ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ ಚಾಲನೆ

ಪಾಂಡವಪುರ ಪಟ್ಟಣದಲ್ಲಿ ಮಲತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ ಕಾಮಗಾರಿಗೆ ಶಾಸಕ ದರ್ಶನ್‌ಪುಟ್ಟಣ್ಣಯ್ಯ ಭೂಮಿಪೂಜೆ ನೆರವೇರಿಸಿದರು. ಮುಖ್ಯಾಧಿಕಾರಿ ಸತೀಶ್‌ಕುಮಾರ್, ವಕೀಲ ಮುರುಳಿ ಇತರರಿದ್ದರು.
ಪಾಂಡವಪುರ ಪಟ್ಟಣದಲ್ಲಿ ಮಲತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ ಕಾಮಗಾರಿಗೆ ಶಾಸಕ ದರ್ಶನ್‌ಪುಟ್ಟಣ್ಣಯ್ಯ ಭೂಮಿಪೂಜೆ ನೆರವೇರಿಸಿದರು. ಮುಖ್ಯಾಧಿಕಾರಿ ಸತೀಶ್‌ಕುಮಾರ್, ವಕೀಲ ಮುರುಳಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೂಮಿಪೂಜೆ
  • ಶೀಘ್ರ ಕಾಮಗಾರಿ ಮುಗಿಸುವ ಭರವಸೆ
ಪಾಂಡವಪುರ: ಎರಡು ದಶಕಗಳ ಕಾಲ ನನೆಗುದಿಗೆ ಬಿದ್ದಿದ್ದ ಒಳಚರಂಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೋಮವಾರ ಭೂಮಿ ಪೂಜೆ ನೆರವೇರಿಸಿದರು.
ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆಗೆ 2007ರಲ್ಲಿ ಅಂದಿನ ಸರ್ಕಾರ ಅನುದಾನ ನೀಡಿತ್ತು. ಆದರೆ ಮಲತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಪಟ್ಟಣದ ಬನ್ನಾರಮ್ಮ ದೇವಸ್ಥಾನ ಮುಂಭಾಗದಲ್ಲಿ ರೈತರಿಂದ ವಶಪಡಿಸಿಕೊಂಡಿದ್ದ 5.20 ಕೃಷಿ ಭೂಮಿಗೆ ಸರ್ಕಾರ ನಿಗದಿ ಮಾಡಿದ್ದ ಪರಿಹಾರದ ಮೊತ್ತ ಕಡಿಮೆಯಾಯಿತು ಎಂದು ರೈತರು ನ್ಯಾಯಾಲಯದ ಮೊರೆ ಹೋಗಿದ್ದರು. ಸದ್ಯ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ರೈತರಿಗೆ ಹೆಚ್ಚಿನ ಪರಿಹಾರ ನೀಡಲಾಗಿದೆ. ಜತೆಗೆ ಹೆಚ್ಚುವರಿ ಪೈಪ್‌ಲೈನ್ ಅಳವಡಿಕೆ ಮತ್ತು ಸಂಸ್ಕರಣಾ ಘಟಕ ನಿರ್ಮಾಣ ಕಾಮಗಾರಿಗೆ ಅಗತ್ಯವಿದ್ದ 24 ಕೋಟಿ ರೂ. ಅನುದಾನವನ್ನು ಸರ್ಕಾರದಿಂದ ಮಂಜೂರು ಮಾಡಿಸಲಾಗಿದೆ. ಗುತ್ತಿಗೆದಾರರು ಶೀಘ್ರದಲ್ಲಿ ಗುಣಮಟ್ಟದ ಕಾಮಗಾರಿ ನಿರ್ವಹಿಸಿ ಪಟ್ಟಣದ ಜನರಿಗೆ ಅನುಕೂಲ ಮಾಡಿಕೊಡಲಿದ್ದಾರೆ ಎಂದು ಭರವಸೆ ನೀಡಿದರು.
ಒಳಚರಂಡಿ ವ್ಯವಸ್ಥೆ, ಸಂಸ್ಕರಣಾ ಘಟಕ ನಿರ್ಮಾಣ ಹಾಗೂ ರೈತರಿಗೆ ಪರಿಹಾರದ ವಿಚಾರದಲ್ಲಿ ಇದ್ದ ಅಡೆತಡೆಗಳನ್ನು ಸರಿಪಡಿಸಲು ಕೆ.ಎಸ್.ಪುಟ್ಟಣ್ಣಯ್ಯ, ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಕೆಲಸ ಮಾಡಿದ್ದಾರೆ. ಎಲ್ಲರ ಸಹಕಾರದಿಂದ ಕಾಮಗಾರಿ ಅನುಷ್ಟಾನಗೊಂಡಿದೆ. ಕಾಮಗಾರಿಗೆ ದೊಡ್ಡ ಮೊತ್ತದ ಅನುದಾನ ಬೇಕಾಗಿದ್ದರಿಂದ ಕ್ಯಾಬಿನೆಟ್ ಅನುಮೋದನೆ ಬೇಕಾಗಿತ್ತು. ಮೇಲುಕೋಟೆ ಕ್ಷೇತ್ರದವರೆ ಆದ ನಿವೃತ್ತ ಐಎಎಸ್ ಅಧಿಕಾರಿ ಉಮಾಶಂಕರ್ ಕಾಮಗಾರಿಗೆ ಅಗತ್ಯವಿದ್ದ ಅನುದಾನವನ್ನು ಸರ್ಕಾರದಿಂದ ಯಾವ ರೀತಿ ತರಬಹುದು ಎಂಬುದರ ಬಗ್ಗೆ ಮಾಹಿತಿ ನೀಡಿದರು. ಅದರಂತೆ ಎಲ್ಲವೂ ಸಾಕಾರಗೊಂಡಿದೆ ಎಂದರು.
ಇಲ್ಲಿ ಸಂಸ್ಕರಣೆ ಮಾಡಲಾಗುವ ನೀರನ್ನು ರೈತರ ಜಮೀನಿಗೆ ಹರಿಸಲಾಗುವುದು. ಪಟ್ಟಣ ಬೆಳೆಯುತ್ತಿದ್ದಂತೆ ಇಲ್ಲಿನ ಭೂಮಿಯ ಬೆಲೆಯೂ ಹೆಚ್ಚಾಗಿದ್ದು ಘಟಕ ನಿರ್ಮಾಣಕ್ಕಾಗಿ ಜಮೀನು ನೀಡಿರುವ ಕುಟುಂಬಗಳ ಒಬ್ಬ ಸದಸ್ಯರಿಗೆ ಘಟಕದಲ್ಲೇ ಉದ್ಯೋಗ ನೀಡಲಾಗುವುದು ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಡಿ.ಶ್ರೀನಿವಾಸ್ ಮಾತನಾಡಿ, 2013ರಲ್ಲಿ ಕೆ.ಎಸ್.ಪುಟ್ಟಣ್ಣಯ್ಯ ಶಾಸಕರಾದ ಬಳಿಕ ಸರ್ಕಾರದಿಂದ ಒಂದು ಗುಂಟೆ ಜಮೀನಿಗೆ 10 ಲಕ್ಷ ರೂ.ಪರಿಹಾರ ಮಂಜೂರು ಮಾಡಿಸಿದ್ದರು. ಆದರೆ, ಹಣ ಬಿಡುಗಡೆ ಮಾಡಿಸಲು ಸಾಧ್ಯವಾಗಿರಲಿಲ್ಲ. 2018ರಲ್ಲಿ ಶಾಸಕರಾದ ಸಿ.ಎಸ್.ಪುಟ್ಟರಾಜು ಅವರು ರೈತರಿಗೆ ಮಂಜೂರಾಗಿದ್ದ ಪರಿಹಾರದ ಹಣವನ್ನು ಬಿಡುಗಡೆ ಮಾಡಿಸಿಕೊಟ್ಟರು. ಇದೀಗ ಘಟಕ ನಿರ್ಮಾಣಕ್ಕೆ ಈಗಿನ ಶಾಸಕ ದರ್ಶನ್ ಪುಟ್ಟಣ್ಣಯ್ಯ 20 ಕೋಟಿ ರೂ. ಅನುದಾನ ಮಂಜೂರು ಮಾಡಿಸಿ ಘಟಕ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಈ ಯೋಜನೆಯಲ್ಲಿ ಮೂವರ ಕೊಡುಗೆ ಅಪಾರವಿದೆ ಎಂದರು.
ತಹಸೀಲ್ದಾರ್ ಬಸವರಡ್ಡಪ್ಪರೋಣದ, ಪುರಸಭೆ ಮುಖ್ಯಾಧಿಕಾರಿ ಸತೀಶ್‌ಕುಮಾರ್, ಇಂಜಿನಿಯರ್‌ಗಳಾದ ಚೌಡಪ್ಪ, ಯಶಸ್ವಿನಿ, ನಾಮಿನಿ ಸದಸ್ಯರಾದ ವಕೀಲ ಮುರುಳಿ, ಸೋಮಶೇಖರ್, ರಮೇಶ್, ಮಹಮದ್ ಹನೀಫ್, ಲಕ್ಷೇಗೌಡ, ಮಾಜಿ ಅಧ್ಯಕ್ಷರಾದ ಹಾರೋಹಳ್ಳಿ ಸತೀಶ್, ಜ್ಯೋತಿಲಕ್ಷ್ಮೀಬಾಬು, ಅರ್ಚನಚಂದ್ರು, ಮಾಜಿ ಸದಸ್ಯರಾದ ಪಾರ್ಥಸಾರಥಿ, ಚಂದ್ರು, ಶಿವಕುಮಾರ್, ಉಮಾಶಂಕರ್, ಜಯಲಕ್ಷ್ಮೀ, ಮಂಗಳಾ, ಜಿಪಂ ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ, ಮುಖಂಡ ಎಸ್.ದಯಾನಂದ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net