ಕೆ.ಎಂ.ದೊಡ್ಡಿ:ಮೊದಲ ಆಷಾಡ ಶುಕ್ರವಾರದ ಹಿನ್ನೆಲೆಯಲ್ಲಿ ಇಲ್ಲಿನ ಚಾಂಶುಗರ್ಸ್ ಕಾರ್ಖಾನೆ ಆವರಣದಲ್ಲಿರುವ ಶ್ರೀ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜಾ ಕಾರ್ಯಕ್ರಮ ಜರುಗಿದವು.
ಮುಂಜಾನೆ ದೇವಿಗೆ ವಿಶೇಷ ದ್ರವ್ಯ ಅಭಿಷೇಕ, ವಿವಿಧ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು, ಬಳಿಕ ದೇವಾಲಯದ ಪ್ರಧಾನ ಅರ್ಚಕ ಕಾರ್ತಿಕ್ ಆರಾಧ್ಯ ಅವರಿಂದ ವಿಶೇಷ ಪೂಜಾ ಕೈಕಂರ್ಯಗಳು ನೆರವೇರಿದವು. ಬಳಿಕ ಮಹಾಮಂಗಳಾರತಿ ಜರುಗಿತು. ದೇವಾಲಯಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಈ ವೇಳೆ ಮಹಿಳೆಯರು ತಾಯಿ ಚಾಮುಂಡೇಶ್ವರಿಗೆ ನಿಂಬೆಹಣ್ಣಿನ ಆರತಿ ಬೆಳಗಿದರು. ಮೊದಲ ಆಷಾಢ ಶುಕ್ರವಾರದ ಅಂಗವಾಗಿ ದೇವಾಲಯದಲ್ಲಿ ಜಿ.ಪಂ. ಮಾಜಿ ಸದಸ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್. ರಾಜೀವ್ ಪೂಜಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಮದ್ದೂರು ಕ್ಷೇತ್ರದ ಶಾಸಕ ಕದಲೂರು ಉದಯ್ ಮತ್ತು ವಿನುತಾ ದಂಪತಿ ದೇವಾಲಯಕ್ಕೆ ಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯಕ್ಕೆ ಅಸಂಖ್ಯಾತ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು.
ಚಾಂಶುಗರ್ಸ್ ಕಾರ್ಖಾನೆಯ ಹಿರಿಯ ಉಪಾಧ್ಯಕ್ಷ ಮಣಿ, ಕಾರ್ಖಾನೆ ಅಧಿಕಾರಿಗಳಾದ ನಿತೀಶ್, ನಿಂಗಯ್ಯ, ಕ್ಷೇತ್ರಶಿಕ್ಷಣಾಧಿಕಾರಿ ಧನಂಜಯ್, ಮನ್ಮುಲ್ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಪುರಸಭೆ ಮಾಜಿ ಅಧ್ಯಕ್ಷೆ ಕೋಕಿಲಾ ಅರುಣ್, ಮಮತಾ ಶಂಕರೇಗೌಡ ಇತರರಿದ್ದರು.