ಶ್ರೀರಂಗಪಟ್ಟಣ ಗಾಂಧಿನಗರ ಬಡಾವಣೆಯಲ್ಲಿ ಶುಕ್ರವಾರ ಶ್ರೀ ಆದಿಶಕ್ತಿ ಪಟ್ಟಲದಮ್ಮ ಗ್ರಾಮ ದೇವತೆ ಹಬ್ಬದ ನಿಮಿತ್ತ ಪಟ್ಟಲದಮ್ಮ ದೇವಿಗೆ ಪೂಜೆ ಸಲ್ಲಿಸಿದ ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ಅವರನ್ನು ಸ್ಥಳೀಯ ಮುಖಂಡರು ಅಭಿನಂದಿಸಿದರು.
ಶ್ರೀರಂಗಪಟ್ಟಣ: ದೇವರ ಮೇಲಿನ ನಂಬಿಕೆ, ಪೂಜೆ, ಪ್ರಾರ್ಥನೆಗಳಿಂದ ಸಮಾಜದಲ್ಲಿ ಅಪರಾಧ ಕೃತ್ಯಗಳು ನಿಯಂತ್ರಣಕ್ಕೆ ಬರಲಿವೆ ಎಂದು ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ಹೇಳಿದರು.
ಪಟ್ಟಣದ ಗಾಂಧಿನಗರ ಬಡಾವಣೆಯಲ್ಲಿ ಶುಕ್ರವಾರ ಶ್ರೀ ಆದಿಶಕ್ತಿ ಪಟ್ಟಲದಮ್ಮ ಗ್ರಾಮದೇವತೆ ಹಬ್ಬದ ನಿಮಿತ್ತ ಪಟ್ಟಲದಮ್ಮ ದೇವಿಗೆ ಪೂಜೆ ಸಲ್ಲಿಸಿ ಮಾತನಾಡಿದರು.
ಹಬ್ಬ ಇತರ ಧಾರ್ಮಿಕ ಕಾರ್ಯಕ್ರಮಗಳು ಜನರನ್ನು ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಶಾಂತಿ, ನೆಮ್ಮದಿ, ಸಹಬಾಳ್ವೆಯನ್ನು ತರುತ್ತವೆ. ಬಂಧು, ಬಾಂಧವರ ನಡುವೆ ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ. ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ದಾಟಿಸುತ್ತವೆ. ಹಾಗಾಗಿ ಇಂತಹ ಆಚರಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಜಿ.ಇ.ಸುಧಾಕರ್, ಪುರಸಭೆ ಮಾಜಿ ಸದಸ್ಯರಾದ ಗಂಜಾಂ ಶಿವು, ಎಸ್.ಟಿ.ರಾಜು, ಎಸ್.ಪ್ರಕಾಶ್, ಕೆ ಆರ್. ಸೊಸೈಟಿ ಮಾಜಿ ಅಧ್ಯಕ್ಷ ಎಸ್.ರಘು, ಮುಖಂಡರಾದ ಉಮೇಶಕುಮಾರ್, ದರ್ಶನ್ ಲಿಂಗರಾಜು, ಶೇಖರ್, ವಿಜಯಕುಮಾರ್ ಪಾಲ್ಗೊಂಡಿದ್ದರು.