ಮಂಡ್ಯ: ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್ ತಿಳಿಸಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದ ಆವರಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಚನ್ನಮಲ್ಲಿಕಾರ್ಜುನ ಸ್ವಾಮಿಯ ಅನುಯಾಯಿಯಾಗಿದ್ದ ಅವರ ಮಾತುಗಳು ಅರ್ಥಪೂರ್ಣವಾಗಿ ಇರುತ್ತಿದ್ದವು. ನಾವು ಇಹಲೋಕ ತ್ಯಜಿಸುವಾಗ ನಾಲ್ಕುಜನ ಮೆಚ್ಚುವಂತೆ ಬದುಕಬೇಕು ಎಂದರು.
ನಾವು ಸಮಾಜದಿಂದ ಪಡೆಯುವುದು ಒಂದು ಭಾಗವನ್ನಾದರೂ ಸಮಾಜಕ್ಕೆ ಕೊಡುಗೆಯಾಗಿ ಹಿಂದಿರುಗಿಸುವ ಮೂಲಕ ಇತರರಿಗೆ ಮಾದರಿಯಾಗುವಂತೆ ಬದುಕು ನಡೆಸೋಣ. ಹೇಮರೆಡ್ಡಿ ಮಲ್ಲಮ್ಮ ಅವರ ಆಶಯ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆ ಮೂಲಕ ಜಗತ್ತಿಗೆ ಮಾದರಿ ವ್ಯಕ್ತಿಗಳಾಗಲು ಸಾಧ್ಯ. ಎಲ್ಲರೂ ಹೇಮರೆಡ್ಡಿ ಮಲ್ಲಮ್ಮ ಅವರ ಹಾದಿಯಲ್ಲಿ ಸಾಗಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಹಿರಿಯ ತತ್ತ್ವಪದ ಗಾಯಕ ಗೊರವಾಲೆ ರುದ್ರಪ್ಪ, ಇಲಾಖೆ ಕೆ.ಒ.ಓಬಳೇಶ, ಸದಾಶಿವಸ್ವಾಮಿ, ಡಿ.ಆನಂದ, ಕಲಾವಿದರಾದ ಸಂತೆಕಸಲಗೆರೆ ಬಸವರಾಜು, ಹನಿಯಂಬಾಡಿ ಶೇಖರ್, ತಡಗವಾಡಿ ನಾಗರಾಜು, ಸಬ್ಬನಹಳ್ಳಿ ರಾಜು ಇದ್ದರು.