ನಾಗಮಂಗಲ: ಜೂನ್ ತಿಂಗಳಿನಲ್ಲಿ ಪುರಸಭೆ ಚುನಾವಣೆ ನಡೆಯಲಿದ್ದು, ಈ ಬಾರಿ 23 ವಾರ್ಡ್‌ಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲು ಈಗಿನಿಂದಲೇ ಗಂಭೀರವಾಗಿ ತೆಗೆದುಕೊಂಡು ಚುನಾವಣೆಗೆ ಸಿದ್ಧರಾಗಿ ಎಂದು ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ ನೀಡಿದರು.
ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಸಾರ್ವಜನಿಕರ ಸಮಸ್ಯೆ ಆಲಿಕೆ ಹಾಗೂ ಪುರಸಭೆ ವ್ಯಾಪ್ತಿಯ ಮುಖಂಡರ ಸಭೆಯಲ್ಲಿ ಮಾತನಾಡಿದರು.
ಪುರಸಭೆಯ 23 ವಾರ್ಡ್‌ಗಳಲ್ಲಿಯೂ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಬೇಕು. ಆ ನಿಟ್ಟಿನಲ್ಲಿ ವಾರ್ಡ್‌ಗಳ ಮುಖಂಡರು ಈಗಿನಿಂದಲೇ ಮನೆ ಮನೆಗಳಿಗೆ ತೆರಳಿ ಪ್ರಚಾರ ಆರಂಭಿಸಿ ಸ್ಥಳೀಯವಾಗಿರುವ ಸಮಸ್ಯೆಗಳನ್ನು ನಿವಾರಿಸಬೇಕು. ವಾರ್ಡ್‌ಗಳಲ್ಲಿ ಮುಖಂಡರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿದ್ದರು ಬದಿಗಿಟ್ಟು ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಮಾಡಬೇಕು. ಯಾವುದೇ ಮೀಸಲಾತಿ ಬಂದರೂ ಹಾಗೂ ಪಕ್ಷದಿಂದ ಯಾರೇ ಅಭ್ಯರ್ಥಿಯಾದರೂ ಚುನಾವಣೆಯನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡು ಮಾಡಬೇಕಿದೆ. ಕಳೆದ ಬಾರಿ ನಮ್ಮ ಪಕ್ಷದಿಂದ ಕೈತಪ್ಪಿದ್ದ ವಾರ್ಡ್‌ಗಳಲ್ಲಿಯೂ ಈ ಬಾರಿ ನಮ್ಮ ಅಭ್ಯರ್ಥಿ ಗೆಲ್ಲುವಂತೆ ಕೆಲಸ ಮಾಡಬೇಕಿದೆ. ಮುಖಂಡರ ನಡುವೆ ಭಿನ್ನಾಭಿಪ್ರಾಯಗಳಿದ್ದು, ಬಗೆಹರಿಯದಿದ್ದರೆ ನನ್ನ ಗಮನಕ್ಕೆ ತನ್ನಿ ನಾನೇ ಬಗೆಹರಿಸುವ ಕೆಲಸ ಮಾಡುತ್ತೇನೆ ಎಂದರು.
ಒಂದನೇ ವಾರ್ಡ್‌ನಲ್ಲಿದ್ದಂತಹ ಅನೇಕ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದ್ದು, ಕುಡಿಯುವ ನೀರಿನ ಸಮಸ್ಯೆಯನ್ನು ಕೂಡಲೇ ಬಗೆಹರಿಸಿಕೊಡುವುದಾಗಿ ಭರವಸೆ ನೀಡಿದರು. ಈ ಬಾರಿ ಒಂದನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದರೆ ಸುಭಾಷ್‌ನಗರವನ್ನು ಪಟ್ಟಣಕ್ಕೆ ನಂಬರ್ ಒನ್ ಬಡಾವಣೆಯನ್ನಾಗಿಸುತ್ತೇನೆ ಎಂದರು.
ಪುರಸಭೆಯ 17ನೇ ವಾರ್ಡ್‌ಗೆ 4 ಕೋಟಿ ರೂ. ಅನುದಾನ ನೀಡಲಾಗಿದ್ದು, ಅಭಿವೃದ್ಧಿ ಕೆಲಸಗಳು ಆರಂಭವಾಗಲಿವೆ. ಪುರಸಭೆ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾಗಿದ್ದ ಕೆಲವು ಗ್ರಾಮಗಳನ್ನು ವಿಶೇಷ ಅನುದಾನದ ಮೂಲಕ ಸಂಪೂರ್ಣ ಅಭಿವೃದ್ಧಿಗೆ ಬದ್ಧ ಎಂದರು.
ಬಿಎಲ್‌ಒಗಳನ್ನು ಬದಲಾಯಿಸಿ: ಪುರಸಭೆ ವ್ಯಾಪ್ತಿಯಲ್ಲಿನ ಕೆಲವು ವಾರ್ಡ್‌ಗಳಲ್ಲಿನ ಮತದಾರರ ಪಟ್ಟಿ ಮತ್ಯಾವುದೋ ವಾರ್ಡ್‌ನ ಪಟ್ಟಿಗೆ ಸೇರ್ಪಡೆಯಾಗಿವೆ. ಬಿಎಲ್‌ಒಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಈಗಾದರೇ ಚುನಾವಣೆಯಲ್ಲಿ ಹಲವು ಸಮಸ್ಯೆಗಳಾಗಿವೆ ಎಂದು ಮುಖಂಡರು ಸಚಿವರ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಸಚಿವ ಎನ್.ಚಲುವರಾಯಸ್ವಾಮಿ, ಮತದಾರರ ಪಟ್ಟಿಯಲ್ಲಿ ಯಾವುದೇ ಲೋಪವಾಗದಂತೆ ಈಗಲೇ ಕ್ರಮವಹಿಸಿ. ಯಾವ ಮತಗಟ್ಟೆಯ ಬಿಎಲ್‌ಒ ಆಸಕ್ತಿಯಿಂದ ಕೆಲಸ ಮಾಡುತ್ತಿಲ್ಲ ಅಂತಹ ಬಿಎಲ್‌ಒಗಳನ್ನು ಬದಲಾಯಿಸಿ. ಇಲ್ಲವಾದಲ್ಲಿ ಚುನಾವಣೆಯ ಸಂದರ್ಭದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಈಗಲೇ ಮತಪಟ್ಟಿಯನ್ನು ಸರಿಪಡಿಸಿ ಎಂದು ತಹಸೀಲ್ದಾರ್ ಅವರಿಗೆ ಸೂಚಿಸಿದರು.
10 ದಿನದೊಳಗೆ ವರದಿ ಕೊಡಿ: ತಾಲೂಕಿನ ಹೊಣಕೆರೆ ಹೋಬಳಿಯ ಶೆಟ್ಟಹಳ್ಳಿ ಗ್ರಾಮದ ಹಾಲಿನ ಡೈರಿಯಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದರು. ಸ್ಥಳೀಯ ಅಧಿಕಾರಿಗಳಿಂದ ನಡೆಸಲಾದ ತನಿಖೆಯಲ್ಲಿ ಕೆಲ ಲೋಪಗಳು ಹಾಗೂ ಹಣ ದುರುಪಯೋಗವಾಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಹಾಲಿನ ಡೇರಿಯ ಕಾರ್ಯದರ್ಶಿ ವಿರುದ್ಧ ಅಕ್ರಮಕ್ಕೆ ಸಂಬಂಧಿಸಿದಂತೆ 10 ದಿನದೊಳಗೆ ಸಂಪೂರ್ಣ ವರದಿ ನೀಡುವಂತೆ ಸಹಕಾರ ಇಲಾಖೆಯ ಎ. ಆರ್. ನಾಗಭೂಷಣ್ ಅವರಿಗೆ ಸಚಿವ ಎನ್.ಚಲುವರಾಯಸ್ವಾಮಿ ಸೂಚಿಸಿದರು. ವರದಿ ಬಂದ ನಂತರ ಕಾರ್ಯದರ್ಶಿಯನ್ನು ಆ ಸ್ಥಾನದಿಂದ ತೆಗೆದುಹಾಕುವುದು. ಕ್ರಿಮಿನಲ್ ಕೇಸ್ ಹಾಕುವುದು ಅಥವಾ ಅಕ್ರಮವೆಸಗಿರುವ ಹಣ ವಸೂಲಿ ಮಾಡುವುದು ಸೇರಿದಂತೆ ಮುಂತಾದ ಪ್ರಕ್ರಿಯೆಗಳು ಕಾನೂನು ಬದ್ಧವಾಗಿ ನಡೆಯಲಿವೆ. ಯಾರೇ ಆದರೂ ಸಾರ್ವಜನಿಕ ಹಣ ದುರುಪಯೋಗಪಡಿಸಿಕೊಂಡವರನ್ನು ಕ್ಷಮಿಸುವುದಿಲ್ಲ ಅವರಿಗೆ ಕಾನೂನು ಕ್ರಮವಾಗಲಿದೆ ಎಂದರು.
ತಹಸೀಲ್ದಾರ್ ಆದರ್ಶ್, ತಾ.ಪಂ.ಇಒ ಸತೀಶ್, ಪುರಸಭೆ ಮುಖ್ಯಾಧಿಕಾರಿ ವೀಣಾ, ಮನ್‌ಮುಲ್ ನಿರ್ದೇಶಕ ಲಕ್ಷ್ಮೀನಾರಾಯಣ್, ಮುಖಂಡರಾದ ರಮೇಶ್, ಗೀತಾದಾಸೇಗೌಡ, ಶರತ್‌ರಾಮಣ್ಣ, ಪ್ರವೀಣ್, ಅಯ್ಯಪ್ಪ, ಅಶೋಕ್, ಸಂಪತ್ತು ಮತ್ತಿತರಿದ್ದರು.