ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಕಲ್ಪಿಸುವ ಸಲುವಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿಜಿ ರಾಮ್-ಜಿ ಯೋಜನೆಯ ಬಗ್ಗೆ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತೆ ದಿವ್ಯಾ ಪ್ರಭು ಕೂಲಿ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು. ಕೆ.ಅರ್.ನಂದಿನಿ, ಲಕ್ಷ್ಮೀ, ರಾಮಲಿಂಗಯ್ಯ, ಟಿ.ವಿ.ಮಂಜುನಾಥ್, ಸುರೇಶ್ ಇದ್ದರು.
ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತೆ ದಿವ್ಯಾ ಪ್ರಭು ಸಲಹೆ
ಮದ್ದೂರು: ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಕಲ್ಪಿಸುವ ಸಲುವಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿಜಿ ರಾಮ್-ಜಿ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತೆ ಜಿಆರ್‌ಜೆ ದಿವ್ಯಾ ಪ್ರಭು ಕರೆ ನೀಡಿದರು.
ತಾಲೂಕಿನ ಆತಗೂರು ಕೆರೆ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಈ ಹಿಂದೆ ಜಾರಿಯಲ್ಲಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ನೀಡಲಾಗಿದ್ದ ಗುರುತಿನ ಚೀಟಿಯನ್ನು ಮಾರ್ಪಾಡು ಮಾಡಿ ರೋಜ್‌ಗಾರ್ ಗ್ಯಾರಂಟಿ ಕಾರ್ಡ್ ನೀಡಲು ಯೋಜಿಸಲಾಗಿದೆ. ಯೋಜನೆ ಅಡಿ ಒಂದು ಕುಟುಂಬಕ್ಕೆ 125 ದಿನಗಳ ಉದ್ಯೋಗ ಖಾತರಿ ಜತೆಗೆ, 382 ರೂ. ಕೂಲಿ ಹಣ ಪಾವತಿಸಲಾಗುವುದು ಎಂದರು.
ಆಂಧ್ರಪ್ರದೇಶದ ತಿರುಪತಿಯಲ್ಲಿ ಬುಧವಾರ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಯೋಜನೆಗೆ ಚಾಲನೆ ನೀಡಿದ್ದಾರೆ. ಮದ್ದೂರು ತಾಲೂಕಿನ ಆತಗೂರು ಕೆರೆ ಪುನರುಜ್ಜೀವನ ಕಾಮಗಾರಿಗೆ ಚಾಲನೆ ನೀಡುವ ಮೂಲಕ ಯೋಜನೆಗೆ ಚಾಲನೆ ನೀಡಿದ್ದೇವೆ. ಎಲ್ಲ ಕುಟುಂಬಗಳು ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಜಿಪಂ ಸಿಇಒ ಕೆ.ಆರ್.ನಂದಿನಿ, ಉಪ ಕಾರ್ಯದರ್ಶಿ ಲಕ್ಷ್ಮೀ, ತಾಪಂ ಇಒ ರಾಮಲಿಂಗಯ್ಯ, ಸಹಾಯಕ ನಿರ್ದೇಶಕ ಟಿ.ವಿ.ಮಂಜುನಾಥ್, ತಾಲೂಕು ಯೋಜನಾಧಿಕಾರಿ ಸುರೇಶ್, ತಾಲೂಕು ಸಂಯೋಜಕ ರಮೇಶ್, ಪಿಡಿಒ ಶಶಿಧರ್ ಇತರರು ಇದ್ದರು.