ಶಾಸಕರಿಂದ ಸೂಳೆಕೆರೆ ಅಭಿವೃದ್ಧಿ ಕಾಮಗಾರಿ ವೀಕ್ಷಣೆ

ಮುಟ್ಟನಹಳ್ಳಿ ಗ್ರಾಮದ ಬಳಿ ಇರುವ ಸೂಳೆಕೆರೆ ಕಾಮಗಾರಿಯನ್ನು ಶಾಸಕ ಕದಲೂರು ಉದಯ್ ವೀಕ್ಷಿಸಿದರು.
ಮುಟ್ಟನಹಳ್ಳಿ ಗ್ರಾಮದ ಬಳಿ ಇರುವ ಸೂಳೆಕೆರೆ ಕಾಮಗಾರಿಯನ್ನು ಶಾಸಕ ಕದಲೂರು ಉದಯ್ ವೀಕ್ಷಿಸಿದರು.
Published on
ಕೆ.ಎಂ.ದೊಡ್ಡಿ: ಸೂಳೆಕೆರೆ ಒತ್ತುವರಿ ತೆರವುಗೊಳಿಸಲಾಗಿದ್ದು, ಕೆರೆ ಹೂಳೆತ್ತಿದ ಬಳಿಕ ಅಧಿಕ ನೀರು ಸಂಗ್ರಹವಾಗಲಿದೆ ಎಂದು ಶಾಸಕ ಕದಲೂರು ಉದಯ್ ತಿಳಿಸಿದರು.
ಸಮೀಪದ ಮುಟ್ಟನಹಳ್ಳಿ ಗ್ರಾಮದ ಬಳಿ ಇರುವ ಸೂಳೆಕೆರೆ ಕಾಮಗಾರಿಯನ್ನು ಇತ್ತೀಚೆಗೆ ವೀಕ್ಷಣೆ ಮಾಡಿ ಮಾತನಾಡಿದ ಅವರು, ಸೂಳೆಕೆರೆಯಲ್ಲಿನ ಹೂಳು ತೆಗೆದು ನೀರಿನ ಮಟ್ಟವನ್ನು ಹೆಚ್ಚಿಸಲಾಗುತ್ತಿದ್ದು, ರೈತರ ಬೆಳೆಗಳಿಗೆ ನೀರಿನ ಬವಣೆ ತೀರಿಸಿ, ಉತ್ತಮ ಬೆಳೆ ಬೆಳೆಯಲು ಅನುವು ಮಾಡಿ ಕೊಡಲಾಗುತ್ತಿದೆ ಎಂದರು.
ಚಿಕ್ಕರಸಿನಕೆರೆ ಹೋಬಳಿಯ ರೈತರ ಜೀವನಾಡಿಯಾಗಿರುವ ಸೂಳೆಕೆರೆ ಅಭಿವೃದ್ಧಿಗೆ ಪಣ ತೊಟ್ಟಿದ್ದು, ಅದರಂತೆ ಕಾರ್ಯಯೋಜನೆ ರೂಪಿಸಲಾಗಿದೆ. ಉತ್ತಮ ಪ್ರವಾಸಿತಾಣ ಮಾಡಿ ಜಿಲ್ಲೆಯ ಪ್ರವಾಸಿ ತಾಣಗಳ ಪಟ್ಟಿಗೆ ಸೇರಿಸಲು ಅಣಿಯಾಗಿದ್ದೇನೆ. ಚಿಕ್ಕರಸಿನಕೆರೆ ಹೋಬಳಿಯ ಬಹುತೇಕ ಗ್ರಾಮಗಳ ರೈತರ ಜೀವನಾಡಿ ಸೂಳೆಕೆರೆ ವ್ಯಾಪ್ತಿಗೆ ಬರುವ ರೈತರ ದೀರ್ಘಕಾಲದ ನೀರಾವರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಒತ್ತುವರಿ ತೆರವು ಹಾಗೂ ನಾಲೆಗಳ ಆಧುನೀಕರಣ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಮದ್ದೂರು ಕ್ಷೇತ್ರದ ನೀರಾವರಿ ವ್ಯವಸ್ಥೆಗೆ ಅಮೂಲಗ್ರ ಸುಧಾರಣೆ, ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಬಲ ತರುವ ನಿಟ್ಟಿನಲ್ಲಿ ಸೂಳೆಕೆರೆ ಕೆರೆಗೆ ಕಾಯಕಲ್ಪ ಹಾಗೂ ನಾಲೆಗಳ ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ಈ ಮಹತ್ವದ ಯೋಜನೆ ಕಾರ್ಯಗತಗೊಳ್ಳುತ್ತಿದೆ. ಕೆರೆಯ ಒಟ್ಟು ವಿಸ್ತೀರ್ಣ 845 ಎಕರೆ 34 ಗುಂಟೆಯಾಗಿದ್ದು, ಸುಮಾರು 6630 ಎಕರೆ ಅಚ್ಚುಕಟ್ಟು ಪ್ರದೇಶವನ್ನು ಒಳಗೊಂಡಿದೆ. ಸಾರ್ವಜನಿಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕೆರೆಯನ್ನು ಸೌಂದರ್ಯೀಕರಣಗೊಳಿಸಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
ರೈತರು ಹಿಂದಿನಂದಲೂ ಅನುಭವಿಸುತ್ತಿದ್ದ ನೀರಿನ ಸಮಸ್ಯೆಗೆ ಶಾಶ್ವತವಾಗಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ಕೊನೆಭಾಗದ ರೈತರಿಗೆ ಸಮರ್ಪಕವಾಗಿ ನೀರನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಕಾಮಗಾರಿ ಸಂದರ್ಭದಲ್ಲಿ ರೈತರ ಸಹಕಾರ ಅತ್ಯಗತ್ಯ ಎಂದು ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೈಲೂರು ಚಲುವರಾಜು, ಕಾವೇರಿ ನೀರಾವರಿ ನಿಗಮದ ಎಇಇ ಪ್ರಶಾಂತ್ ಲಿಂಗಯ್ಯ, ಎಇ ಅವಿನಾಶ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net