ಶ್ರೀರಂಗನಾಥಸ್ವಾಮಿ ಚಿಕ್ಕತೇರು ಸಂಭ್ರಮ

ಐತಿಹಾಸಿಕ ಶ್ರೀರಂಗನಾಥಸ್ವಾಮಿ ದೇವಾಲಯದ ಮುಂಭಾಗದಲ್ಲಿ ಮಕರ ಸಂಕ್ರಾಂತಿ ಮರುದಿನವಾದ ಶುಕ್ರವಾರ ಶ್ರೀದೇವಿ, ಭೂದೇವಿ, ಶ್ರೀರಂಗನಾಯಕಿ ಅಮ್ಮನವರ ಸಮೇತ ಶ್ರೀ ಆದಿರಂಗನಾಥಸ್ವಾಮಿಯ ಚಿಕ್ಕತೇರು ಸಂಭ್ರಮದಿಂದ ಜರುಗಿತು.
ಐತಿಹಾಸಿಕ ಶ್ರೀರಂಗನಾಥಸ್ವಾಮಿ ದೇವಾಲಯದ ಮುಂಭಾಗದಲ್ಲಿ ಮಕರ ಸಂಕ್ರಾಂತಿ ಮರುದಿನವಾದ ಶುಕ್ರವಾರ ಶ್ರೀದೇವಿ, ಭೂದೇವಿ, ಶ್ರೀರಂಗನಾಯಕಿ ಅಮ್ಮನವರ ಸಮೇತ ಶ್ರೀ ಆದಿರಂಗನಾಥಸ್ವಾಮಿಯ ಚಿಕ್ಕತೇರು ಸಂಭ್ರಮದಿಂದ ಜರುಗಿತು.
Published on

ಪ್ರಮುಖ ಮುಖ್ಯಾಂಶಗಳು

  • ವಿಶೇಷ ಪಲ್ಲಕ್ಕಿಯಲ್ಲಿ ಉತ್ಸವಮೂರ್ತಿ ಮೆರವಣಿಗೆ
ಶ್ರೀರಂಗಪಟ್ಟಣ: ಐತಿಹಾಸಿಕ ಶ್ರೀರಂಗನಾಥ ಸ್ವಾಮಿಯ ಚಿಕ್ಕತೇರು ಶುಕ್ರವಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.
ಪುರಾಣ ಪ್ರಸಿದ್ಧ ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಮಧ್ಯಾಹ್ನ 3.45ರ ವೇಳೆಗೆ ಶ್ರೀದೇವಿ, ಭೂದೇವಿ, ಶ್ರೀರಂಗನಾಯಕಿ ಅಮ್ಮನವರ ಸಮೇತವಿರುವ ಪಂಚಲೋಹದ ಶ್ರೀರಂಗನಾಥಸ್ವಾಮಿ ಉತ್ಸವಮೂರ್ತಿಗೆ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಉಮಾ ಹಾಗೂ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸೋಮಶೇಖರ್ ಸಮ್ಮುಖದಲ್ಲಿ ಪ್ರಧಾನ ಅರ್ಚಕ ವಿಜಯಸಾರಥಿ ಹಾಗೂ ಪ್ರಸನ್ನ ನೇತೃತ್ವದಲ್ಲಿ ವೈದಿಕರ ತಂಡ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ವಿಷ್ಣು ಸಹಸ್ರನಾಮ ಪಠಣದೊಂದಿಗೆ ವಿಶೇಷ ಪಲ್ಲಕ್ಕಿಯಲ್ಲಿ ಮೆರವಣಿಗೆ ನಡೆಸಿ ಬಳಿಕ ಹೋಮ, ಬಲಿಪ್ರದಾನ, ಯಾತ್ರದಾನಗಳೊಂದಿಗೆ ದೇವಾಲಯದ ಹೊರಭಾಗದ ಸುತ್ತಲೂ ಉತ್ಸವಮೂರ್ತಿಗಳನ್ನು ಚಿಕ್ಕತೇರಿನಲ್ಲಿ ಕೂರಿಸಿ ಬ್ರಹ್ಮರಥವನ್ನು ಶ್ರೀರಂಗಪಟ್ಟಣದ ಪುರಜನರು ಹಾಗೂ ಶ್ರೀರಂಗನ ಭಕ್ತರೊಂದಿಗೆ ದೇವಾಲಯದ ಸುತ್ತಲು ಸಂಭ್ರಮದಿಂದ ಎಳೆದರು.
ಶ್ರೀಆದಿರಂಗನಾಥಸ್ವಾಮಿಗೆ ಉತ್ತರಾಯಣ ಸಮಯದಲ್ಲಿ ವಿಶೇಷವಾಗಿ ಎರಡು ಬ್ರಹ್ಮರಥೋತ್ಸವ ಜರುಗಲಿದೆ. ರಥಸಪ್ತಮಿಯ ಬ್ರಹ್ಮರಥೋತ್ಸವಕ್ಕೂ ಮುನ್ನ ಚಿಕ್ಕತೇರಿನ ರಥೋತ್ಸವ ಜರುಗುತ್ತದೆ.
19ರವರೆಗೆ ವೈಕುಂಠದ್ವಾರ ಪ್ರವೇಶಕ್ಕೆ ಅವಕಾಶ
ಮಕರ ಸಂಕ್ರಾಂತಿ ಪ್ರಯುಕ್ತ ವರ್ಷಕ್ಕೊಮ್ಮೆ ತೆರೆಯುವ ವೈಕುಂಠ ದ್ವಾರದ ಪ್ರವೇಶಕ್ಕೆ ಭಕ್ತರು ಹಾಗೂ ಸಾರ್ವಜನಿಕರಿಗಾಗಿ ಜ.19ರ ಸೋಮವಾರದವರೆಗೆ ಶ್ರೀರಂಗನಾಥಸ್ವಾಮಿ ದೇವಾಲಯ ಆಡಳಿತ ಅವಕಾಶ ಕಲ್ಪಿಸಿದ್ದು, ವರ್ಷಕ್ಕೊಮ್ಮೆ ತೆರಯುವ ವೈಕುಂಠ ದ್ವಾರ ಪ್ರವೇಶಿಸಿ ವೈಕುಂಠ ನಾರಾಯಣನ ಮೂಲ ದೇವರ ದರ್ಶನ ಪಡೆದು ಸ್ವರ್ಗದ ಬಾಗಿಲಲ್ಲಿ ನಿಂತು ನಾರಾಯಣನನ್ನು ಪ್ರಾರ್ಥಿಸಬಹುದಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net