ನಿವೇಶನ ಹಂಚಿಕೆಗೆ ಜಾಗ ಹುಡುಕಿ: ಶಾಸಕ ಪಿ.ರವಿಕುಮಾರ್ ಗಣಿಗ ಸೂಚನೆ

ಮಂಡ್ಯದ ತಾಲೂಕು ಕಚೇರಿಯಲ್ಲಿ ಶಾಸಕ ಪಿ.ರವಿಕುಮಾರ್ ಗಣಿಗ ಅಧ್ಯಕ್ಷತೆಯಲ್ಲಿ ಆಶ್ರಯ ಸಮಿತಿ ಸಭೆ ಆಯೋಜಿಸಲಾಗಿತ್ತು.
ಮಂಡ್ಯದ ತಾಲೂಕು ಕಚೇರಿಯಲ್ಲಿ ಶಾಸಕ ಪಿ.ರವಿಕುಮಾರ್ ಗಣಿಗ ಅಧ್ಯಕ್ಷತೆಯಲ್ಲಿ ಆಶ್ರಯ ಸಮಿತಿ ಸಭೆ ಆಯೋಜಿಸಲಾಗಿತ್ತು.
Published on

ಪ್ರಮುಖ ಮುಖ್ಯಾಂಶಗಳು

  • ತಾಲೂಕು ಕಚೇರಿಯಲ್ಲಿ ಆಶ್ರಯ ಸಮಿತಿ ಸಭೆ
  • ಉಪವಿಭಾಗಾಧಿಕಾರಿ, ತಹಸೀಲ್ದಾರ್ ಸೇರಿದಂತೆ ಹಲವರು ಭಾಗಿ
ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ ವ್ಯಾಪ್ತಿಯಲ್ಲಿ ಬಡವರಿಗೆ ಹಂಚಿಕೆ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಸರ್ಕಾರಿ ಜಾಗವನ್ನು ಗುರುತಿಸುವ ಕೆಲಸ ಶೀಘ್ರವಾಗಿ ಆಗಬೇಕು ಎಂದು ಅಧಿಕಾರಿಗಳಿಂದಿಗೆ ಶಾಸಕ ಪಿ.ರವಿಕುಮಾರ್ ಗಣಿಗ ಸೂಚನೆ ನೀಡಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಆಶ್ರಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಸಾವಿರಾರೂ ಜನರು ಜೀವನ ನಡೆಸಲು ಸೂರಿಲ್ಲದೆ ಕಷ್ಟ ಪಡುತ್ತಿದ್ದಾರೆ. ಅವರಿಗೊಂದು ನೆಲೆ ಕಲ್ಪಿಸುವ ಕೆಲಸ ತ್ವರಿತವಾಗಿ ಆಗಬೇಕು. ಅದರಂತೆ ಅಧಿಕಾರಿಗಳು ಚುರುಕಾಗಿ ಕೆಲಸ ಮಾಡಬೇಕು. ಕ್ಷೇತ್ರದ ಪ್ರತಿ ಗ್ರಾಮದಲ್ಲಿಯೂ ಸರ್ಕಾರಿ ಜಾಗವನ್ನು ಪತ್ತೆ ಮಾಡಿ. ಕನಿಷ್ಟ ಒಂದು ಎಕರೆ ಇರಲಿ. ಒತ್ತುವರಿಯಾಗಿದ್ದರೆ ತೆರವುಗೊಳಿಸಿ. ಅಂತೆಯೇ ಈಗಾಗಲೇ ಗುರುತಿಸುವ ಸರ್ಕಾರಿ ಜಾಗಕ್ಕೆ ನಾಮಫಲಕ ಅಳವಡಿಸಿ. ಸರ್ಕಾರಿ ಜಾಗವನ್ನು ಸಂರಕ್ಷಣೆ ಮಾಡುವ ಕೆಲಸವಾಗಬೇಕು ಎಂದರು.
ಶೀಘ್ರವಾಗಿ ಜಾಗ ಗುರುತಿಸಿಕೊಟ್ಟರೆ ನಂತರ ಅರ್ಹರಿಗೆ ನಿವೇಶನ ಹಂಚಿಕೆ ಮಾಡಬಹುದು. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಕನಿಷ್ಟ 10 ಸಾವಿರ ಜನರಿಗೆ ನಿವೇಶನ ಕೊಡಬಹುದು. ಇದರಿಂದ ಬಡವರಿಗೆ ಅನುಕೂಲವಾಗುತ್ತದೆ. ಅವರಿಗೊಂದು ಸೂರು ಸಿಕ್ಕಂತಾಗುತ್ತದೆ ಎಂದು ಹೇಳಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ತಹಸೀಲ್ದಾರ್ ವಿಶ್ವನಾಥ್, ತಾಲೂಕು ಪಂಚಾಯಿತಿ ಇಒ ಲೋಕೇಶ್, ಪೌರಾಯುಕ್ತೆ ಪಂಪಶ್ರೀ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ವಿಎ, ಆರ್‌ಐಗಳು ಉಪಸ್ಥಿತರಿದ್ದರು. ಸಭೆ ಬಳಿಕ ಸಾರ್ವಜನಿಕರ ಅಹವಾಲು ಆಲಿಸಿದ ಶಾಸಕ ಪಿ.ರವಿಕುಮಾರ್ ಗಣಿಗ, ಈ ಬಗ್ಗೆ ಗಮನಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಎರಡು ಬಡಾವಣೆಗೆ ತಲಾ 50 ಲಕ್ಷ ರೂ
ತಾಲೂಕಿನ ಬೂದನೂರು ಮತ್ತು ತಂಗಳಗೆರೆ ಗ್ರಾಮದಲ್ಲಿ ಆಶ್ರಯ ಯೋಜನೆಯಡಿ ಮನೆ ನಿರ್ಮಿಸಲಾಗಿದೆ. ಅಲ್ಲಿನ ವಾಸಿಗಳು ರವಿಗೂಡು ಹೆಸರಿನಲ್ಲಿ ಬಡಾವಣೆ ಮಾಡಿಕೊಂಡಿದ್ದಾರೆ. ಬಡಾವಣೆಯ ಜನರಿಗೆ ಕುಡಿಯುವ ನೀರು, ಬೀದಿ ದೀಪ, ಚರಂಡಿ, ರಸ್ತೆ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಎರಡು ಬಡಾವಣೆಗೂ ತಲಾ 50 ಲಕ್ಷ ರೂ ಅನುದಾನ ನೀಡಲಾಗುವುದು ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿದರು.
ಬಡವರಿಗೆ ನಿವೇಶನ ಹಾಗೂ ಬಡಾವಣೆ ನಿರ್ಮಾಣ ಮಾಡಿಕೊಡುತ್ತೇವೆಂದು ಹೇಳಿ ಚಿಕ್ಕದಾಗಿ ಮನೆ ಕೊಟ್ಟರೆ ಏನು ಪ್ರಯೋಜನ. ಅದರಲ್ಲಿ ಅವರು ಸಂತೋಷವಾಗಿರಲು ಸಾಧ್ಯವಿಲ್ಲ. ಆದ್ದರಿಂದ ಬಡಾವಣೆಗಳು ಚೆನ್ನಾಗಿರಬೇಕು. ಉತ್ತಮವಾಗಿ ನಿರ್ಮಾಣ ಮಾಡಿಕೊಟ್ಟರೆ ಖುಷಿಯಾಗಿ ಜೀವನ ಮಾಡುತ್ತಾರೆ. ಈ ನಿಟ್ಟಿನಲ್ಲಿ ಯೋಜನೆ ರೂಪಿಸಿಕೊಳ್ಳಬೇಕು. ಬೂದನೂರು ಮತ್ತು ತಂಗಳಗೆರೆ ಗ್ರಾಮದಲ್ಲಿನ ಬಡಾವಣೆಗಳಲ್ಲಿ ಸೌಲಭ್ಯ ಸಹಿತವಾಗಿ ಉತ್ತಮವಾಗಿ ಇರುವಂತೆ ಮಾಡಬೇಕು. ಖಾಸಗಿ ಬಡಾವಣೆಯಂತೆಯೇ ಸೌಲಭ್ಯ ಕಲ್ಪಿಸಿಕೊಡಿ. ಅದನ್ನು ನೋಡಿದರೆ ಬೇರೆಯವರು ನಮಗೂ ಇದೇ ರೀತಿ ಮಾಡಿಕೊಡಿ ಎನ್ನುವಂತೆ ಮಾದರಿಯನ್ನಾಗಿ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪಣಕನಹಳ್ಳಿಯಲ್ಲಿ ಐದು ಎಕರೆ ಗುರುತು
ತಾಲೂಕಿನ ಪಣಕನಹಳ್ಳಿ ಗ್ರಾಮದಲ್ಲಿ ಐದು ಎಕರೆ ಸರ್ಕಾರಿ ಜಾಗವನ್ನು ಗುರುತು ಮಾಡಲಾಗಿದೆ. ಇಲ್ಲಿ ಮಂಡ್ಯ ನಗರಸಭೆ ವ್ಯಾಪ್ತಿಯ ಬಡವರಿಗಾಗಿ ಬಹುಮಹಡಿ ಕಟ್ಟಡ ನಿರ್ಮಾಣ ಮಾಡಿ ಹಂಚಿಕೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಮಾಹಿತಿ ನೀಡಿದರು.
ಇನ್ನು ಕಂಬದಹಳ್ಳಿ ಗ್ರಾಮದ ಸಮೀಪ ಏಳು ಎಕರೆ ಸರ್ಕಾರಿ ಜಮೀನು ಗುರುತಿಸಲಾಗಿದೆ. ಅಲ್ಲಿ 33 ಕೋಟಿ ರೂ ವೆಚ್ಚದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಕ ವಸತಿ ಶಾಲೆ ನಿರ್ಮಾಣ ಮಾಡಲಾಗುವುದು. ಈ ಸಂಬಂಧ ಜಾಗದ ಹಸ್ತಾಂತರ ಆಗಬೇಕು. ಅಂತೆಯೇ ಕೆರಗೋಡು ಗ್ರಾಮದಲ್ಲಿ ಸರ್ಕಾರಕ್ಕೆ ಸೇರಿದ ಐದು ಎಕರೆ ಜಾಗವಿದ್ದು, ಅಲ್ಲಿ ಹೊಸದೊಂದು ಮುರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಾಣ ಮಾಡಲಾಗುತ್ತಿದೆ. ಬಿ.ಹೊಸೂರು ಕಾಲನಿಯಲ್ಲಿ ಐದು ಎಕರೆ ಸರ್ಕಾರಿ ಜಾಗವನ್ನು ಗುರುತಿಸಲಾಗಿದ್ದು, ಇಲ್ಲಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ಶಾಲೆ ನಿರ್ಮಾಣ ಮಾಡಲಾಗುವುದು. ಈ ಸಂಬಂಧ ಜಾಗದ ಹಸ್ತಾಂತರ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸುವಂತೆ ಸೂಚನೆ ನೀಡಿದರು.

ಕುಡಿವ ನೀರಿಗೆ ಸಮಸ್ಯೆಯಾಗದಿರಲಿ
ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಸೂಚನೆ ನೀಡಿದರು.
ಕ್ಷೇತ್ರದ ಪ್ರತಿ ಗ್ರಾಮದಲ್ಲಿನ ಕುಡಿಯುವ ನೀರಿನ ಬಗ್ಗೆ ಮಾಹಿತಿ ಪಡೆಯುತ್ತಿರಬೇಕು. ಅಂತೆಯೇ ಸಮಸ್ಯೆಗಳು ಕಂಡುಬಂದರೆ ಅಲ್ಲಿಗೆ ತ್ವರಿತವಾಗಿ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಈ ವಿಚಾರದಲ್ಲಿ ನಿರ್ಲಕ್ಷೃ ಮಾಡಬೇಡಿ. ಬೇಸಿಗೆ ಮುಗಿಯುವರೆಗೂ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಇಲ್ಲದಿದ್ದರೆ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net