ಕಳೆದ ನ.25 ರಂದು ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ಗೀತಾ ಅವರು ನಮ್ಮ ಕುಟುಂಬದ ಹೆಸರಿನಲ್ಲಿ ಒಂದು ಗುಂಟೆ ಜಮೀನು ಇಲ್ಲ, ಯಾವ ಉದ್ಯೋಗದಲ್ಲಿಯೂ ಇಲ್ಲ, ಟ್ರ್ಯಾಕ್ಟರ್ ಖರೀದಿಸಲು ಲೋನ್ ಪಡೆಯಲು ಆದಾಯ ತೆರಿಗೆ ನೋಂದಣಿ ಮಾಡಿಸುವುದು ಕಡ್ಡಾಯವಾಗಿದ್ದರಿಂದ ನೋಂದಣಿ ಮಾಡಿದ್ದ ಒಂದೇ ಕಾರಣಕ್ಕೆ ನಮ್ಮ ಬಿಪಿಎಲ್ ಕಾರ್ಡ್ ರದ್ದಾಗಿದೆ ಎಂದು ಅಳಲು ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ವಿಜಯವಾಣಿ ಪತ್ರಿಕೆ ಅರ್ಹತೆ ಇದ್ದರೂ ಬಿಪಿಎಲ್ ಕಾರ್ಡ್ ರದ್ದು ಎಂದು ಸುದ್ದಿ ಪ್ರಕಟಿಸಿತ್ತು. ಸುದ್ದಿ ಪ್ರಕಟವಾದ ಬೆನ್ನಲ್ಲೇ ಸಂಪೂರ್ಣ ಮಾಹಿತಿ ಪಡೆದ ಆಹಾರ ಇಲಾಖೆ, ಸದಸ್ಯೆಯ ಬಿಪಿಎಲ್ ಕಾರ್ಡ್ ಸೇರಿದಂತೆ ತಾಲೂಕಿನಲ್ಲಿ ಅದೇ ರೀತಿಯಲ್ಲಿ ರದ್ದಾಗಿದ್ದ 17 ಬಿಪಿಎಲ್ ಕಾರ್ಡ್‌ದಾರರಿಗೆ ಮತ್ತೆ ಬಿಪಿಎಲ್ ಕಾರ್ಡ್ ವಿತರಿಸಿದೆ.