ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ತಮಿಳುನಾಡಿಗೆ ಪ್ರತಿನಿತ್ಯ 12 ಟಿಎಂಸಿ ನೀರು ಬಿಡುವಂತೆ ನೀಡಿರುವ ಆದೇಶ ಖಂಡಿಸಿ ರೈತಸಂಘ ಕಾರ್ಯಕರ್ತರು ಶ್ರೀರಂಗಪಟ್ಟಣ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಮಂಗಳವಾರ ಪ್ರತಿಭಟನೆ ನಡೆಸಿದರು.
ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ಆದೇಶ ಖಂಡಿಸಿ ರೈತಸಂಘ ಕಾರ್ಯಕರ್ತರು ಶ್ರೀರಂಗಪಟ್ಟಣ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರಾಧಿಕಾರದ ಆದೇಶ ಕಾವೇರಿ ಕೊಳ್ಳದ ರೈತರಿಗೆ ಮರಣ ಶಾಸನವಾಗಿದೆ. ರಾಜ್ಯ ಸರ್ಕಾರ ಜಲಾಶಯಗಳಿಂದ ಒಂದು ಹನಿ ನೀರನ್ನು ಹರಿಸಬಾರದು. ತಕ್ಷಣ ಜಲಾಶಯ ಅಚ್ಚುಕಟ್ಟು ವ್ಯಾಪ್ತಿಯ ಎಲ್ಲ ಕೆರೆಕಟ್ಟೆ ತುಂಬಿಸಬೇಕು ಎಂದು ಕಾವೇರಿ ನ್ಯಾಯಾಧೀಕರಣ, ನಿರ್ವಹಣಾ ಮಂಡಳಿ, ತಮಿಳುನಾಡು ಮತ್ತು ಕರ್ನಾಟಕ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾವೇರಿ ಜಲಾಶಯದಲ್ಲಿ ಲಭ್ಯವಿರುವ ನೀರು ಕೇವಲ ಕುಡಿಯೋಕ್ಕೆ ಮಾತ್ರ ಬಳಕೆ ಮಾಡಿಕೊಳ್ಳಬೇಕು. ನೀರಿನ ಸಂಗ್ರಹವಿಲ್ಲದ ಕಾರಣ ಕೆಆರ್‌ಎಸ್ ಅಚ್ಚುಕಟ್ಟು ವ್ಯಾಪ್ತಿಯ ರೈತರು ಬೆಳೆ ಬೆಳೆಯಬಾರದು ಎಂದಿದ್ದರು. ಈಗ ನಿರ್ವಹಣಾ ಮಂಡಳಿ ತಮಿಳುನಾಡಿನ ರೈತರು ಬೆಳೆ ಬೆಳೆಯಲು ನೀರು ಕೊಡಿ ಎಂದು ಆದೇಶ ಮಾಡಿದೆ. ಈ ಹಿಂದೆಯೇ ರೈತಸಂಘದ ಒತ್ತಾಯದಂತೆ ನಾಲೆಗಳಿಗೆ ನೀರು ಹರಿಸಿ ಕೆರೆ-ಕಟ್ಟೆ ತುಂಬಿಸಿದ್ದರೆ ರೈತರಿಗೆ ಅನುಕೂಲವಾಗುತ್ತಿತ್ತು. ಕಾವೇರಿ, ಹೇಮಾವತಿ ಮತ್ತು ಕಬಿನಿ ಜಲಾಶಯಗಳಲ್ಲಿ ಈಗಿರುವ ನೀರಿನ ಸಂಗ್ರಹವನ್ನು ಅವಲೋಕಿಸಿ ಪ್ರಾಧಿಕಾರ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶಿಸಿದೆ. ಇದಕ್ಕೆಲ್ಲ ನಮ್ಮ ರಾಜಕಾರಣಿಗಳ ಬೇಜವಾಬ್ದಾರಿ ಕಾರಣವಾಗಿದೆ ಎಂದು ಆರೋಪಿಸಿದರು.
ತಾಲೂಕು ಅಧ್ಯಕ್ಷ ಎಣ್ಣೆಹೊಳೆಕೊಪ್ಪಲು ವೈ.ಪಿ.ಮಂಜು ಮಾತನಾಡಿ, ಕೆಆರ್‌ಎಸ್ ಜಲಾಶಯದಲ್ಲಿ ಸದ್ಯ 29 ಟಿಎಂಸಿ ನೀರಿನ ಸಂಗ್ರಹವಿದ್ದು, ಆದೇಶದಂತೆ ಪ್ರತಿನಿತ್ಯ 12 ಕ್ಯೂಸೆಕ್ ನೀರು ಹರಿಸಿದರೆ ಕಟ್ಟೆಯಲ್ಲಿ 12 ಟಿಎಂಸಿ ನೀರು ಮಾತ್ರ ಉಳಿಯುತ್ತದೆ. ಇದರಲ್ಲಿ 6 ಟಿಎಂಸಿ ನೀರು ಬಳಕೆಗೆ ಬರುತ್ತದೆ. ಉಳಿದ 6 ಟಿಎಂಸಿ ಡೆಡ್ ಸ್ಟೋರೆಜ್ ಆಗಿ ಉಳಿಯುತ್ತದೆ. ರೈತಸಂಘದ ಒತ್ತಾಯದಂತೆ ಹೇಮಾವತಿ, ಕಾವೇರಿ ಜಲಾಶಯಗಳಿಂದ ನಾಲೆಗಳಿಗೆ ನೀರು ಹರಿಸಿದ್ದರೆ ಈ ಸಮಸ್ಯೆ ಎದುರಾಗುತ್ತಿರಲಿಲ್ಲ. ರಾಜಕಾರಣಿಗಳು ಧೃಡ ನಿರ್ಧಾರ ತೆಗೆದುಕೊಳ್ಳಲು ವಿಫಲರಾಗಿರುವ ಪರಿಣಾಮ ರೈತರಿಗೆ ಸಂಕಷ್ಟ ಬಂದೊದಗಿದೆ ಎಂದರು.
ಪ್ರತಿಭಟನೆಯಲ್ಲಿ ತಾಲೂಕು ರೈತಸಂಘ ಕಾರ್ಯದರ್ಶಿಗಳಾದ ವೈ.ಜಿ.ರಘು, ಡಾಮಡಹಳ್ಳಿ ಅಶೋಕ್, ಮಾಜಿ ಅಧ್ಯಕ್ಷರಾದ ಕೆನ್ನಾಳು ನಾಗರಾಜು, ವಿಜಯಕುಮಾರ್, ಮುಖಂಡರಾದ ಹಾಳಯ್ಯ, ಮುರುಳೀಧರ್, ಕಾಳೇನಹಳ್ಳಿ ಆನಂದ್, ಕೆ.ಪಿ.ಮಹದೇವು, ಡಿ.ಕೆ.ದೇವೇಗೌಡ ಇತರರು ಇದ್ದರು.