ಹಾನಿಗೊಳಗಾದ ಕಬ್ಬು ಪರಿಶೀಲಿಸಿದ ಶಾಸಕ: ಸಂತ್ರಸ್ತರಿಗೆ ವೈಯಕ್ತಿಕ ಪರಿಹಾರ ವಿತರಿಸಿದ ಪಿ.ರವಿಕುಮಾರ್ ಗಣಿಗ

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಬ್ಬು ಬೆಳೆ ನಾಶವಾದ ಹಿನ್ನೆಲೆಯಲ್ಲಿ ರೈತನಿಗೆ ಶಾಸಕ ಪಿ.ರವಿಕುಮಾರ್ ಗಣಿಗ ವೈಯಕ್ತಿಕ ಪರಿಹಾರ ವಿತರಿಸಿದರು.
ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಬ್ಬು ಬೆಳೆ ನಾಶವಾದ ಹಿನ್ನೆಲೆಯಲ್ಲಿ ರೈತನಿಗೆ ಶಾಸಕ ಪಿ.ರವಿಕುಮಾರ್ ಗಣಿಗ ವೈಯಕ್ತಿಕ ಪರಿಹಾರ ವಿತರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಆಕಸ್ಮಿಕ ಬೆಂಕಿ ಅವಘಡದಿಂದಾಗಿ ರೈತರಿಗೆ ನಷ್ಟ
  • ಸರ್ಕಾರದಿಂದ ದೊರೆಯಬೇಕಾದ ಪರಿಹಾರ ತ್ವರಿತ ಮಂಜೂರಿಗೆ ಸೂಚನೆ
ಮಂಡ್ಯ: ಆಕಸ್ಮಿಕ ಬೆಂಕಿ ಅವಘಡದಿಂದ ಮಂಡ್ಯ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮದಲ್ಲಿ ಹಾನಿಗೊಳಗಾಗಿದ್ದ ಕಬ್ಬು ಬೆಳೆಯನ್ನು ಶಾಸಕ ಪಿ.ರವಿಕುಮಾರ್ ಗಣಿಗ ಪರಿಶೀಲಿಸಿದರು.
ದೊಡ್ಡಕೊತ್ತಗೆರೆ, ಚಾಮಲಾಪುರ, ಗುಡಿಗೇನಹಳ್ಳಿ ಹಾಗೂ ದೊಡ್ಡಗರುಡನಹಳ್ಳಿ ಗ್ರಾಮದಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡದಿಂದ ಕಬ್ಬಿನ ಬೆಳೆ ಹಾಳಾಗಿತ್ತು. ಈ ಹಿನ್ನೆಲೆಯಲ್ಲಿ ರವಿಕುಮಾರ್ ಸ್ಥಳ ಪರಿಶೀಲನೆ ನಡೆಸಿದರು.
ಬೆಂಕಿ ಅವಘಡದಿಂದ ಸುಮಾರು 10 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬಿನ ಬೆಳೆ ಸಂಪೂರ್ಣ ಸುಟ್ಟು ಅಪಾರ ನಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತ ರೈತರನ್ನು ಭೇಟಿ ಮಾಡಿ ಸಮಸ್ಯೆ ಆಲಿಸಿ ಧೈರ್ಯ ತುಂಬಿದರು. ಬೆಳೆ ಕಳೆದುಕೊಂಡ ರೈತರು ಎದುರಿಸುತ್ತಿರುವ ಸಂಕಷ್ಟವನ್ನು ಮನಗಂಡು ಸ್ಥಳದಲ್ಲಿಯೇ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿದರು.
ಈ ವೇಳೆ ಅಧಿಕಾರಿಗಳೊಂದಿಗೆ ಸ್ಥಳದಲ್ಲೇ ಚರ್ಚಿಸಿದ ಶಾಸಕರು, ಹಾನಿಯ ಸಮಗ್ರ ಸಮೀಕ್ಷೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಸರ್ಕಾರದಿಂದ ದೊರೆಯಬೇಕಾದ ಪರಿಹಾರವನ್ನು ಯಾವುದೇ ವಿಳಂಬವಿಲ್ಲದೆ ಮಂಜೂರು ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಂತ್ರಸ್ತ ರೈತರಿಗೆ ಸರ್ಕಾರದ ಎಲ್ಲ ಸೌಲಭ್ಯಗಳು ಹಾಗೂ ಪರಿಹಾರ ಸಿಗುವಂತೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನೂ ನೀಡಿದರು.
ಪಿ.ರವಿಕುಮಾರ್ ಮಾತನಾಡಿ, ರೈತರ ಹಿತಾಸಕ್ತಿಯೇ ತಮ್ಮ ಮೊದಲ ಆದ್ಯತೆ. ಯಾವುದೇ ಪ್ರಕೃತಿ ವಿಕೋಪ ಅಥವಾ ಅನಾಹುತದಿಂದ ರೈತರು ಸಂಕಷ್ಟಕ್ಕೆ ಸಿಲುಕಿದರೆ ಸರ್ಕಾರದ ನೆರವು ತಲುಪಿಸುವ ಜತೆಗೆ ವೈಯಕ್ತಿಕವಾಗಿಯೂ ನೆರವಾಗಲು ಸದಾ ಸಿದ್ಧನಿದ್ದೇನೆ ಎಂದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಚಿಕ್ಕಬಳ್ಳಿ ಕೃಷ್ಣ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net