ಮದ್ದೂರು: ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಗುರುವಾರ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಿಸಲಾಯಿತು.
ಒಡೆಯರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಶಿರಸ್ತೇದಾರ್ ಲಕ್ಷ್ಮೀನರಸಿಂಹನ್, ಮೈಸೂರು ಸಂಸ್ಥಾನಕ್ಕೆ ಒಡೆಯರ್ ಅನನ್ಯ ಕೊಡುಗೆ ನೀಡಿದ್ದಾರೆ. ಕೃಷ್ಣರಾಜ ಸಾಗರ ಅಣೆಕಟ್ಟು, ಮೈಸೂರು ವಿಶ್ವವಿದ್ಯಾನಿಲಯ, ಭಾರತೀಯ ವಿಜ್ಞಾನ ಸಂಸ್ಥೆ- ಐಐಎಸ್‌ಸಿ ಸೇರಿವೆೆ. ಆದ್ದರಿಂದ ಮಹಾತ್ಮ ಗಾಂಧೀಜಿ ಅವರು ಇವರನ್ನು ರಾಜರ್ಷಿ ಎಂದು ಕರೆದು ಗೌರವಿಸಿದ್ದರು ಎಂದು ಸ್ಮರಿಸಿದರು.
ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನವನ್ನು ಪ್ರತಿ ವರ್ಷ ಜೂ.4ರಂದು ಆಚರಿಸಲಾಗುತ್ತದೆ. ಭಾರತದ ಇತಿಹಾಸದಲ್ಲಿ ಅತ್ಯಂತ ಪ್ರಗತಿಪರ ಹಾಗೂ ಜನಪ್ರಿಯ ರಾಜರೆಂದು ಖ್ಯಾತರಾದ ಇವರ ಜಯಂತಿಯನ್ನು ಕರ್ನಾಟಕದಾದ್ಯಂತ, ಅದರಲ್ಲೂ ವಿಶೇಷವಾಗಿ ಮೈಸೂರಿನಲ್ಲಿ ಅತ್ಯಂತ ಸಡಗರ ಮತ್ತು ಗೌರವದಿಂದ ಆಚರಿಸಲಾಗುತ್ತದೆ ಎಂದರು.
ಅರಮನೆಯ ಆಭರಣ ಮಾರಾಟ ಮಾಡಿ ಕೆಆರ್‌ಎಸ್ ಅಣೆಕಟ್ಟೆ ನಿರ್ಮಾಣ ಮಾಡುವ ಮೂಲಕ ಮಂಡ್ಯ ಜಿಲ್ಲೆ ಅಚ್ಚ ಹಸರಿನಿಂದ ಕಂಗೊಳಿಸುವಂತೆ ಮಾಡಿ ರೈತಾಪಿ ವರ್ಗಕ್ಕೆ ಬೇಸಾಯ ಮಾಡಲು ಹಾಗೂ ಹಲವು ಜಿಲ್ಲೆಯ ಜನರಿಗೆ ಕುಡಿಯುವ ನೀರಿಗೆ ಅನುಕೂಲ ಕಲ್ಪಿಸಿದ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರತಿಭಾ, ಹಿಂದುಳಿದ ವರ್ಗಗಳ ಇಲಾಖೆಯ ಸಹಾಯಕ ನಿರ್ದೇಶಕಿ ಸುನಿತಾ, ಮುಖಂಡರಾದ ಮಹೇಶ್, ಭಾನುಪ್ರಕಾಶ್, ಮರಳಿಗ ಶಿವರಾಜು ಇತರರು ಹಾಜರಿದ್ದರು.