ಪಾಂಡವಪುರ ತಾಲೂಕಿನ ದೊಡ್ಡೇಗೌಡನಕೊಪ್ಪಲು ಗ್ರಾಮದಿಂದ ಸಣಬಕೊಪ್ಪಲು ಮಾರ್ಗವಾಗಿ ಕಡಬ ಗ್ರಾಮ ಸಂಪರ್ಕಿಸುವ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೂಮಿಪೂಜೆ ನೆರವೇರಿಸಿದರು. ಕೆ.ಟಿ.ಗೋವಿಂದೇಗೌಡ, ವೈ.ಪಿ.ಮಂಜು ಇತರರು ಇದ್ದರು.
ಪಾಂಡವಪುರ: ತಾಲೂಕಿನ ತೊಣ್ಣೂರು ಕೆರೆ ಹಿನ್ನೀರಿನ ಪ್ರದೇಶದಲ್ಲಿ ಜಮೀನುಗಳಿಗೆ ನೀರು ಹರಿಸಲು ರೈತರು ಕೆರೆಗೆ ಅಳವಡಿಸಿರುವ ಪಂಪ್‌ಸೆಟ್ ಮೋಟರ್‌ಗಳನ್ನು ತೆರವುಗೊಳಿಸದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ವಿಚಾರದಲ್ಲಿ ರೈತರು ಆತಂಕಪಡುವಂತಿಲ್ಲ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಭರವಸೆ ನೀಡಿದರು.
ತಾಲೂಕಿನ ದೊಡ್ಡೇಗೌಡನ ಕೊಪ್ಪಲಿನಿಂದ ಸಣಬಕೊಪ್ಪಲು ಮಾರ್ಗವಾಗಿ ಕಡಬ ಗ್ರಾಮ ಸಂಪರ್ಕಿಸುವ 16.80 ಕೋಟಿ ರೂ. ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಭಾನುವಾರ ಪೂಜೆ ಸಲ್ಲಿಸಿ ಮಾತನಾಡಿದರು.
ತೊಣ್ಣೂರು ಕೆರೆ ಹಿನ್ನೀರಿನ ಆಶ್ರಯದಲ್ಲಿ ರೈತರು ಹಲವು ವರ್ಷಗಳಿಂದಲೂ ವ್ಯವಸಾಯ ಮಾಡಿಕೊಂಡು ಬಂದಿದ್ದಾರೆ. ಹೀಗಾಗಿ, ಅಧಿಕಾರಿಗಳು ರೈತರು ಅಳವಡಿಸಿರುವ ಪಂಪ್ ಸೆಟ್‌ಗಳನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸಬಾರದು ಎಂದು ಖಡಕ್ಕಾಗಿ ಎಚ್ಚರಿಕೆ ನೀಡಿದರು.
ಕೆರೆ, ಕಟ್ಟೆ ಒತ್ತುವರಿ ಬೇಡ: ಕೆರೆ, ಕಟ್ಟೆಗಳು ಅಂತರ್ಜಲದ ಮೂಲವಾಗಿದ್ದು, ನೀರಿನ ಮೂಲವನ್ನು ಸಂರಕ್ಷಿಕೊಳ್ಳಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಗ್ರಾಮೀಣ ಪ್ರದೇಶದ ನೀರಿನ ಮೂಲವಾಗಿರುವ ಕೆರೆ-ಕಟ್ಟೆಗಳನ್ನು ಯಾರೊಬ್ಬರು ಒತ್ತುವರಿ ಮಾಡಿಕೊಳ್ಳಬಾರದು. ಕೆರೆಗಳಿಗೆ ನೈಸರ್ಗಿಕವಾಗಿ ಹರಿದು ಬರುವ ನೀರಿನ ಮೂಲಗಳನ್ನು ಒತ್ತುವರಿ ಮತ್ತು ಇನ್ನಿತರ ಕಾರಣಗಳಿಗೆ ಬಂದ್ ಮಾಡಿದರೆ ನಾವೇ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಹೀಗಾಗಿ ರೈತರು ನೀರಿನ ಮೂಲಗಳನ್ನು ಕಾಳಜಿಯಿಂದ ಉಳಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಹಳ್ಳಿಗಳಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ತಡೆಗಟ್ಟುವಂತೆ ಅಬಕಾರಿ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಗ್ರಾಮೀಣ ಭಾಗದ ಜನರು ಸ್ವಯಂ ಪ್ರೇರಿತರಾಗಿ ಮದ್ಯ ಮಾರಾಟ ತಡೆಗೆ ಮುಂದಾಗಬೇಕು. ಅದರಲ್ಲೂ ಮಹಿಳೆಯರು ಮನಸ್ಸು ಮಾಡಿದರೆ ಅನಧಿಕೃತ ಮಾರಾಟ ಮಾಡಲಾಗುತ್ತಿರುವ ಮದ್ಯವನ್ನು ತಡೆಗಟ್ಟಬಹುದು ಎಂದರು.
ಜಿಪಂ ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ, ರೈತಸಂಘ ತಾಲೂಕು ಅಧ್ಯಕ್ಷ ವೈ.ಪಿ.ಮಂಜು, ಮಹಿಳಾ ಘಟಕದ ರೂಪಾ, ಮುಖಂಡರಾದ ಚಲವೇಗೌಡ, ಶ್ರೀಧರ್, ಜಯರಾಮು, ಬೋರೇಗೌಡ, ಶಿವರಾಮು, ಡೇರಿ ಕುಮಾರ, ಅಭಿಷೇಕ್, ಪ್ರಕಾಶ್ ಇತರರು ಇದ್ದರು.