಮರೀಚಿಕೆಯಾಗಿಯೇ ಉಳಿದಿದೆ ಎನ್ನುವುದು ವಿಪರ್ಯಾಸ. ಅದರಲ್ಲಿಯೂ ಕರೊನೋತ್ತರ ಕಾಲದಲ್ಲಿ ಆರೋಗ್ಯ ಅತ್ಯಂತ ಕಾಳಜಿಯ ವಿಷಯವಾಗಿದೆ. ಇಂದು ವಿಶ್ವದ ಅರ್ಧದಷ್ಟು ಜನಸಂಖ್ಯೆಯು ಅವರಿಗೆ ಅಗತ್ಯವಿರುವ ಆರೋಗ್ಯ ಸೇವೆಗಳನ್ನು ಪಡೆಯುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯಿಂದ ತಿಳಿದುಬಂದಿದೆ. ಆದ್ದರಿಂದ ಮಕ್ಕಳ, ಯುವಜನರ, ವಯಸ್ಕರ, ಗರ್ಭಿಣಿಯರ ಮತ್ತು ಹಿರಿಯರ ಆರೋಗ್ಯದ ಮೇಲೆ ಎಲ್ಲರೂ ಗಮನ ಹರಿಸುವುದು ಬಹುಮುಖ್ಯವಾಗಿದೆ ಎಂದು ಕಿವಿಮಾತು ಹೇಳಿದರು.
 ಪರಿಸರದ ಹಾಗೂ ವೈಯಕ್ತಿಕ ಶುಚಿತ್ವ ಪಾಲನೆ, ಪೌಷ್ಟಿಕ ಆಹಾರ, ಸದೃಢವಾಗಿರಲು ದಿನನಿತ್ಯ ವಾಕಿಂಗ್, ಜಾಗಿಂಗ್ ಅಥವಾ ವ್ಯಾಯಾಮಗಳನ್ನು ಮಾಡುವುದು ಮತ್ತು ಸಾಕಷ್ಟು ನಿದ್ರೆ ಆರೋಗ್ಯಕರ ಜೀವನಕ್ಕೆ ಸುಭದ್ರ ಅಡಿಪಾಯವಾಗಿವೆ. ಪ್ರತಿದಿನ ತಾಜಾ ಹಸಿರು, ತಾಜಾ ತರಕಾರಿಗಳು, ಹಣ್ಣುಗಳು ಮತ್ತು ಪೌಷ್ಟಿಕ ಆಹಾರವನ್ನು ಸೇವಿಸುವುದು, ನಾಲ್ಕು ಲೀಟರ್ ನೀರು ಕುಡಿಯುವುದು, ಅತಿಸಿಹಿ, ಖಾರ, ಉಪ್ಪು, ಮಸಾಲೆಯುಕ್ತ, ಕರಿದ, ಹುರಿದ ಪದಾರ್ಥಗಳನ್ನು ಸೇವಿಸದಿರುವುದು ಉತ್ತಮ ಎಂದು ಸಲಹೆ ನೀಡಿದರು.
ಪ್ರಾಧ್ಯಾಪಕಿ ಪ್ರೊ.ಜಯಲಕ್ಷ್ಮೀ ಮಾತನಾಡಿ, ಇಂದಿನ ದಿನಗಳಲ್ಲಿ ಆರೋಗ್ಯ ತೀರಾ ಅತ್ಯಾವಶ್ಯಕವಾಗಿದೆ. ಅದರಲ್ಲೂ ಹೆಣ್ಣು ಮಕ್ಕಳು ಒತ್ತಡದಲ್ಲೇ ತಮ್ಮ ಜೀವನ ಶೈಲಿಯನ್ನು ಕಳೆಯುತ್ತಿರುತ್ತಾರೆ. ಅವರಿಗೂ ಸಹ ಆರೋಗ್ಯ ಬಹಳ ಮುಖ್ಯವಾದದ್ದು ಎಂದು ಪ್ರತಿಪಾದಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಗುರುರಾಜ್ ಪ್ರಭು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪತ್ರಾಂಕಿತ ವ್ಯವಸ್ಥಾಪಕಿ ಎಸ್.ಪಿ.ಹೇಮಲತಾ, ಯುವ ರೆಡ್‌ಕ್ರಾಸ್ ಘಟಕದ ಎಸ್.ನವೀನ್, ಕ್ರೀಡಾ ಸಂಯೋಜಕ ಕೆ.ಆರ್.ಲೋಕೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net