

ಮದ್ದೂರು: ಕ್ರೀಡಾಕೂಟಗಳು ಮನುಷ್ಯನ ಸರ್ವಾಂಗೀಣ ಅಭಿವೃದ್ಧಿಗೆ ಮತ್ತು ಆರೋಗ್ಯಯುತ ಜೀವನಕ್ಕೆ ಅತ್ಯಂತ ಅವಶ್ಯಕ ಎಂದು ನೋಡಲ್ ಅಧಿಕಾರಿ ಹಾಗೂ ಪ್ರಾಂಶುಪಾಲೆ ಎ.ಸಿ.ಗೀತಾ ತಿಳಿಸಿದರು.
ನಗರದ ಸೋಮನಹಳ್ಳಿಯ ಎಸ್‌ಸಿಎಂಎಂ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಗುರುವಾರ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ಕಾಲೇಜು) ಹಾಗೂ ಎಸ್‌ಸಿಎಂಎಂ ಪದವಿಪೂರ್ವ ಕಾಲೇಜಿನ ವತಿಯಿಂದ ಆಯೋಜಿಸಿದ್ದ 2026-27ನೇ ಶೈಕ್ಷಣಿಕ ಸಾಲಿನ ಮದ್ದೂರು ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಮಾತನಾಡಿದರು.
ನಿಯಮಿತವಾದ ಕ್ರೀಡೆ ದೇಹದ ಸದೃಢತೆ ಕಾಪಾಡುತ್ತದೆ. ರಕ್ತ ಪರಿಚಲನೆ ಸುಧಾರಿಸಿ, ಒತ್ತಡ, ಆತಂಕ ಹಾಗೂ ಬೇಸರವನ್ನು ಕಡಿಮೆ ಮಾಡುತ್ತವೆ. ಮಿದುಳಿನ ಚುರುಕುತನವನ್ನು ಹೆಚ್ಚಿಸುವ ಜತೆಗೆ ಶಿಸ್ತು ಮತ್ತು ಸಮಯ ಪ್ರಜ್ಞೆ ಜೀವನದಲ್ಲಿ ಮೂಡಿಸುತ್ತದೆ ಎಂದರು.
ವಿದ್ಯಾರ್ಥಿಗಳು ತಂಡದಲ್ಲಿ ಆಡುವುದರಿಂದ ಪರಸ್ಪರ ನಂಬಿಕೆ, ಒಗ್ಗಟ್ಟು ಮತ್ತು ನಾಯಕತ್ವದ ಗುಣಗಳು ಬೆಳೆಯುತ್ತವೆ. ಪ್ರತಿಯೊಬ್ಬ ವಿದ್ಯಾರ್ಥಿಯು ಸೋಲು, ಗೆಲುವು ಲೆಕ್ಕ ಹಾಕದೆ ಕ್ರೀಡೆಯಲ್ಲಿ ಭಾಗವಹಿಸುವುದೇ ದೊಡ್ಡ ಬಹುಮಾನ ಎಂದು ಭಾವಿಸಿ ಕ್ರೀಡಾಸ್ಫೂರ್ತಿ ಮೆರೆಯಬೇಕು ಎಂದರು.
ಎಸ್‌ಸಿಎಂಎಂ ವಿದ್ಯಾಸಂಸ್ಥೆ ಕಾರ್ಯಕಾರಿ ಮಂಡಳಿ ಸದಸ್ಯೆ ಚೈತ್ರಾ ಪ್ರಕಾಶ್, ಪ್ರಾಂಶುಪಾಲ ಎಂ.ಎ.ರಮೇಶ್, ತಾಲೂಕು ದೈಹಿಕ ಪರಿವೀಕ್ಷಕ ಲೋಕೇಶ್, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಪ್ರದೀಪ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಅಂಕೇಗೌಡ, ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಕಾಂತರಾಜು, ಖಜಾಂಚಿ ಶಿವಕುಮಾರ್, ಚನ್ನಕೃಷ್ಣಯ್ಯ, ಬಿ.ಎಸ್.ರವೀಲ, ಎಸ್.ನಾಗರಾಜು, ಪಿ.ಪ್ರಸಾದ್ ಇತರರು ಇದ್ದರು.
900ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ: ಎರಡು ದಿನಗಳು ನಡೆಯುವ ಕ್ರೀಡಾಕೂಟದಲ್ಲಿ ತಾಲೂಕಿನಿಂದ ಸುಮಾರು 23 ಕಾಲೇಜಿನಿಂದ 900ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಖೋ, ಖೋ, ಕಬಡ್ಡಿ, ವಾಲಿಬಾಲ್, ಥ್ರೋ ಬಾಲ್, ಅಥ್ಲೆಟಿಕ್ಸ್, ಗುಂಪು ಆಟೋಟಗಳಲ್ಲಿ ಭಾಗವಹಿಸಿ ಗಮನ ಸೆಳೆದರು.