ಮದ್ದೂರು ನಗರದ ತಾ. ಪಂ. ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಕುಂದು ಕೊರತೆ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಮಾತನಾಡಿದರು. ಯಶವಂತ್‌ಕುಮಾರ್, ನವೀನ್‌ಕುಮಾರ್, ನಾರಾಯಣ್, ನಾಗರಾಜು ಇದ್ದರು.
ಮದ್ದೂರು: ತಾಲೂಕಿನ ಶಿಂಷಾ ನದಿ ಪಾತ್ರದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಹಾಗೂ ಗಾಂಜಾ ಸೇರಿದಂತೆ ಮಾದಕ ವಸ್ತು ಸೇವನೆ ಮತ್ತು ಸರಬರಾಜಿಗೆ ಕಡಿವಾಣ ಹಾಕಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಭರವಸೆ ನೀಡಿದರು.
ನಗರದ ತಾ.ಪಂ.ಸಭಾಂಗಣದಲ್ಲಿ ಶನಿವಾರ ನಡೆದ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಕುಂದುಕೊರತೆ ಸಭೆಯ ಬಳಿಕ ಮಾತನಾಡಿದರು.
ತಾಲೂಕಿನ ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ತುಮಕೂರು ಹೆದ್ದಾರಿಯಲ್ಲಿ ಕಳೆದ ತಿಂಗಳು ಅಕ್ರಮವಾಗಿ ಸಾಗಿಸುತ್ತಿದ್ದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಈಗ ಸಭೆಯಲ್ಲೂ ಮದ್ದೂರು ನಗರದ ರಾಮ್ ರಹೀಮ್ ನಗರದ ಆಸು ಪಾಸಿನ ಹಲವು ಕಡೆಗಳಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂದು ದೂರು ಸಾರ್ವಜನಿಕರಿಂದಲೂ ಕೇಳಿ ಬಂದಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಕಳೆದ 6 ತಿಂಗಳಿಂದ ಮದ್ಯ ಅಕ್ರಮ ಮಾರಾಟ ಮಾಡುತ್ತಿದ್ದ 414 ಪ್ರಕರಣ ದಾಖಲು ಮಾಡಿದ್ದೇವೆ. ನಿಯಮದ ಪ್ರಕಾರ ಇಂತಿಷ್ಟು ಪ್ರಮಾಣದ ಮದ್ಯ ಇಟ್ಟುಕೊಳ್ಳಲು ಅವಕಾಶ ಇದೆ. ಅದನ್ನು ಮೀರಿ ಸಂಗ್ರಹಿಸಿದ್ದರೆ ಕಾನೂನು ರೀತಿ ಪ್ರಕರಣ ದಾಖಲಿಸಲಾಗುತ್ತದೆ ಹಾಗೂ 80ಕ್ಕೂ ಅಧಿಕ ಡ್ರಗ್ಸ್ ಪೆಡ್ಲೆರ್ಸ್ ವಿರುದ್ಧ ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದರು.
ಇತ್ತೀಚೆಗೆ ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ವಾಹನ ಸವಾರರ ಮೇಲೆ ಹಲ್ಲೆ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಶೋಭಾರಾಣಿ, ಹೆದ್ದಾರಿಯಲ್ಲಿ ಗಸ್ತು ವಾಹನವನ್ನು ಮತ್ತಷ್ಟು ಸಕ್ರಿಯಗೊಳಿಸುವುದು ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಲ್ಯಾಂಡ್ ಲೈನ್ ಸಂಪರ್ಕ ಇಲ್ಲ: ನಗರದ ಪೊಲೀಸ್ ಠಾಣೆಯಲ್ಲಿ ಹಲವು ತಿಂಗಳಿನಿಂದ ಲ್ಯಾಂಡ್ ಲೈನ್ ದೂರವಾಣಿ ಸಂಪರ್ಕ ಇಲ್ಲ. ದೂರು ನೀಡಲು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಸಭೆಯಲ್ಲಿ ಸಾರ್ವಜನಿಕರೊಬ್ಬರು ಆರೋಪಿಸಿದರು. ಈ ಬಗ್ಗೆ ನಗರದ ಸಿಪಿಐ ನವೀನ್ ಕುಮಾರ್‌ರಿಂದ ಮಾಹಿತಿ ಪಡೆದ ಜಿಲ್ಲಾ ಎಸ್‌ಪಿ ಕೂಡಲೇ ಸರಿಪಡಿಸುವಂತೆ ಸೂಚನೆ ನೀಡಿದರು.
ದಲಿತ ಸಂಘರ್ಷ ಸಮಿತಿ ಸಂಚಾಲಕ ಆನಂದ್ ಮಾತನಾಡಿ, ನಗರದ ಚನ್ನೇಗೌಡ ಬಡಾವಣೆ, ರಾಂ ರಹಿಂ ನಗರ, ಸಿದ್ದಾರ್ಥ ನಗರಗಳಲ್ಲಿ ಬಹುತೇಕ ಕೂಲಿ ಕಾರ್ಮಿಕ, ಜನರೇ ವಾಸ ಮಾಡುತ್ತಿದ್ದಾರೆ. ರಾಂ ರಹಿಂ ನಗರದಲ್ಲಿ ಈಗಾಗಲೇ ಕೋಮು ಗಲಭೆ ನಡೆದು, ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿದೆ. ಅತಿಸೂಕ್ಷ್ಮವಾಗಿರುವ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ಎಗ್ಗಿಲ್ಲದೇ ನಡೆಯುತ್ತಿರುವುದರಿಂದ ಅಹಿತಕರ ಘಟನೆಗಳು ಆಗಿಂದಾಗ್ಗೆ ನಡೆಯುತ್ತಿವೆ. ಕಳೆದ ವರ್ಷ ಗಣೇಶ ವಿಸರ್ಜನೆ ವೇಳೆ ನಡೆದ ಕೋಮು ಗಲಭೆಗೆ ಮದ್ಯ ಅಕ್ರಮ ಮಾರಾಟ ದಂಧೆಯೇ ಪ್ರಮುಖ ಕಾರಣ. ನಗರದ ಪೊಲೀಸರು ತಪ್ಪಿತಸ್ಥರನ್ನು ಬಂಧಿಸಿ ಜೈಲಿಗೆ ಅಟ್ಟಬೇಕು ಎಂದು ಆಗ್ರಹಿಸಿದರು.
ನಗರದ ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವ ರಾಂ ರಹೀಂ ನಗರದಲ್ಲಿ ಸೂಕ್ತ ಪೊಲೀಸ್ ಚೌಕಿ ನಿರ್ಮಿಸಬೇಕು. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪೊಲೀಸರು ನಿಗಾ ಇಡಬೇಕು ಎಂದು ದಲಿತ ಹಕ್ಕುಗಳ ಸಮಿತಿ ಮುಖಂಡ ವಿಜೇಂದ್ರ ಕುಮಾರ್ ಮನವಿ ಮಾಡಿದರು.
ಈ ಕುರಿತು ಸಿಪಿಐ ನವೀನ್ ಮಾತನಾಡಿ, ನಗರದ ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವ ರಾಂ ರಹೀಂ ನಗರ, ಚನ್ನೇಗೌಡ ಬಡಾವಣೆ, ಸಿದ್ದಾರ್ಥನಗರ ಈ ಮೂರು ಬಡಾವಣೆಗಳ ಮೇಲೆ ನಿಗಾ ಇಡಲು ಪ್ರತ್ಯೇಕ ವಜ್ರ ಪೊಲೀಸರನ್ನು ನಿಯೋಜಿಸಲಾಗಿದೆ. ಅವರು ದಿನದ 24 ಗಂಟೆಯೂ ಗಸ್ತಿನಲ್ಲಿರುತ್ತಾರೆ. ಯಾವುದೇ ಸಮಸ್ಯೆ ಉಂಟಾದರೂ ತಕ್ಷಣಕ್ಕೆ ಸ್ಪಂದಿಸುತ್ತಾರೆ ಎಂದರು.
ಸಭೆಯಲ್ಲಿ ಡಿ.ವೈ.ಎಸ್ಪಿ ಯಶವಂತ್ ಕುಮಾರ್, ಸಿಪಿಐ ನವೀನ್ ಕುಮಾರ್, ನಾರಾಯಣ್, ಸಮಾಜ ಕಲ್ಯಾಣಾಧಿಕಾರಿ ನಾಗರಾಜು. ಮುಖಂಡರಾದ ಮರಳಿಗ ಶಿವರಾಜು, ಮಹದೇವಯ್ಯ, ಮಾದೇಶ, ವೆಂಕಟಾಚಲಯ್ಯ, ರಮಾನಂದ, ಕೃಷ್ಣ, ಸಿದ್ದರಾಜು, ರಾಜೇಂದ್ರ ಇತರರು ಇದ್ದರು.