ಕೃತಕ ಅಭಾವ ಸೃಷ್ಟಿ ಶಿಕ್ಷಾರ್ಹ ಅಪರಾಧ: ಜಿಲ್ಲಾಧಿಕಾರಿ ಡಾ.ಕುಮಾರ ಎಚ್ಚರಿಕೆ ·

ಮಂಡ್ಯ ನಗರದಲ್ಲಿ ಆಯೋಜಿಸಿದ್ದ ತಾಂತ್ರಿಕ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಡಾ.ಕುಮಾರ ಉದ್ಘಾಟಿಸಿದರು.
ಮಂಡ್ಯ ನಗರದಲ್ಲಿ ಆಯೋಜಿಸಿದ್ದ ತಾಂತ್ರಿಕ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಡಾ.ಕುಮಾರ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ರಸಗೊಬ್ಬರ ಮಾರಾಟಗಾರರಿಗೆ ತರಬೇತಿ ಕಾರ್ಯಾಗಾರ
ಮಂಡ್ಯ: ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸುವುದು, ಅನ್ಯ ಜಿಲ್ಲೆಗಳಿಗೆ ಕಳ್ಳಸಾಗಣೆ ಮಾಡುವುದು ಅಥವಾ ಕಳಪೆ ಗೊಬ್ಬರ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಎಚ್ಚರಿಕೆ ನೀಡಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ಸಹಯೋಗದಲ್ಲಿದಲ್ಲಿ ರಸಗೊಬ್ಬರ ಮಾರಾಟಗಾರರಿಗೆ ಆಯೋಜಿಸಿದ್ದ ರಸಗೊಬ್ಬರ ಗುಣ ನಿಯಂತ್ರಣ-ಸಮರ್ಪಕ-ಸಮತೋಲನ ನಿರ್ವಹಣೆ ಕುರಿತ ತಾಂತ್ರಿಕ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಅನಧಿಕೃತ ದಾಸ್ತಾನು ಮಾಡುವುದರ ಜತೆಗೆ ಮಾರಾಟ ಮತ್ತು ಸಾಗಾಣಿಕೆ ಕುರಿತು ಮಾಹಿತಿ ದೊರೆತಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮಾತ್ರವಲ್ಲದೆ ಪರವಾನಗಿ ರದ್ದು ಮಾಡಲಾಗುತ್ತದೆ ಎಂದು ತಿಳಿಸಿದರು.
ರಸಗೊಬ್ಬರ ತಯಾರಕರು ಮತ್ತು ವಿತರಕರು ಸರ್ಕಾರದ ಕಾನೂನುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ರಸಗೊಬ್ಬರದ ಜತೆಗೆ ಅನಗತ್ಯ ಕೀಟನಾಶಕ ಅಥವಾ ಇತರ ಉತ್ಪನ್ನಗಳನ್ನು ಕಡ್ಡಾಯವಾಗಿ ಖರೀದಿಸುವಂತೆ ರೈತರ ಮೇಲೆ ಒತ್ತಡ ಹೇರುವುದು ಅಪರಾಧ. ರಸಗೊಬ್ಬರ ತಯಾರಕರು ಮತ್ತು ವಿತರಕರು ರೈತರ ಹಿತಶಕ್ತಿಗೆ ಎಲ್ಲರೂ ಸಹಕಾರಿಯಾಗಬೇಕು. ರೈತ ದೇಶದ ಬೆನ್ನೆಲುಬು. ಅವರು ಬೆಳೆದ ಬೆಳೆಗೆ ಉತ್ತಮ ಬೆಲೆ ಫಲಿಸಿದರೆ ರೈತರು ಸ್ವಾವಲಂಬಿಯಾಗಲು ಸಾಧ್ಯವಾಗುತ್ತದೆ. ಆದ್ದರಿಂದ ರೈತರಿಗೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಜವಾಬ್ದಾರಿ. ಹಾಗಾಗಿ ಮಾರಾಟಗಾರರು ಮತ್ತು ರೈತರು ಸಾಮರಸ್ಯದಿಂದ ಇರಬೇಕು ಎಂದು ತಿಳಿಸಿದರು.
ಮುಂಗಾರು ಮಳೆ ವೈಫಲ್ಯದಿಂದ ನೀರಿನ ಕೊರತೆ ಇರುವುದರಿಂದ ಪರ್ಯಾಯ ಬೆಳೆಗಳಾದ ರಾಗಿ, ನವಣೆ, ಮುಸಕಿನ ಜೋಳ, ಅರ್ಕ, ಹುರುಳಿ, ಅಲಸಂದೆ ಬೆಳೆಗಳನ್ನು ಬೆಳೆಯುವಂತೆ ಮಾಹಿತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ರೈತರು ಪರ್ಯಾಯ ಬೆಳೆಗಳನ್ನು ಬೆಳೆಯಲು ಹೆಚ್ಚು ಒತ್ತು ನೀಡಬೇಕು. ಗುಣಮಟ್ಟದ ಕೃಷಿ ಪರಿಕರಗಳನ್ನು ರೈತರಿಗೆ ತಲುಪಿಸುವುದು ಮತ್ತು ಮಣ್ಣಿನ ಆರೋಗ್ಯ ರಕ್ಷಿಸುವುದು ಪ್ರತಿಯೊಬ್ಬ ರಸಗೊಬ್ಬರ ಮಾರಾಟಗಾರರ ಆದ್ಯ ಕರ್ತವ್ಯ. ಮಾರಾಟಗಾರರಿಗಾಗಿ ಈ ತಾಂತ್ರಿಕ ಕಾರ್ಯಾಗಾರ ಹಮ್ಮಿಕೊಂಡಿದ್ದು, ಇದರ ಸದುಪಯೋಗಪಡಿಸಿಕೊಳ್ಳುವುದರಿಂದ ನಿಮ್ಮ ವ್ಯಾಪಾರವನ್ನು ಕಾನೂನುಬದ್ಧವಾಗಿ ನಡೆಸುವುದು ಮಾತ್ರವಲ್ಲದೆ, ಹೊಸ ತಂತ್ರಜ್ಞಾನ ಮತ್ತು ಕೃಷಿ ಪದ್ಧತಿಗಳ ಬಗ್ಗೆ ಸಂಪೂರ್ಣ ಜ್ಞಾನವನ್ನು ಪಡೆಯಬಹುದು ಎಂದರು.
ಜಂಟಿ ಕೃಷಿ ನಿರ್ದೇಶಕ ಜಿ.ಎಸ್.ಜಯಸ್ವಾಮಿ ಮಾತನಾಡಿ, ಮಾರಾಟಗಾರರ ಸಮಸ್ಯೆಗಳಿಗೆ ಕಾನೂನು ಅನ್ವಯ ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆ ಸಹಕರಿಸುತ್ತದೆ. ರೈತರಿಗೆ ಅನುಕೂಲವಾಗುವಂತೆ ರಸಗೊಬ್ಬರ ಒದಗಿರುವುದು ನಮ್ಮ ಜವಾಬ್ದಾರಿ. ಆ ನಿಟ್ಟಿನಲ್ಲಿ ಮಾರಾಟಗಾರರು ಮತ್ತು ಕೃಷಿಕರು ಸಮನ್ವಯತೆಯಿಂದ ಸಹಕಾರಿಯಾಗಬೇಕು. ರಸಗೊಬ್ಬರ ತಯಾರಕರು ಮತ್ತು ವಿತರಕರು ಸರ್ಕಾರದ ಕಾನೂನು ಕಾಯಿದೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಉತ್ತಮ ರಸಗೊಬ್ಬರ ಒದಗಿಸುವುದರಿಂದ ರೈತರು ಸ್ವಾವಲಂಬಿಯಾಗಿ ಮತ್ತು ರೈತರ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಮೈಸೂರು ವಿಭಾಗದ ಜಾಗೃತ ಕೋಶದ ಜಂಟಿ ಕೃಷಿ ನಿರ್ದೇಶಕ ರಾಮಕೃಷ್ಣ, ಸಂಪನ್ಮೂಲ ವ್ಯಕ್ತಿ ವೆಂಕಟರಮಣಪ್ಪ, ಜಿಲ್ಲಾ ಕೃಷಿ ಸಮಾಜದ ಅಧ್ಯಕ್ಷ ಸಿ.ಎಂ.ನಾಗರಾಜು, ಜಿಲ್ಲಾ ಬಿತ್ತನೆ ಬೀಜ ಕೀಟನಾಶಕ ಮತ್ತು ರಸಗೊಬ್ಬರ ಮಾರಾಟಗಾರರ ಸಂಘದ ಅಧ್ಯಕ್ಷ ರಮೇಶ್, ಸಹಾಯಕ ಕೃಷಿ ನಿರ್ದೇಶಕಿ ಎಚ್.ಎಂ.ಸುನೀತಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net