ಮದ್ದೂರು ತಾಲೂಕು ಕೂಳಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊತ್ತಿಪುರ ಗ್ರಾಮದಲ್ಲಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಶಾಸಕ ಕೆ.ಎಂ.ಉದಯ್ ಭೂಮಿಪೂಜೆ ಸಲ್ಲಿಸಿದರು. ಜಯರಾಮು, ಕೆಂಪರಾಜು, ಶ್ರೀನಿವಾಸ್, ಸಿಪಾಯಿ ಶ್ರೀನಿವಾಸ್, ಸಿದ್ದರಾಜು, ಡಾ.ರವಿಶಂಕರ್, ಮನು ಇದ್ದರು.
ಮದ್ದೂರು: ಗ್ರಾಮೀಣ ಪ್ರದೇಶ ಹಾಗೂ ಗಡಿ ಗ್ರಾಮಗಳ ಜನರಿಗೆ ಉಚಿತ ಹಾಗೂ ಗುಣಮಟ್ಟದ ಆರೋಗ್ಯ ಸೇವೆಗಳು ಸಿಗಬೇಕೆಂಬ ಉದ್ದೇಶದಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.
ತಾಲೂಕಿನ ಕೂಳಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊತ್ತಿಪುರ ಗ್ರಾಮದಲ್ಲಿ ಅಂದಾಜು 3.25 ಕೋಟಿ ರೂ.ವೆಚ್ಚದಲ್ಲಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಗಡಿ ಗ್ರಾಮಗಳ ಜನರು ಚಿಕಿತ್ಸೆಗೆ ತಾಲೂಕು ಆಸ್ಪತ್ರೆಗೆ ಅಲೆದಾಡಬಾರದು ಎಂಬ ಉದ್ದೇಶದಿಂದ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದರು.
ವೈದ್ಯರು ಮತ್ತು ಸಿಬ್ಬಂದಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು. ಇಲ್ಲಿಗೆ ಬರುವವರು ಬಡವರು, ಕೂಲಿಕಾರ್ಮಿಕರು, ಅಶಕ್ತರು. ಆರೋಗ್ಯ ಕೇಂದ್ರಕ್ಕೆ 10ಕ್ಕೂ ಹೆಚ್ಚಿನ ಗ್ರಾಮಗಳು ಒಳಪಡುವುದರಿಂದ ಹೆಚ್ಚಿನ ಹಾಸಿಗೆಗಳ ಹಾಗೂ ಸುಸಜ್ಜಿತ ಕಟ್ಟಡದ ಅವಶ್ಯಕತೆ ಇತ್ತು. ಹಾಗಾಗಿ ಹಳೆಯ ಕಟ್ಟಡ ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ವರ್ಷದೊಳಗೆ ಸುಸಜ್ಜಿತ ಆಸ್ಪತ್ರೆ ನಿರ್ಮಾಣಗೊಳಲಿದ್ದು, ಸಿಬ್ಬಂದಿ, ಅಗತ್ಯ ಸೌಕರ್ಯ ಕಲ್ಪಿಸಿಕೊಡಲಾಗುವುದು ಎಂದರು.
ಕೂಳಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 25 ಕೋಟಿ ರೂ.ಗೂ ಹೆಚ್ಚಿನ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಬನ್ನಹಳ್ಳಿ ಏತ ನೀರಾವರಿ ಯೋಜನೆ ಎರಡು ತಿಂಗಳಲ್ಲಿ ಪೂರ್ಣಗೊಂಡು ಈ ಭಾಗದ 18 ಕೆರೆಗಳಿಗೆ ನೀರು ತುಂಬಿಸುವ ಮಹತ್ವದ ಯೋಜನೆಯೂ ನನಸಾಗಲಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಯರಾಂ, ಕೆಂಪರಾಜು, ಮಾಜಿ ಸದಸ್ಯ ಶ್ರೀನಿವಾಸ್ ಗೌಡ, ಮುಖಂಡರಾದ ಸಿಪಾಯಿ ಶ್ರೀನಿವಾಸ್, ತಿಪ್ಪೂರು ಮನು, ತಾಲೂಕು ಕೆಡಿಪಿ ಸದಸ್ಯ ಸಿದ್ದರಾಜು, ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ರವಿಶಂಕರ್, ಡಾ.ಸುನೀಲ್ ಕುಮಾರ್, ಹರ್ಷ ಮತ್ತಿತರರು ಇದ್ದರು.