ಮಂಡ್ಯ:ಜಿಲ್ಲೆಯಲ್ಲಿ ಕೋಟ್ಯಂತರ ರೂ ಮೌಲ್ಯದ ಬೆಳೆ ನೀರಿಲ್ಲದೆ ಒಣಗುತ್ತಿದೆ. ಈ ಸಮಯದಲ್ಲಿ ನಾಲೆಗೆ ನೀರು ಹರಿಸದಿದ್ದರೆ ರೈತರಿಗೆ ದೊಡ್ಡ ಮಟ್ಟದ ನಷ್ಟವಾಗಲಿದೆ. ಇದನ್ನು ಅರಿತು ರಾಜ್ಯಸರ್ಕಾರ ಕೂಡಲೇ ಒಂದು ಕಟ್ಟು ನೀರು ಕೊಡಲಿ ಎಂದು ಶ್ರೀರಂಗಪಟ್ಟಣ ಕ್ಷೇತ್ರದ ಯುವ ನಾಯಕ ಇಂಡುವಾಳು ಸಚ್ಚಿದಾನಂದ ಆಗ್ರಹಿಸಿದರು.
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ತಾಲೂಕಿನ ತಗ್ಗಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ರೈತರೊಂದಿಗೆ ಹಲವು ವಿಷಯ ಚರ್ಚಿಸಿ ಮಾತನಾಡಿದ ಅವರು, ರೈತರ ವಿಚಾರದಲ್ಲಿ ರಾಜ್ಯಸರ್ಕಾರ ತನ್ನ ಹಠಮಾರಿ ಧೋರಣೆ ಬಿಡಲಿ. ಬೆಂಗಳೂರು ಸೇರಿದಂತೆ ಕುಡಿಯುವ ನೀರಿಗೆ ಮುಖ್ಯವಾದರೂ ರೈತರನ್ನು ಉಳಿಸುವ ಕೆಲಸವೂ ಆಗಬೇಕಿದೆ. ಪ್ರಸ್ತುತ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ಕೆಆರ್‌ಎಸ್ ಡ್ಯಾಂಗೆ ಒಳಹರಿವಿನ ಪ್ರಮಾಣ ಸ್ವಲ್ಪ ಹೆಚ್ಚಾಗಿದೆ. ಅದೇ ರೀತಿ ಡ್ಯಾಂನ ನೀರಿನ ಮಟ್ಟ 82 ಅಡಿಗೆ ತಲುಪಿದೆ. ಆದ್ದರಿಂದ ಒಂದು ಕಟ್ಟು ನೀರು ಹರಿಸಿದರೆ ಕೋಟ್ಯಂತರ ರೂ ಮೌಲ್ಯದ ಬೆಳೆ ಹಾಳಾಗುವುದು ತಪ್ಪುತ್ತದೆ. ಇದರಿಂದ ರೈತರಿಗೆ ನಷ್ಟವಾಗುವುದು ತಪ್ಪಲಿದೆ ಎಂದರು.
ಜಿಲ್ಲೆಯಲ್ಲಿ ಸುಮಾರು 31 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಕಟಾವು ಹಂತದಲ್ಲಿದೆ. 27 ಸಾವಿರ ಹೆಕ್ಟೇರ್‌ನಲ್ಲಿ 8 ರಿಂದ 12 ತಿಂಗಳ ಅವಧಿಯ ಕಬ್ಬು ಹಾಗೂ ಮೂರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 12 ತಿಂಗಳ ಕಬ್ಬು ಇದೆ. ಮಳೆಯಾಗದೇ ಹಾಗೂ ನೀರಿಲ್ಲದೆ ಒಣಗುತ್ತಿವೆ. ಮಾತ್ರವಲ್ಲದೆ ಇಳುವರಿಯೂ ಕುಂಠಿತವಾಗುತ್ತಿದೆ. ಆದ್ದರಿಂದ ಈ ಬೆಳೆಗೆ ನೀರು ಹರಿಸಬೇಕು. ಇಲ್ಲದಿದ್ದರೆ ಶೇ.50ಕ್ಕಿಂತ ಹೆಚ್ಚು ಕಬ್ಬು ಬೆಳೆ ಸಂಪೂರ್ಣ ನಾಶವಾಗುವ ಜತೆಗೆ ಸಾಲ ಮಾಡಿದ ಬೆಳೆ ಬೆಳೆದ ರೈತರಿಗೆ ಕೋಟ್ಯಂತರ ರೂ ನಷ್ಟವಾಗುತ್ತದೆ. ಇಷ್ಟೇ ಅಲ್ಲದೆ ಕಟಾವು ಹಂತದಲ್ಲಿರುವ ಕಬ್ಬನ್ನು ನುರಿಸುವ ನಿಟ್ಟಿನಲ್ಲಿಯೂ ಜಿಲ್ಲಾಡಳಿತ ತುರ್ತು ಕ್ರಮ ವಹಿಸಲೇಬೇಕು. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾಗಬೇಕು. ಈ ವಿಚಾರದಲ್ಲಿ ನಿರ್ಲಕ್ಷೃ ಮಾಡಿದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇನ್ನು ಜಿಲ್ಲೆಯಲ್ಲಿ ಸುಮಾರು ಮೂರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ತರಕಾರಿ ಬೆಳೆ ಹಾಗೂ ಎರಡು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಬೆಳೆಯಲಾಗಿದೆ. ಸಧ್ಯಕ್ಕೆ ಬೋರ್‌ವೆಲ್ ನೀರು ಇರುವುದರಿಂದ ಸಮಸ್ಯೆ ಇಲ್ಲದಿದ್ದರೂ, ಮಳೆಯಾಗದಿದ್ದರೆ ಈ ಬೆಳೆಯೂ ನಾಶವಾಗಲಿದೆ. ಆದ್ದರಿಂದ ನಾಲೆಗೆ ನೀರು ಹರಿಸಿದರೆ ಅಂತರ್ಜಲ ವೃದ್ಧಿಸುತ್ತದೆ. ಜಿಲ್ಲೆಯ ಹಲವು ಕೆರೆ ಕಟ್ಟೆಯಲ್ಲಿ ಮಳೆಗಾಲದಲ್ಲಿಯೇ ನೀರು ಕಡಿಮೆಯಾಗುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಜಾನುವಾರುಗಳಿಗೂ ಕುಡಿಯುವ ನೀರಿಲ್ಲದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಕೆರೆ ಕಟ್ಟೆ ತುಂಬಿಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ರೈತರು ಸಂಕಷ್ಟದಲ್ಲಿರುವುದರಿಂದ ಅವರ ನೆರವಿಗೆ ನಿಲ್ಲುವ ಕೆಲಸವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡಬೇಕು. ಅದರಂತೆ ಬೆಳೆ ವಿಮೆ ಕಂತನ್ನು ಸರ್ಕಾರವೇ ಭರಿಸಲಿ. ಇದರ ಜತೆಗೆ ನಮ್ಮ ಬಿಜೆಪಿ ಸರ್ಕಾರ ಅಧಿಕಾರವಾಧಿಯಲ್ಲಿ ರೈತರಿಗೆ ಅನುಕೂಲವಾಗಲೆಂದು ಜಾರಿಗೆ ತಂದಿದ್ದ ರೈತ ಸಮ್ಮಾನ್ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಸ್ಥಗಿತಗೊಳಿಸಿದೆ. ಈ ಯೋಜನೆಗೆ ಮರುಚಾಲನೆ ಕೊಡಬೇಕು. ಇದನ್ನು ಬಿಟ್ಟು ಬರೀ ಮಾತಿನಲ್ಲಿ ರೈತಪರವೆಂದರೆ ಸಾಲದು ಎಂದು ಹೇಳಿದರು.
ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಶಿವಲಿಂಗೇಗೌಡ, ಗ್ರಾಮಸ್ಥರಾದ ಸಿದ್ದು, ಸಿದ್ದೇಗೌಡ, ಮಹದೇವು, ಪ್ರಸನ್ನ, ಜವರೇಗೌಡ, ಕಾಳಪ್ಪ, ಮಂಚೇಗೌಡ ಇತರರಿದ್ದರು.