ಶ್ರೀ ಮಸಣಕಮ್ಮ, ಶ್ರೀ ಮಂಚಮ್ಮ ದೇವಿ ಜಾತ್ರಾ ಮಹೋತ್ಸವ

Shree Masanakamma
Shree Masanakamma
Published on
ಮದ್ದೂರು: ತಾಲೂಕಿನ ಆಲೂರು-ಆಲೂರುದೊಡ್ಡಿ ಗ್ರಾಮದ ಶ್ರೀ ಆಲೂರಮ್ಮ, ಶ್ರೀ ಮಸಣಕಮ್ಮ, ಶ್ರೀ ಮಂಚಮ್ಮ ದೇವರುಗಳ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.
ಮಾರ್ಚ್ 10ರ ಮಂಗಳವಾರ ಬೆಳಗ್ಗೆ 7.30 ರಿಂದ 8.30 ಕ್ಕೆ ಮೀಸಲು ನೀರು ತರಲಾಯಿತು. ಆಲೂರಮ್ಮ, ಮಸಣಕಮ್ಮ, ಮಂಚಮ್ಮನವರ ಮಹಾಮಂಗಳಾರತಿ ಜರುಗಿತು. 5 ಗಂಟೆಗೆ ಆಲೂರು-ಆಲೂರುದೊಡ್ಡಿ, ನಗರಕೆರೆ, ವೈದ್ಯನಾಥಪುರ, ಬೂದಗುಪ್ಪೆ ಗ್ರಾಮಸ್ಥರಿಂದ ತಂಬಿಟ್ಟಿನಾರತಿ, ಬಂಡಿ ಉತ್ಸವ ಅದ್ದೂರಿಯಾಗಿ ನಡೆಯಿತು.
ರಾತ್ರಿ 8 ಗಂಟೆಗೆ ನಗರಕೆರೆ ಗ್ರಾಮಸ್ಥರಿಂದ ಅಮ್ಮನವರ ಕೊಂಡಕ್ಕೆ ಪೂಜಾ ವಿಧಿ-ವಿಧಾನಗಳೊಡನೆ ಅಗ್ನಿಸ್ಪರ್ಶ ನೆರವೇರಿತು. ಮಂಗಳವಾರ ಬೆಳಗ್ಗೆ ಆಲೂರು ಬೀರೇಶ್ವರ ದೇವರ ಭಾನುವಾರ ಮತ್ತು ಗುರುವಾರದ ಎರಡು ಗಡಿಯ ವೀರಗಾಸೆ ಜತೆಗೂಡಿ ಶಿಂಷಾ ನದಿಯಿಂದ ಹೂಹೊಂಬಾಳೆ ಮೆರವಣಿಗೆ ಹೊರಟು ಬಳಿಕ ಆಲೂರಮ್ಮ ಅಗ್ನಿಕೊಂಡ ಪ್ರವೇಶ ಮಾಡಿತು.
ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಾರ್ಚ್ 11ರ ಬುಧವಾರ ಸಾಯಂಕಾಲ 8 ಗಂಟೆಗೆ ಎರಡು ಗ್ರಾಮಗಳಲ್ಲಿ ದೇವಿಯ ಉತ್ಸವ ಮೂರ್ತಿ, ಪೂಜಾ ಮೆರವಣಿಗೆ ನೆರವೇರಲಿದೆ.
ಜಾತ್ರಾ ಮಹೋತ್ಸವ ಅಂಗವಾಗಿ ಮಾರ್ಚ್ 9ರ ಸೋಮವಾರ 5 ಗಂಟೆಗೆ ಆಲೂರಮ್ಮ ದೇವಿಯ ಹಲವು ಪೂಜಾ ವಿಧಿ ವಿಧಾನಗಳು ಆರಂಭಗೊಂಡಿತ್ತು. ವೈದ್ಯನಾಥಪುರ ಗ್ರಾಮಸ್ಥರಿಂದ ಅಮ್ಮನವರ ಕೊಂಡ ಕೀಳುವ ಕಾರ್ಯಕ್ರಮದ ಜತೆಗೆ ಆಲೂರು-ಆಲೂರುದೊಡ್ಡಿ ಗ್ರಾಮಸ್ಥರಿಂದ ರಾತ್ರಿ ಕರಗ ಮಹೋತ್ಸವ ನೆರವೇರಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net