ರಾಜ್ಯ ಸರ್ಕಾರ ತಕ್ಷಣ ನಾಲೆಗಳಿಗೆ ನೀರು ಹರಿಸಲಿ

ಕೈಯಲ್ಲಿ ಒಣಗಿದ ಕಬ್ಬುಗಳ ಹಿಡಿದು ಶ್ರೀರಂಗಪಟ್ಟಣದ ತಾಲೂಕು ಕಚೇರಿ ಮುಂಭಾಗ ಭೂಮಿತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕೆ.ಎಸ್.ನಂಜುಂಡೇಗೌಡ,  ಬಿ.ಸಿ.ಕೃಷ್ಣೇಗೌಡ, ಎಂ.ವಿ.ಕೃಷ್ಣ, ಮಹದೇವು ಇತರರಿದ್ದರು.
ಕೈಯಲ್ಲಿ ಒಣಗಿದ ಕಬ್ಬುಗಳ ಹಿಡಿದು ಶ್ರೀರಂಗಪಟ್ಟಣದ ತಾಲೂಕು ಕಚೇರಿ ಮುಂಭಾಗ ಭೂಮಿತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕೆ.ಎಸ್.ನಂಜುಂಡೇಗೌಡ, ಬಿ.ಸಿ.ಕೃಷ್ಣೇಗೌಡ, ಎಂ.ವಿ.ಕೃಷ್ಣ, ಮಹದೇವು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಭೂಮಿತಾಯಿ ಹೋರಾಟ ಸಮಿತಿಯಿಂದ ಬಾರುಕೋಲು ಚಳವಳಿ
ಶ್ರೀರಂಗಪಟ್ಟಣ: ಕಾವೇರಿ ಕಣಿವೆಯ ಕೃಷಿ ಭೂಮಿಗಳಲ್ಲಿ ಒಣಗುತ್ತಿರುವ ರೈತರ ಬೆಳೆಗಳನ್ನು ಉಳಿಸಲು ರಾಜ್ಯ ಸರ್ಕಾರ ತಕ್ಷಣ ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಭೂಮಿತಾಯಿ ಹೋರಾಟ ಸಮಿತಿಯಿಂದ ಬುಧವಾರ ಬಾರುಕೋಲು ಚಳವಳಿ ನಡೆಯಿತು.
ಕೈಯಲ್ಲಿ ಒಣಗಿದ ಕಬ್ಬು ಹಿಡಿದು ಪಟ್ಟಣದ ತಾಲೂಕು ಕಚೇರಿ ಮುಂಭಾಗ ಜಮಾವಣೆಗೊಂಡ ಕಾರ್ಯಕರ್ತರು, ಬಾರುಕೋಲುಗಳಿಂದ ಛಾಟಿ ಬೀಸಿ ಘೋಷಣೆ ಕೂಗುವ ಮೂಲಕ ಆಕ್ರೋಶ ಹೊರಹಾಕಿದರು.
ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ಕೊಡಗು ಮತ್ತು ಹೇಮಾವತಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕನ್ನಂಬಾಡಿ ಜಲಾಶಯ ತುಂಬುವ ಆಶಯ ವ್ಯಕ್ತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಹಾಗೂ ನೀರಾವರಿ ಇಲಾಖೆ ತಮಿಳುನಾಡು ರಾಜ್ಯದ ಮೇಲೆ ತೋರುವ ಪ್ರೀತಿ, ಕಾಳಜಿ ಮತ್ತು ಕರ್ತವ್ಯವನ್ನು ನಾಡಿನ ರೈತ ಮಕ್ಕಳ ತೋರದಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಕಾವೇರಿ ಕಣಿವೆ ವ್ಯಾಪ್ತಿಯಲ್ಲಿ ಪರಿಸ್ಥಿತಿ ಕ್ಲಿಷ್ಟಕರವಾಗಿದ್ದು, ಒಂದು ಕಟ್ಟು ನೀರು ಕೊಡದಿದ್ದರೆ ಕಬ್ಬು, ಭತ್ತ, ಬಾಳೆ, ತೆಂಗು ಒಣಗಿ ನಾಶವಾಗುವ ಭೀತಿ ಇದೆ. ಸಾಲಸೋಲ ಮಾಡಿ ಬೆಳೆ ಬೆಳೆದ ರೈತ ನೀರಿಲ್ಲದೆ ನಷ್ಟಕ್ಕೆ ಸಿಲುಕಿದರೆ ದುಡುಕು ನಿರ್ಧಾರ ಕೈಗೊಳ್ಳುವ ಆತಂಕ ಮನೆ ಮಾಡಿದೆ. ಇಂತಹ ಪರಿಸ್ಥಿತಿಗಳ ಬಗ್ಗೆ ಎಳ್ಳಷ್ಟೂ ಆಲೋಚಿಸದ ರಾಜ್ಯ ಸರ್ಕಾರ ತನ್ನ ದುಂಡಾವರ್ತನೆ ಹಾಗೂ ದಬ್ಬಾಳಿಕೆಯ ನೀತಿಗಳನ್ನು ರೈತರ ಮೇಲೆ ಹೇರಿ ಗಾಢನಿದ್ರೆಗೆ ಜಾರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಂಡವಾಳಶಾಹಿಗಳು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳ ಪರ ಕಾರ್ಯನಿರ್ವಹಿಸುತ್ತಿದ್ದು, ಅಕ್ಷರ ಸಹ ರೈತವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ನಾಲೆಗಳಿಗೆ ನೀರು ಹರಿಸಿ ರೈತರ ಹಿತಕಾಯದಿದ್ದಲ್ಲಿ ಸರ್ಕಾರ ವಿರುದ್ದ ವಿವಿಧ ರೀತಿಯ ಚಳವಳಿಗಳ ಮೂಲಕ ನಿರಂತರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಳಿಕ ತಹಸೀಲ್ದಾರ್ ಚೇತನಾ ಯಾದವ್ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ ಚಳವಳಿಯನ್ನು ಅಂತ್ಯಗೊಳಿಸಿದರು. ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ಉಪಾಧ್ಯಕ್ಷ ಮೇಳಾಪುರ ಜಯರಾಮೇಗೌಡ, ದೊಡ್ಡಪಾಳ್ಯ ಜಗದೀಶ್, ಪ್ರಧಾನ ಕಾರ್ಯದರ್ಶಿ ಎಂ.ವಿ.ಕೃಷ್ಣ, ದರ್ಶನ್, ಖಜಾಂಚಿ ಉಂಡುವಾಡಿ ಮಹದೇವು, ಪದಾಧಿಕಾರಿಗಳಾದ ಅಚ್ಚಪ್ಪನಕೊಪ್ಪಲು ರವಿಲಕ್ಷ್ಮಣ, ರಮೇಶ, ಕೃಷ್ಣ, ಮಹಾಲಿಂಗು, ಬಲ್ಲೇನಹಳ್ಳಿ ಮಂಜುನಾಥ್, ಕಡತನಾಳು ಬಾಬು, ಚಾಮರಾಜು, ಪೈ.ನಾಗಣ್ಣ, ಚಿಂದಗಿರಿಕೊಪ್ಪಲು ರಾಮಚಂದ್ರು, ದೊಡ್ಡೇಗೌಡನಕೊಪ್ಪಲು ಮಹೇಶ್, ಕೆಂಗಾರಕೊಪ್ಪಲು ಮಹೇಶ್, ಪಾಲಹಳ್ಳಿ ರಾಮಚಂದ್ರು, ಮೇಳಾಪುರ ದೇವರಾಜು, ಬಾಲು ಸೇರಿದಂತೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net