ಮಂಡ್ಯ: ನಗರದ ಕಲ್ಲಹಳ್ಳಿ ವಿ.ವಿ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ 2 ಕೋಟಿ ರೂ ವೆಚ್ಚದಲ್ಲಿ ಒಳಾಂಗಣ ರಸ್ತೆಗಳ ಅಭಿವೃದ್ಧಿ ಹಾಗೂ ಕೆರೆಯಂಗಳದ ಕೆಎಚ್‌ಬಿ ಬಡಾವಣೆಯಲ್ಲಿ 2.46 ಕೋಟಿ ರೂ ವೆಚ್ಚದಲ್ಲಿ ರಸ್ತೆ, ಒಳಚರಂಡಿ ಮತ್ತು ಬಾಹ್ಯ ವಿದ್ಯುತ್ ಅಭಿವೃದ್ಧಿ ಕಾಮಗಾರಿಗೆ ಶಾಸಕ ಪಿ.ರವಿಕುಮಾರ್ ಗಣಿಗ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಕೆರೆ ಅಂಗಳದಲ್ಲಿರುವ ವಿವೇಕಾನಂದ ಬಡಾವಣೆ, ಕರ್ನಾಟಕ ಗೃಹ ಮಂಡಳಿ ಬಡಾವಣೆ ಹಾಗೂ ಬೀಡಿ ಕಾರ್ಮಿಕರ ಬಡಾವಣೆಗೆ ಮಳೆಯಿಂದಾಗುತ್ತಿದ್ದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲಾಗಿದೆ. ಈ ಬಡಾವಣೆಯ ಜನರು ಕಳೆದ 25 ವರ್ಷದಿಂದ ಮಳೆಗಾಲದಲ್ಲಿ ತೀವ್ರ ತೊಂದರೆ ಅನುಭವಿಸುತ್ತಿದ್ದರು. ಮಳೆ ನೀರು ಪ್ರವಾಹದ ರೀತಿಯಲ್ಲಿ ತುಂಬಿಕೊಂಡು ಇಡೀ ಬಡಾವಣೆ ಜನರು ಸಂಕಷ್ಟ ಅನುಭವಿಸುತ್ತಿದ್ದರು. ಇದನ್ನು ಮನಗಂಡು ಈಗಾಗಲೇ 10 ಕೋಟಿ ರೂ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣವಾಗಿದ್ದು, ಇನ್ನೂ 5 ಕೋಟಿ ರೂ.ಗಳನ್ನು ಇದಕ್ಕಾಗಿ ಮೀಸಲಿಡಲಾಗಿದೆ ಎಂದರು.
ಕೆಎಚ್‌ಬಿ ಬಡಾವಣೆಯಲ್ಲಿ ಇನ್ನೂ 50-60 ನಿವೇಶನಗಳಿದ್ದು, ಅದರಲ್ಲಿ ಬೆಳೆದಿದ್ದ ಗಿಡಗಂಟೆ ತೆರವು ಮಾಡಲಾಗಿದ್ದು, ಒಳಚರಂಡಿ ಹಾಗೂ ರಸ್ತೆ ಕಾಮಗಾರಿಯನ್ನು 2.50 ಕೋಟಿ ರೂ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಮೂರು ತಿಂಗಳಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿ ಮಾಡಲಾಗುವುದು. ಬಡಾವಣೆಯ ಜನರಿಗೆ ಒಳಚರಂಡಿ ಹಾಗೂ ಕುಡಿಯುವ ನೀರನ್ನೊದಗಿಸಲು 1.80 ಕೋಟಿ ರೂ ವೆಚ್ಚದ ಯೋಜನೆ ರೂಪಿಸಲಾಗಿದೆ. ಇದರಲ್ಲಿ ಟೆಂಡರ್ ಇನ್ನೊಂದು ವಾರದಲ್ಲಿ ತೆರೆದು ಕಾಮಗಾರಿ ಆರಂಭಿಸಲಾಗುವುದು. ಅಲ್ಲದೆ ಕೆರೆ ಅಂಗಳದಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆಯ ಬಳಿಯಿಂದ ನಾಗಮಂಗಲ-ಮಂಡ್ಯ ರಸ್ತೆ ಹಾಗೂ ಹೊಳಲು-ಮೇಲುಕೋಟೆ ರಸ್ತೆವರೆಗಿನ ರಾಜ್ಯ ಹೆದ್ದಾರಿಗೆ 10 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದ್ದು, ಟೆಂಡರ್ ಒಂದು ತಿಂಗಳಲ್ಲಿ ನಡೆದು ಎರಡು ತಿಂಗಳಲ್ಲಿ ಸುಸಜ್ಜಿತವಾದ ರಸ್ತೆ ನಿರ್ಮಾಣವಾಗಲಿದೆ. ಕಾವೇರಿ ನೀರಾವರಿ ನಿಗಮದಿಂದ 20 ಕೋಟಿ ರೂಗಳನ್ನು ರಸ್ತೆ ಹಾಗೂ ಚರಂಡಿ ಮೇಲೆ ಸ್ಲಾೃಬ್ ಹಾಕಲು ಬಿಡುಗಡೆ ಮಾಡಲಾಗಿದೆ. ಬೀಡಿ ಕಾರ್ಮಿಕರ ಕಾಲನಿಗೆ ಅಲ್ಪಸಂಖ್ಯಾತರ ಇಲಾಖೆ ಅನುದಾನದಲ್ಲಿ 10 ಕೋಟಿ ರೂ ಮಂಜೂರಾಗಿದ್ದು, ಇದರ ಟೆಂಡರ್ ಮುಗಿದಿದೆ. ಮುಂದಿನ ಒಂದು ವಾರದಲ್ಲಿ ಇದಕ್ಕೆ ಭೂಮಿ ಪೂಜೆ ಮಾಡಲಾಗುವುದು ಎಂದರು.
ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಸದಸ್ಯ ಕಾರ್ತಿಕ್, ಮಾಜಿ ಅಧ್ಯಕ್ಷ ನಯೀಂ, ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು, ಕಾಂಗ್ರೆಸ್ ಮುಖಂಡರಾದ ಅಭಿಲಾಷ್, ಹರೀಶ್, ಕೆಎಚ್‌ಬಿ ಬಡಾವಣೆಯ ಕೀಲಾರ ಕೃಷ್ಣ, ಅಶೋಕ್ ಇತರರಿದ್ದರು.
ನಗರದ ಕಲ್ಲಹಳ್ಳಿಯ ಧರ್ಮಶ್ರೀ ಸಮುದಾಯ ಭವನದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಎಪಿಎಂಸಿ ರಸ್ತೆ ಗುಂಡಿ ಬಿದ್ದು ಸಂಪೂರ್ಣ ಹಾಳಾಗಿತ್ತು. ವಾಹನ ಹಾಗೂ ಸಾರ್ವಜನಿಕರು ಓಡಾಟಕ್ಕೆ ತುಂಬಾ ತೊಂದರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಎಪಿಎಂಸಿಯಿಂದ ಎರಡು ಕೋಟಿ ರೂ ವಿಶೇಷ ಅನುದಾನವನ್ನು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಜೂರು ಮಾಡಿಸಿ ಕಾಮಗಾರಿ ನಡೆಸಲಾಗುತ್ತಿದೆ ಎಂದರು.
ಎಪಿಎಂಸಿ ಮುಂಭಾಗ ಹಾಗೂ ಒಳಾಂಗಣ ರಸ್ತೆ ಹಾಗೂ ಚರಂಡಿ ಕೂಡ ಮಾಡಲಾಗುವುದು. ಈ ರಸ್ತೆಯ ಒಳಚರಂಡಿ ಹಾಳಾಗಿದ್ದು, ಕಾಮಗಾರಿ ಸ್ವಲ್ಪ ತಡವಾಗಲು ಕಾರಣವಾಗಿತ್ತು. ಅದಕ್ಕಾಗಿ 5 ಕೋಟಿ ರೂ ವೆಚ್ಚದಲ್ಲಿ ಹೊಸದಾಗಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ಕುಡಿಯುವ ನೀರಿನ ಪೈಪ್‌ಲೈನ್ ಅನ್ನು 12 ಲಕ್ಷ ರೂ ವೆಚ್ಚದಲ್ಲಿ ಹಾಕಲಾಗಿದೆ. ಒಟ್ಟಾರೆ ಒಳಚರಂಡಿ ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಿ ಶಾಶ್ವತವಾದ ಉತ್ತಮ ಗುಣಮಟ್ಟದ ರಸ್ತೆ ಮಾಡಲಾಗುವುದು ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು, ಮಾಜಿ ಸದಸ್ಯರಾದ ಶಂಕರೇಗೌಡ, ರಾಜೇಶ್, ಎಇಇ ಪುಟ್ಟಯ್ಯ, ಮುಖಂಡರಾದ ಗೂಳಿಗೌಡ, ಶಂಕರೇಗೌಡ, ಆತ್ಮಾನಂದ, ಆನಂದ್, ಅಭಿಲಾಷ್ ಇತರರಿದ್ದರು.