ಮಂಡ್ಯ :ಪರೀಕ್ಷೆಯಲ್ಲಿ ಅನುತ್ತೀರ್ಣ ಅಥವಾ ಸಣ್ಣಪುಟ್ಟ ವಿಷಯಗಳಲ್ಲಿ ಜಿಗುಪ್ಸೆಗೊಳಗಾದ ವಿದ್ಯಾರ್ಥಿಗಳ ಪೈಕಿ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇಂತಹ ವಿಷಯಗಳಿಗೆ ಕಿವಿಗೊಡದೆ ಸಮಸ್ಯೆಗಳನ್ನು ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಾಜ್ಯ ಉಪಾಧ್ಯಕ್ಷ ಭಾಸ್ಕರ್‌ರಾವ್ ಸಲಹೆ ನೀಡಿದರು.
ನಗರದ ಎಸ್.ಬಿ.ಸಮುದಾಯ ಭವನದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಾಜ್ಯ ಹಾಗೂ ಜಿಲ್ಲಾ ಶಾಖೆ ವತಿಯಿಂದ ನಡೆಯುತ್ತಿರುವ ಮೂರು ದಿನದ ಮೈಸೂರು ವಿಭಾಗ ಮಟ್ಟದ ಕಾಲೇಜು ವಿದ್ಯಾರ್ಥಿಗಳ ತರಬೇತಿ ಶಿಬಿರದ ಸಮಾರೋಪದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ನಾನು ಕೂಡ ಅನುತ್ತೀರ್ಣನಾಗಿಯೇ ನಂತರ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವೆ. ಕೇವಲ ವಿದ್ಯಾರ್ಥಿಗಳು ಓದುವ ವಿಷಯಗಳನ್ನೇ ಮುಖ್ಯವಾಗಿರಿಸಿಕೊಳ್ಳಬಾರದು. ಪ್ರಾಪಂಚಿಕ ಜ್ಞಾನವನ್ನು ಅರಿತುಕೊಳ್ಳುವ ಕಡೆ ಗಮನಹರಿಸಬೇಕಿದೆ. ಏಕೆಂದರೆ ನಿಮ್ಮ ಪಾಲಕರು ನಂಬಿಕೆಯಿಟ್ಟು ಇಷ್ಟು ದೊಡ್ಡವನಾಗಿ ಮಾಡಿದ್ದಾರೆ. ಅವರ ವಿಶ್ವಾಸಕ್ಕೆ ಎಂದಿಗೂ ದ್ರೋಹ ಮಾಡದೆ ಅವರ ಕನಸನ್ನು ನನಸು ಮಾಡಬೇಕೆಂದರು.
ನೆಲ್ಸನ್ ಮಂಡೆಲಾ, ನಂದನ್ ನಿಲೇಕಣಿ, ಬರಾಕ್ ಒಬಾಮಾ, ನಾರಾಯಣಮೂರ್ತಿ, ಜಯಪ್ರಕಾಶ್ ನಾರಾಯಣ್, ಮಹಾತ್ಮ ಗಾಂಧೀಜಿ ಸೇರಿದಂತೆ ಸಾಧಕರ ಜೀವನ ಚರಿತ್ರೆ ಓದಿಕೊಂಡರೆ ನಿಮಗೆ ತಿಳಿಯುತ್ತದೆ. ಅದರಲ್ಲಿ ಅವರು ನಡೆದು ಬಂದ ದಾರಿ ಗೊತ್ತಾಗುತ್ತದೆ. ಯಾರಿಗೂ ಸಾಧನೆ ತಕ್ಷಣಕ್ಕೆ ಸಿಗುವುದಿಲ್ಲ, ಸತತ ಪ್ರಯತ್ನ ಪಡಬೇಕು. ಬಿದ್ದರೆ ಎದ್ದು ನಿಲ್ಲುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ರಾಜಕೀಯ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಎಲ್ಲಿ ಅವಕಾಶ ಸಿಗುತ್ತದೋ ಅಲ್ಲೆಲ್ಲ ಬಳಸಿಕೊಳ್ಳುವ ಕಡೆ ಗಮನಹರಿಸಬೇಕು. ಗ್ರಾಮ ಪಂಚಾಯಿತಿಯಿಂದಿಡಿದು ಜಿಲ್ಲಾ ಪಂಚಾಯಿತಿ ಹಾಗೂ ಶಾಸಕರಾಗುವ ಕಡೆಗೂ ನೀವು ಕನಸನ್ನು ಇಟ್ಟುಕೊಳ್ಳಬೇಕು. ಸಂಘ-ಸಂಸ್ಥೆಗಳಲ್ಲಿ ಸೇವೆ ಮಾಡುವುದಕ್ಕೆ ತೊಡಗಿಸಿಕೊಳ್ಳಬೇಕು. ಕೇವಲ ಸಣ್ಣ ಉದ್ಯೋಗ ತೆಗೆದುಕೊಂಡು ಸುಮ್ಮನಿರದೆ ಕೆಎಎಸ್, ಐಎಎಸ್ ಹಾಗೂ ಐಪಿಎಸ್ ಹುದ್ದೆಗಳನ್ನು ತೆಗೆದುಕೊಳ್ಳುವ ಗುರಿಯೊಂದಿಗೆ ಮುನ್ನುಗ್ಗುವ ಅಭ್ಯಾಸ ಇಟ್ಟುಕೊಳ್ಳಿ ಎಂದು ಸಲಹೆ ನೀಡಿದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಉಮಾಕಾಂತ್, ಯುವ ರೆಡ್‌ಕ್ರಾಸ್ ಸಂಯೋಜಕ ಡಿ.ಜಿ.ಆನಂದ್, ನಿರ್ದೇಶಕ ಕೆ.ಟಿ.ಹನುಮಂತು, ಸಂಚಾಲಕರಾದ ರಂಗಸ್ವಾಮಿ, ಮಂಗಲ ಎಂ.ಯೋಗೀಶ್, ಭವಾನಿ ಶಂಕರ್, ಷಡಕ್ಷರಿ ಭಾಗವಹಿಸಿದ್ದರು.
ಮೈಸೂರು, ಮಂಡ್ಯ, ಹಾಸನ, ಕೊಡಗು, ಚಾಮರಾಜನಗರ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಿಂದ 17 ವಿದ್ಯಾರ್ಥಿಗಳಂತೆ 136 ವಿದ್ಯಾರ್ಥಿಗಳು ಹಾಗೂ 14 ಜನ ಕಾರ್ಯಕ್ರಮಾಧಿಕಾರಿಗಳು ಸೇರಿ ಒಟ್ಟು 150 ಮಂದಿ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು.