ಕೇರಳ ಶಾಸಕನ ಜತೆ ಟೋಲ್ ಸಿಬ್ಬಂದಿ ವಾಗ್ವಾದ

ಕೇರಳ ರಾಜ್ಯದ ಕೋಳಿಕ್ಕೋಡ್ ಜಿಲ್ಲೆಯನಾದಪುರಂ ಕ್ಷೇತ್ರದ ಶಾಸಕ ಕೆ.ಎಂ.ಅಭಿಜಿತ್ ಚಿತ್ರ.
ಕೇರಳ ರಾಜ್ಯದ ಕೋಳಿಕ್ಕೋಡ್ ಜಿಲ್ಲೆಯನಾದಪುರಂ ಕ್ಷೇತ್ರದ ಶಾಸಕ ಕೆ.ಎಂ.ಅಭಿಜಿತ್ ಚಿತ್ರ.
Published on
ಶ್ರೀರಂಗಪಟ್ಟಣ: ಬೆಂಗಳೂರು-ಮೈಸೂರು ಹೆದ್ದಾರಿಯ ಗಣಂಗೂರು ಬಳಿಯ ಟೋಲ್ ಪಾವತಿ ಕೇಂದ್ರದ ಸಿಬ್ಬಂದಿ ಕೇರಳ ಮೂಲದ ಶಾಸಕರೊಬ್ಬರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪದ ಮೇರೆಗೆ ನಾಲ್ವರ ವಿರುದ್ಧ ದೂರು ದಾಖಲಾಗಿದೆ. ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಏನು ಘಟನೆ:
ಬೆಂಗಳೂರಿಗೆ ತೆರಳಿದ್ದ ಕೇರಳದ ಕೋಳಿಕ್ಕೋಡ್ ಜಿಲ್ಲೆ ನಾದಪುರಂ ಕ್ಷೇತ್ರದ ಶಾಸಕ ಕೆ.ಎಂ.ಅಭಿಜಿತ್ ಅವರು ಮೈಸೂರಿಗೆ ಬೆಂಬಲಿಗರೊಂದಿಗೆ ಶುಕ್ರವಾರ ಸಂಜೆ ಕಾರಿನಲ್ಲಿ ಹಿಂತಿರುಗುತ್ತಿದ್ದರು. ಈ ವೇಳೆ ಗಣಂಗೂರು ಟೋಲ್ ಬಳಿ ಕೆ.ಎಂ.ಅಭಿಜಿತ್ ಕಾರಿಗೆ ಫಾಸ್ಟ್‌ಟ್ಯಾಗ್ ಇಲ್ಲವೆಂದು ಸಿಬ್ಬಂದಿ ತಕರಾರು ತೆಗೆದಿದ್ದಾರೆ. ಕೇರಳ ರಾಜ್ಯದ ಜನಪ್ರತಿನಿಧಿಯಾಗಿದ್ದು, ವಿಐಪಿ ಲೇನ್‌ನಲ್ಲಿ ತೆರಳಲು ಅವಕಾಶ ಮಾಡಿಕೊಡಿ ಎಂದು ಕಾರಿನಲ್ಲಿದ್ದ ಬೆಂಬಲಿಗರು ಕೇಳಿದ್ದಾರೆ ಎನ್ನಲಾಗಿದೆ. ಈ ವೇಳೆ ಸಿಬ್ಬಂದಿ ವಿರೋಧ ವ್ಯಕ್ತಪಡಿಸಿದ್ದು ಮಾತಿನ ಚಕಮಕಿ ನಡೆದಿದೆ.
ಈ ವೇಳೆ ಖುದ್ದು ಶಾಸಕ ಕೆ.ಎಂ.ಅಭಿಜಿತ್ ಮಧ್ಯಪ್ರವೇಶಿಸಿ ಜನಪ್ರತಿನಿಧಿಯ ಗುರುತಿನ ಕಾರ್ಡ್ ತೋರಿ ಸಮಾಧಾನಗೊಳಿಸಲು ಮುಂದಾದರೂ ಮಾತಿನ ಚಕಮಕಿ ಮುಂದುವರಿಸಿದ ಟೋಲ್ ಸಿಬ್ಬಂದಿ ಮತ್ತು ಬೆಂಬಲಿಗರ ನಡುವೆ ಎಳೆದಾಟ ತಳ್ಳಾಟ ನೂಕಾಟವಾಗಿದೆ. ಬಳಿಕ ಸಿಬ್ಬಂದಿ ವರ್ತನೆಯಿಂದ ಅಸಮಾಧಾನಗೊಂಡ ಶಾಸಕ ಅಲ್ಲಿಂದ ನೇರವಾಗಿ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ಘಟನೆ ಕುರಿತು ದೂರು ನೀಡಿದ್ದಾರೆ.
ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಟೋಲ್‌ನ ಲೇನ್ ಸೂಪರ್‌ವೈಸರ್ ಹೇಮಂತ್ ಕುಮಾರ್, ಬೂತ್ ಸಿಬ್ಬಂದಿ ವಿನಯ್, ಭರತ್, ಸುನೀಲ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಠಾಣೆ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು. ಪ್ರಕರಣ ದಾಖಲಾಗಿದೆ.
ಪ್ರಸ್ತುತ ಕೆ.ಎಂ.ಅಭಿಜಿತ್ ಮೈಸೂರು ಮತ್ತು ಮಂಡ್ಯ ಕ್ಷೇತ್ರಗಳ ಯೂತ್ ಕಾಂಗ್ರೆಸ್‌ನ ಉಸ್ತುವಾರಿಯಾಗಿ ನಿಯೋಜನೆಗೊಂಡಿದ್ದಾರೆ. ವಿಷಯ ತಿಳಿದ ಯುವ ಕಾಂಗ್ರೆಸ್ ಮುಖಂಡರು ಠಾಣೆ ಬಳಿ ಜಮಾಯಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net