ಮದ್ದೂರು: ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಸುಸಜ್ಜಿತವಾದ ಅಂಗನವಾಡಿ ಕಟ್ಟಡ ಹಾಗೂ ಮೂಲಸೌಕರ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ತಾಲೂಕಿನ ಮಲ್ಲನಕುಪ್ಪೆಯಲ್ಲಿ ಮಂಗಳವಾರ 20 ಲಕ್ಷ ರೂ.ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಮದಲ್ಲಿ ಮಕ್ಕಳಿಗೆ ಸುಸಜ್ಜಿತ ಕಟ್ಟಡದ ಅವಶ್ಯಕತೆ ಇತ್ತು. ನರೇಗಾ ಮತ್ತು ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ. ಕಾಮಗಾರಿ ಗುಣಮಟ್ಟದಿಂದ ಮತ್ತು ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳಲಿದೆ. ಇದರಿಂದ ಮಕ್ಕಳಿಗೆ ಅನುಕೂಲವಾಗಲಿದೆ ಎಂದರು.
ತಾಲೂಕಿನಲ್ಲಿ ಮತ್ತಷ್ಟು ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಹಂತ ಹಂತವಾಗಿ ಆದ್ಯತೆ ಮೇರೆಗೆ ನಿರ್ಮಿಸಲಾಗುವುದು ಎಂದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಚಲುವರಾಜು, ಮುನ್‌ಮುಲ್ ನಿರ್ದೇಶಕ ಹರೀಶ್ ಬಾಬು, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಮುಖಂಡರಾದ ಕೆಸ್ತೂರು ಕೆ.ದಾಸೇಗೌಡ, ಸಿಪಾಯಿ ಶ್ರೀನಿವಾಸ್, ನವೀನ್, ತಿಮ್ಮ, ಶಂಕರೇಗೌಡ, ಸಿಡಿಪಿಒ ಅರುಣ್‌ಕುಮಾರ್ ಮತ್ತಿತರರು ಇದ್ದರು.