ಮಳವಳ್ಳಿ ಪಟ್ಟಣದ ಅನಂತರಾಮ್ ವೃತ್ತದಲ್ಲಿ ರಾಜ್ಯ ರೈತ ಸಂಘದ ಸದಸ್ಯರು ಗುರುವಾರ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಬೋರಾಪುರ ಶಂಕರೇಗೌಡ, ಶಿವರುದ್ರ, ರಘುಗೌಡ, ಲಿಂಗೇಗೌಡ, ನಾಗರಾಜು, ಶಿವಕುಮಾರ್, ಬಸವಣ್ಣ, ನಾಗರಾಜು, ಡಾ.ಪ್ರಸಾದ್, ವೀರಪ್ಪ ಇದ್ದರು.
ಮಳವಳ್ಳಿ: ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡಬೇಕು ಎಂದು ಕಾವೇರಿ ನೀರು ನಿರ್ವಹಣಾ ಸಮಿತಿ ನೀಡಿರುವ ಆದೇಶ ವಿರೋಧಿಸಿ ಗುರುವಾರ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ನಡೆಯಿತು.
ಪಟ್ಟಣದ ಅನಂತರಾಮ್ ವೃತ್ತದಲ್ಲಿ ಜಮಾಯಿಸಿದ ನೂರಾರು ರೈತರು ವಾಹನ ಸಂಚಾರ ತಡೆದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ಮೈಸೂರು ಪ್ರಾಂತ್ಯ ಅಧ್ಯಕ್ಷ ಬೋರಾಪುರ ಶಂಕರೇಗೌಡ ಮಾತನಾಡಿ, ಈಗಾಗಲೇ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿದ್ದು ಮಳೆ ಕೂಡ ಆಗಿಲ್ಲ. ಈ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸಿದರೆ ಮಂಡ್ಯ, ಮೈಸೂರು ಜಿಲ್ಲೆ ರೈತರಿಗೆ ಅನ್ಯಾಯವಾಗಲಿದೆ. ಬೆಂಗಳೂರಿಗೆ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಬರಲಿದೆ. ರಾಜ್ಯ ಸರ್ಕಾರ ಕೂಡಲೇ ಆದೇಶ ತಿರಸ್ಕರಿಸಬೇಕು ಎಂದು ಆಗ್ರಹಿಸಿದರು.
ತಾಲೂಕು ಅಧ್ಯಕ್ಷ ಶಿವರುದ್ರ ಮಾತನಾಡಿ, ಕಾವೇರಿ ವಿಚಾರದಲ್ಲಿ ಸರ್ಕಾರ ರೈತರ ಪರ ನಿಲ್ಲದೆ ದೆಹಲಿಯ ಒತ್ತಡಕ್ಕೆ ಮಣಿಯುತ್ತಿದೆ. ನಮ್ಮ ಹೋರಾಟ ನಿಲ್ಲುವುದಿಲ್ಲ. ಅಗತ್ಯ ಬಿದ್ದರೆ ಇನ್ನಷ್ಟು ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ರಘುಗೌಡ, ಉಪಾಧ್ಯಕ್ಷರಾದ ಲಿಂಗೇಗೌಡ, ಚಿಕ್ಕಮುಲಗೂಡು ನಾಗರಾಜು, ಮುಖಂಡರಾದ ಶಿವಕುಮಾರ, ಬಸವಣ್ಣ, ನಾಗರಾಜು, ಸತೀಶ್, ಡಾ.ಪ್ರಸಾದ್, ಶಿವು, ವೀರಪ್ಪ ಇತರರಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು.