ಶ್ರೀಹೊಳೆ ಆಂಜನೇಯನಿಗೆ ವಿಶೇಷ ಪೂಜೆ

ಹನುಮ ಜಯಂತಿ ಹಾಗೂ ಚೈತ್ರ ಹುಣ್ಣಿಮೆ ಅಂಗವಾಗಿ ಮದ್ದೂರು ನಗರದ ಪುರಾಣ ಪ್ರಸಿದ್ಧ ಶ್ರೀ ಹೊಳೆ ಆಂಜನೇಯ ದೇಗುಲದಲ್ಲಿ ಸೀತಾ, ರಾಮ, ಹನುಮ ಹಾಗೂ ಲಕ್ಷ್ಮಣ ಮಹಾ ರಥೋತ್ಸವ ಅದ್ದೂರಿಯಾಗಿ ನೆರವೇರಿತು.
ಹನುಮ ಜಯಂತಿ ಹಾಗೂ ಚೈತ್ರ ಹುಣ್ಣಿಮೆ ಅಂಗವಾಗಿ ಮದ್ದೂರು ನಗರದ ಪುರಾಣ ಪ್ರಸಿದ್ಧ ಶ್ರೀ ಹೊಳೆ ಆಂಜನೇಯ ದೇಗುಲದಲ್ಲಿ ಸೀತಾ, ರಾಮ, ಹನುಮ ಹಾಗೂ ಲಕ್ಷ್ಮಣ ಮಹಾ ರಥೋತ್ಸವ ಅದ್ದೂರಿಯಾಗಿ ನೆರವೇರಿತು.
Published on

ಪ್ರಮುಖ ಮುಖ್ಯಾಂಶಗಳು

  • ಅಪಾರ ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ ಸಂಭ್ರಮ
ಮದ್ದೂರು: ಹನುಮ ಜಯಂತಿ ಹಾಗೂ ಚೈತ್ರ ಹುಣ್ಣಿಮೆ ಅಂಗವಾಗಿ ನಗರದ ಪುರಾಣ ಪ್ರಸಿದ್ಧ ಶ್ರೀ ಹೊಳೆ ಆಂಜನೇಯ ದೇಗುಲದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ದೇಗುಲದಲ್ಲಿ ಮುಂಜಾನೆ ಮಧು ಅಭಿಷೇಕ, ಪಂಚಾಮೃತ ಅಭಿಷೇಕ, ಅರಿಶಿಣ ಅಲಂಕಾರ, ಹೂವಿನ ಅಲಂಕಾರ ಸೇರಿದಂತೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ದೇಗುಲ ಪ್ರಧಾನ ಅರ್ಚಕ ಪ್ರದೀಪ್ ಆಚಾರ್ಯ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ನೆರವೇರಿತು.
ಮಧ್ಯಾಹ್ನ ದೇಗುಲದ ಆವರಣದಲ್ಲಿ ಸೀತಾ, ರಾಮ, ಹನುಮ ಹಾಗೂ ಲಕ್ಷ್ಮಣ ಉತ್ಸವ ಮತ್ತು ಮಹಾ ರಥೋತ್ಸವ ಹಾಗೂ ಸಮೀರ ಮಹಾ ರಥೋತ್ಸವದಲ್ಲಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತಾದಿಗಳು ಭಾಗವಹಿಸಿ ದೇಗುಲ ಸುತ್ತ ರಥವನ್ನು ಎಳೆಯುವ ಮೂಲಕ ದೇವರ ಕೃಪೆಗೆ ಪಾತ್ರರಾದರು.
ಸಹಸ್ರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು ಹಾಗೂ ಸಂಜೆ 7 ಗಂಟೆಗೆ ರಾಮ ದೇವರ ಉತ್ಸವದ ಜತೆಗೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.
ಗೋಶಾಲೆ ಕಟ್ಟಡ ಆರಂಭ: ಬೆಂಗಳೂರಿನ ದಾನಿಗಳಾದ ಗೌರಮ್ಮ- ರಾಮಮೂರ್ತಿ ಕುಟುಂಬದವರು ದೇಗುಲದ ಸಮೀಪ ಗೋವುಗಳಿಗಾಗಿ ನೂತನವಾಗಿ ನಿರ್ಮಿಸಿ ಕೊಟ್ಟಿರುವ ಶ್ರೀ ಗೋವರ್ಧನ ಗೋಶಾಲೆಯ ಕಟ್ಟಡವನ್ನು ಹನುಮ ಜಯಂತಿ ಅಂಗವಾಗಿ ಪ್ರಾರಂಭಿಸಲಾಯಿತು.
ಶ್ರೀಪಾದಚಾರ್ಯರ ನೇತೃತ್ವದಲ್ಲಿ ವಾಯುಸ್ತುತಿ ಪುನಸ್ಚರಣ ಹೋಮ ಪೂಜಾ ವಿಧಿ ವಿಧಾನದಂತೆ ಯಶಸ್ವಿಯಾಗಿ ನಡೆಯಿತು. ದೇಗುಲದ ಆವರಣದಲ್ಲಿ ನಗರದ ಸಂಜೀವಿನಿ ಆಸ್ಪತ್ರೆ ವತಿಯಿಂದ ದೇಗುಲಕ್ಕೆ ಆಗಮಿಸುವ ಭಕ್ತಾದಿಗಳಿಗೆ ಆರೋಗ್ಯ ಉಚಿತ ತಪಾಸಣೆ ಹಾಗೂ ಉಚಿತ ಔಷಧ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪ್ರಧಾನ ಅರ್ಚಕ ಪ್ರದೀಪ್ ಆಚಾರ್ಯ ಮಾತನಾಡಿ, ಹನುಮ ಜಯಂತಿ ಹಾಗೂ ಚೈತ್ರ ಹುಣ್ಣಿಮೆ ದೇಗುಲದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ವಿವಿಧ ಭಾಗಗಳಿಂದ ಆಗಮಿಸಿದ ಭಕ್ತಾದಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಶಾಸಕ ಕೆ.ಎಂ.ಉದಯ್ ದಂಪತಿ ಸೇರಿದಂತೆ ಹಲವು ಗಣ್ಯರು ದೇಗುಲಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net