ಯುವಜನತೆ ಉತ್ತಮ ಆರೋಗ್ಯ ಪಡೆದುಕೊಳ್ಳಿ: ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ ಸಲಹೆ

ಮಂಡ್ಯ ನಗರದಲ್ಲಿ ಆಯೋಜಿಸಿದ್ದ ವಿಶ್ವ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ ಉದ್ಘಾಟಿಸಿದರು.
ಮಂಡ್ಯ ನಗರದಲ್ಲಿ ಆಯೋಜಿಸಿದ್ದ ವಿಶ್ವ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ನಶಾ ಮುಕ್ತ ಭಾರತ ಅಭಿಯಾನ
  • ಧ್ವನಿ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಆರ್.ಜಿ ವ್ಯಸನಿಗಳ ಸಮಗ್ರ ಪುನಶ್ಚೇತನ ಕೇಂದ್ರದ ಸಹಯೋಗದಲ್ಲಿ ಆಯೋಜನೆ
ಮಂಡ್ಯ: ಮಾದಕ ವಸ್ತುಗಳ ಸೇವನೆ ಮಾಡುವುದರಿಂದ ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಯುವಜನತೆಯೂ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳುವಲ್ಲಿ ಗಮನಹರಿಸಬೇಕು. ಮಾದಕ ವಸ್ತು ಹಾಗೂ ಡ್ರಗ್ಸ್ ಸೇವನೆಯಿಂದ ಆಗುವ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ ಹೇಳಿದರು.
ನಗರದ ಆರ್.ಜಿ ವ್ಯಸನಿಗಳ ಪುನಶ್ಚೇತನಾ ಕೇಂದ್ರದಲ್ಲಿ ಧ್ವನಿ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಆರ್.ಜಿ ವ್ಯಸನಿಗಳ ಸಮಗ್ರ ಪುನಶ್ಚೇತನ ಕೇಂದ್ರದ ಸಹಯೋಗದಲ್ಲಿ ನಶಾ ಮುಕ್ತ ಭಾರತ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ವಿಶ್ವ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮದ್ಯ ಹಾಗೂ ಮಾದಕ ವ್ಯಸನವನ್ನು ತಡೆಗಟ್ಟುವ ನಿಟ್ಟಿನಲ್ಲಿ 23 ವರ್ಷದಿಂದ ನಶಾ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮವನ್ನು ಆರ್.ಜಿ ವ್ಯಸನಿಗಳ ಸಮಗ್ರ ಪುನಶ್ಚೇತನ ಕೇಂದ್ರ, ಧ್ವನಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಮಾಡಲಾಗುತ್ತಿದೆ. ಕ್ಷಣಿಕ ಸುಖ ಬಯಸಿ ಮಾದಕ ವಸ್ತುಗಳ ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬಿರುತ್ತದೆ. ಯುವಕರು ಹೆಚ್ಚು ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದು, ಯುವಕರು ಆರೋಗ್ಯದ ಮೇಲೆ ಹೆಚ್ಚು ಕಾಳಜಿ ವಹಿಸಬೇಕು. ಯುವಜನತೆಯಿಂದ ಮಾತ್ರ ದೇಶ ಅಭಿವೃದ್ಧಿಯಾಗಲು ಸಾಧ್ಯ. ಯುವಜನತೆಯೂ ದುಶ್ಚಟಗಳಿಂದ ದೂರವಿದ್ದಾಗ ಮಾತ್ರ ದೇಶವನ್ನು ನಶೆ ಹಾಗೂ ಡ್ರಗ್ಸ್ ಮುಕ್ತ ಭಾರತವನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಯುವಕರು ಮಾದಕ ಸೇವನೆಯನ್ನು ತ್ಯಜಿಸೋಣ ಎಂಬ ಸಂಕಲ್ಪ ಮಾಡಿದರೆ ಮಾತ್ರ ತಮ್ಮ ಕುಟುಂಬವನ್ನು ಸದೃಢವಾಗಿಡಲು ಸಾಧ್ಯವಾಗುತ್ತದೆ. ನಶಾ ಮುಕ್ತ ಭಾರತವನ್ನು ನಿರ್ಮಾಣ ಮಾಡಬೇಕಾದರೆ ಮಾಧ್ಯಮದವರ ಪಾತ್ರ ಮುಖ್ಯವಾಗುತ್ತದೆ. ಮಾದಕ ವಸ್ತು ಸೇವನೆಯಿಂದ ಆಗುವ ದುಷ್ಪರಿಣಾಮ ಪ್ರಚಾರ ಮಾಡುವುದರಿಂದ ಮಾದಕವಸ್ತು ಸೇವನೆ ಯನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷ ಕೆ.ನಾಗಣ್ಣಗೌಡ ಮಾತನಾಡಿ, ಯುವಕರು ದೇಶದ ಆಸ್ತಿ. ಆದರೆ ಯುವಜನತೆಯೂ ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದಾರೆ. ಆದ್ದರಿಂದ ಯುವಜನರಲ್ಲಿ ಮಾದಕ ಸೇವನೆ ಮಾಡುವುದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಜೂ.26ರಂದು ವಿಶ್ವ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಮಾಡಲಾಗುತ್ತದೆ. ಯುವಜನತೆ ದುಶ್ಚಟಗಳಿಂದ ದೂರ ಇದ್ದು, ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬೇಕು ಎಂಬ ದೃಷ್ಟಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಎಂ.ಸಿ.ಸೋಮಶೇಖರ್, ಅಂಗವಿಕಲರ ಮತ್ತು ಹಿರಿಯ ನಾಗರಿಕ ಕಲ್ಯಾಣ ಅಧಿಕಾರಿ ಕೋಮಲ್ಕುಮಾರ್, ಮನೋರೋಗ ತಜ್ಞ ಡಾ.ಎಚ್.ವಿ.ಶಶಾಂಕ್, ಡಾ.ಮಹಮ್ಮದ್ ಸುಹೇಲ್, ಎಸ್.ಎನ್.ತಿಮ್ಮರಾಜು, ಪುಣ್ಯಶ್ರೀ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net