ಮತದಾರರ ಪಟ್ಟಿಯಲ್ಲಿ ಹೆಸರು ಖಚಿತಪಡಿಸಿಕೊಳ್ಳಿ

ಕೆ.ಆರ್.ಪೇಟೆಯಲ್ಲಿ ಆಯೋಜಿಸಿದ್ದ ಸಭೆಯನ್ನು ಗಣ್ಯರು ಉದ್ಘಾಟಿಸಿದರು. ದಿನೇಶ್ ಗೂಳಿಗೌಡ, ಜಿ.ಎನ್.ನಂಜುಂಡಸ್ವಾಮಿ, ಕೆ.ಬಿ.ಚಂದ್ರಶೇಖರ್, ಬಿ.ಎಲ್.ದೇವರಾಜ್, ಪ್ರಕಾಶ್, ಾಗೇಂದ್ರ ಕುಮಾರ್, ಕುಮಾರ್ ಇದ್ದರು.
ಕೆ.ಆರ್.ಪೇಟೆಯಲ್ಲಿ ಆಯೋಜಿಸಿದ್ದ ಸಭೆಯನ್ನು ಗಣ್ಯರು ಉದ್ಘಾಟಿಸಿದರು. ದಿನೇಶ್ ಗೂಳಿಗೌಡ, ಜಿ.ಎನ್.ನಂಜುಂಡಸ್ವಾಮಿ, ಕೆ.ಬಿ.ಚಂದ್ರಶೇಖರ್, ಬಿ.ಎಲ್.ದೇವರಾಜ್, ಪ್ರಕಾಶ್, ಾಗೇಂದ್ರ ಕುಮಾರ್, ಕುಮಾರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಸಲಹೆ
  • ಎಸ್‌ಐಆರ್ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್
ಕೆ.ಆರ್.ಪೇಟೆ: ಬಿಹಾರ, ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಆದ ಅನ್ಯಾಯ ಕರ್ನಾಟಕದಲ್ಲಿ ಆಗಬಾರದೆಂಬ ಕಾರಣಕ್ಕೆ ಎಸ್‌ಐಆರ್ ಪ್ರಕ್ರಿಯೆಯನ್ನು ಕಾಂಗೆಸ್ ಗಂಭೀರವಾಗಿ ಪರಿಗಣಿಸಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ತಿಳಿಸಿದರು.
ಎಸ್‌ಐಆರ್ ಕುರಿತು ಅರಿವು ಮೂಡಿಸಲು ಪಟ್ಟಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಅರ್ಹ ಮತದಾರರ ಹೆಸರು ಕೈತಪ್ಪದಂತೆ ಬಿಎಲ್‌ಎಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಕ್ಷೇತ್ರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವೇಗವಾಗಿ ಸಾಗುತ್ತಿದೆ. ಸಾರ್ವಜನಿಕರು ಪ್ರಕ್ರಿಯೆಗೆ ಸಂಪೂರ್ಣ ಸಹಕಾರ ನೀಡುವ ಮೂಲಕ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಅಭಿಯಾನವನ್ನು ಯಶಸ್ವಿಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬ ಬಿಎಲ್‌ಎ ಮೇಲಿದೆ. ಪ್ರತಿ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಯಾವುದೇ ಅರ್ಹ ಮತದಾರರ ಹೆಸರು ಕೈತಪ್ಪದಂತೆ ಕಾರ್ಯ ನಿರ್ವಹಿಸಬೇಕು ಎಂದರು.
ಮರಣ ಹೊಂದಿರುವವರು ಹಾಗೂ ವಿಳಾಸ ಬದಲಾವಣೆ ಮಾಡಿಕೊಂಡಿರುವವರ ವಿವರಗಳನ್ನು ಪರಿಷ್ಕರಿಸುವ ಜತೆಗೆ 18 ವರ್ಷ ಪೂರ್ಣಗೊಳಿಸಿರುವ ಪ್ರತಿ ಯುವಕ-ಯುವತಿಯ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುವ ಜವಾಬ್ದಾರಿ ಬಿಎಲ್ಎಗಳ ಮೇಲಿದೆ ಎಂದರು.
ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಮಾತನಾಡಿ, ಈಗಾಗಲೇ 13 ರಾಜ್ಯಗಳಲ್ಲಿ ಎಸ್‌ಐಆರ್ ಪೂರ್ಣಗೊಂಡಿದ್ದು, ಕರ್ನಾಟಕ ಸೇರಿದಂತೆ 16 ರಾಜ್ಯಗಳಲ್ಲಿ ಪ್ರಕ್ರಿಯೆ ನಡೆಯುತ್ತಿದೆ. ಬಿಹಾರ, ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ನಂತರ ಅನೇಕ ಕ್ಷೇತ್ರಗಳ ಫಲಿತಾಂಶಗಳು 2ರಿಂದ 3 ಸಾವಿರ ಮತಗಳ ಅಂತರದಲ್ಲಿ ನಿರ್ಧಾರವಾಗಿವೆ. ಪಶ್ಚಿಮ ಬಂಗಾಳದಲ್ಲಿ ಉಂಟಾದ ಪರಿಸ್ಥಿತಿ ಕರ್ನಾಟಕದಲ್ಲೂ ಮರುಕಳಿಸದಂತೆ ಎಚ್ಚರ ವಹಿಸಬೇಕಿದೆ ಎಂದು ಹೇಳಿದರು.
ಕೆಲವು ರಾಜ್ಯಗಳಲ್ಲಿ ಮತದಾರರ ಹೆಸರನ್ನು ದೊಡ್ಡ ಪ್ರಮಾಣದಲ್ಲಿ ಕೈಬಿಟ್ಟಿದ್ದಾರೆ. ಅಂತಹ ಯಾವುದೇ ಅನ್ಯಾಯ ಕರ್ನಾಟಕದಲ್ಲಿ ನಡೆಯದಂತೆ ಕಾಂಗ್ರೆಸ್ ಎಸ್‌ಐಆರ್ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಜು.29ರೊಳಗೆ ನಡೆಯುವ ಪರಿಷ್ಕರಣೆ ಕಾರ್ಯವನ್ನು ಅತ್ಯಂತ ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡಲಿದೆ ಎಂದು ಹೇಳಿದರು.
ಸಭೆಯಲ್ಲಿ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಎಲ್.ದೇವರಾಜ್, ಪ್ರಕಾಶ್, ರಾಜ್ಯ ಕೈಮಗ್ಗ ನಿಗಮದ ಅಧ್ಯಕ್ಷ ನಾಗೇಂದ್ರ ಕುಮಾರ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕುಮಾರ್, ಮುಖಂಡರಾದ ಕೃಷ್ಣಮೂರ್ತಿ, ಕಿಕ್ಕೇರಿ ಸುರೇಶ್, ಉದಯ್, ರಾಜೇಂದ್ರ, ದಿವಾಕರ್, ರವೀಂದ್ರ ಬಾಬು ಕೆಪಿಸಿಸಿ ಪಧಾನ ಕಾರ್ಯದರ್ಶಿ ತ್ಯಾಗರಾಜು, ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಕೃಷ್ಣೇಗೌಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net