ಸ್ವಚ್ಛ ನಗರಕ್ಕೆ ಸಹಕಾರ ನೀಡಿ

ನಾಗಮಂಗಲ ಪಟ್ಟಣದ ಶ್ರೀ ಸೌಮ್ಯಕೇಶವ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಪುರಸಭೆ ವತಿಯಿಂದ ಭಾನುವಾರ ಆಯೋಜಿಸಿದ್ದ 10ನೇ ಸ್ವಚ್ಛ ಸರ್ವೇಕ್ಷಣ ಜನ ಜಾಗೃತಿ ಜಾಥಾಗೆ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ ನೀಡಿದರು.
ನಾಗಮಂಗಲ ಪಟ್ಟಣದ ಶ್ರೀ ಸೌಮ್ಯಕೇಶವ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಪುರಸಭೆ ವತಿಯಿಂದ ಭಾನುವಾರ ಆಯೋಜಿಸಿದ್ದ 10ನೇ ಸ್ವಚ್ಛ ಸರ್ವೇಕ್ಷಣ ಜನ ಜಾಗೃತಿ ಜಾಥಾಗೆ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ ನೀಡಿದರು.
Published on
ನಾಗಮಂಗಲ: ಉತ್ತಮ ಪರಿಸರ, ಪರಿಶುದ್ಧ ವಾತಾವರಣದ ಜತೆಗೆ ನಾಗಮಂಗಲವನ್ನು ಸುಂದರ ನಗರವನ್ನಾಗಿ ರೂಪಿಸಲು ಸ್ಥಳೀಯ ಜನರು ಮತ್ತು ವ್ಯಾಪಾರಸ್ಥರು ಪೂರ್ಣ ಪ್ರಮಾಣದ ಸಹಕಾರ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮನವಿ ಮಾಡಿದರು.
ಪಟ್ಟಣದ ಶ್ರೀ ಸೌಮ್ಯಕೇಶವ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಹಾಗೂ ನಾಗಮಂಗಲ ಪುರಸಭೆ ಕಚೇರಿ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ 10ನೇ ಸ್ವಚ್ಛ ಸರ್ವೇಕ್ಷಣ್ ಜನ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು. ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣ್ ಕಾರ್ಯಕ್ರಮವನ್ನು ಪೂರ್ಣ ಪ್ರಮಾಣದಲ್ಲಿ ಸಾಕಾರಗೊಳಿಸುವ ನಿಟ್ಟಿನಲ್ಲಿ ಇಲ್ಲಿನ ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಟೊಂಕಕಟ್ಟಿ ನಿಂತಿದ್ದು, ಹಗಲಿರುಳು ಶ್ರಮಿಸುತ್ತಿದ್ದಾರೆ. ಪುರಸಭೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿಯೂ ಸ್ವಚ್ಛತೆಗೆ ಆದ್ಯತೆ ಕೊಟ್ಟು ಪಟ್ಟಣ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯ ವಸ್ತುಗಳನ್ನು ಬಿಸಾಡದಂತೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಜನರು ಸ್ವಪ್ರೇರಣೆಯಿಂದ ಸ್ವಚ್ಛತೆ ಕಾಪಾಡಬೇಕು ಎಂದರು.
ಸಾರ್ವಜನಿಕ ಆರೋಗ್ಯ ಸುರಕ್ಷತೆ ಮತ್ತು ಪರಿಸರ ನೈರ್ಮಲ್ಯ ಕಾಪಾಡುವ ದೃಷ್ಟಿಯಿಂದ ಪಟ್ಟಣ ವ್ಯಾಪ್ತಿಯ ಎಲ್ಲ ಅಂಗಡಿ ಮುಂಗಟ್ಟುಗಳಲ್ಲಿ ಸಂಗ್ರಹವಾಗುವ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ಪ್ರತಿನಿತ್ಯ ಆಯಾ ವಾರ್ಡ್‌ಗಳಲ್ಲಿ ಸಂಚರಿಸುವ ಪುರಸಭೆಯ ವಾಹನಕ್ಕೆ ನೀಡುವುದನ್ನು ರೂಢಿಸಿಕೊಳ್ಳಬೇಕು. ಬಳಕೆಗೆ ಬಾರದ ಹಳೆ ಕಟ್ಟಡಗಳ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಪುರಸಭೆ ವತಿಯಿಂದ ನಿಗದಿಪಡಿಸಿರುವ ಸ್ಥಳದಲ್ಲಿಯೇ ಹಾಕಬೇಕು. ಮನೆಯ ಆಸುಪಾಸಿನ ರಸ್ತೆ, ಚರಂಡಿಯನ್ನು ಆಗಾಗ್ಗೆ ಸ್ವಚ್ಛಗೊಳಿಸಿಕೊಳ್ಳುವ ಮೂಲಕ ಉತ್ತಮ ಪರಿಸರ ಕಾಪಾಡಿಕೊಳ್ಳಬೇಕು. ಪುರಸಭೆಯಿಂದ ಪಟ್ಟಣ ವ್ಯಾಪ್ತಿಯ ಹೆದ್ದಾರಿಯ ರಸ್ತೆ ವಿಭಜಕದಲ್ಲಿ ನೆಟ್ಟಿರುವ ಗಿಡಗಳನ್ನು ರಕ್ಷಣೆ ಮಾಡಿ ಪರಿಸರ ಕಾಳಜಿ ತೋರಬೇಕು ಎಂದು ಜನರಲ್ಲಿ ಮನವಿ ಮಾಡಿದರು.
1 ಕೋಟಿ ರೂ.ವೆಚ್ಚದಲ್ಲಿ ದೇವಸ್ಥಾನ ಅಭಿವೃದ್ಧಿ
ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಸೌಮ್ಯಕೇಶವಸ್ವಾಮಿ ದೇವಸ್ಥಾನದ ಪ್ರಾಂಗಣ ಸೇರಿದಂತೆ ಹಲವು ಅಭಿವೃದ್ಧಿಗಾಗಿ ಪುರಾತತ್ವ ಇಲಾಖೆ ವತಿಯಿಂದ 1 ಕೋಟಿ ರೂ.ಅನುದಾನ ಬಿಡುಗಡೆಯಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭಗೊಳ್ಳಲಿದೆ. ಪ್ರತಿ ವರ್ಷ ನಡೆಯುವ ರಥೋತ್ಸವದ ನೂತನ ರಥ ಸಿದ್ಧಪಡಿಸಲು 80 ಲಕ್ಷ ರೂ.ಅಂದಾಜು ವೆಚ್ಚದ ಪೈಕಿ ರಾಜ್ಯ ಸರ್ಕಾರ ಈಗಾಗಲೇ 38ಲಕ್ಷ ರೂ.ಹಣ ಬಿಡುಗಡೆ ಮಾಡಿದೆ. ಇನ್ನುಳಿದ 42ಲಕ್ಷ ರೂ.ಗಳನ್ನು ತಕ್ಷಣ ಬಿಡುಗಡೆ ಮಾಡಿಸಲಾಗುವುದು. ಮುಂದಿನ ಒಂದು ವರ್ಷದೊಳಗೆ ಹೊಸ ರಥ ಸಿದ್ಧಗೊಳ್ಳಲಿದೆ ಎಂದು ತಿಳಿಸಿದರು.
ಸೌಮ್ಯಕೇಶವ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಚಾಮರಾಜನಗರ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯ ಮಂಡ್ಯ ವೃತ್ತದವರೆಗೆ ಪುರಸಭೆ ಅಧಿಕಾರಿಗಳು, ಸಿಬ್ಬಂದಿ, ಪೌರಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ವಿವಿಧ ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳ ಸದಸ್ಯರು ಜಾಥಾದಲ್ಲಿ ಪಾಲ್ಗೊಂಡಿದ್ದರು.
ತಹಸೀಲ್ದಾರ್ ಜಿ.ಆದರ್ಶ, ಪುರಸಭೆ ಮುಖ್ಯಾಧಿಕಾರಿ ವೀಣಾ, ತಾಪಂ ಇಒ ಸತೀಶ್, ಡಿವೈಎಸ್‌ಪಿ ಬಿ.ಚಲುವರಾಜು, ಪಟ್ಟಣ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಶಿವಕುಮಾರ್, ಸಿಪಿಐ ಹೇಮಂತ್‌ಕುಮಾರ್, ಸಿಡಿಪಿಒ ಕೃಷ್ಣಮೂರ್ತಿ, ಹಿರಿಯ ಆರೋಗ್ಯ ನಿರೀಕ್ಷಕ ವೆಂಕಟೇಶ್, ನಿಂಗೇಗೌಡ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net