ಮನುಷ್ಯನಿಗೆ ಸಾಹಿತ್ಯದ ಒಡನಾಟ ಅಗತ್ಯ

 ಮಳವಳ್ಳಿ ಪಟ್ಟಣದಲ್ಲಿ ಸೋಮವಾರ ಆಯೋಜನೆಗೊಂಡಿದ್ದ  ರಾಜ್ಯ ಮಟ್ಟದ ಕವಿ-ಕಾವ್ಯ ಸಮ್ಮಿಲನ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಸಾಹಿತಿ ಟಿ. ಸತೀಶ್ ಜವರೇಗೌಡ ಪ್ರಶಸ್ತಿ ಪ್ರದಾನ ಮಾಡಿದರು. ಎಲ್. ಚೇತನ್ ಕುಮಾರ್, ಟಿ.ಎಂ. ಪ್ರಕಾಶ್, ಚುಂಚಣ್ಣ ಕಲ್ಲಾರೆಪುರ, ಮಂಗಲ ಎಂ.ಇ. ಶಿವಣ್ಣ ಇದ್ದರು
ಮಳವಳ್ಳಿ ಪಟ್ಟಣದಲ್ಲಿ ಸೋಮವಾರ ಆಯೋಜನೆಗೊಂಡಿದ್ದ ರಾಜ್ಯ ಮಟ್ಟದ ಕವಿ-ಕಾವ್ಯ ಸಮ್ಮಿಲನ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಸಾಹಿತಿ ಟಿ. ಸತೀಶ್ ಜವರೇಗೌಡ ಪ್ರಶಸ್ತಿ ಪ್ರದಾನ ಮಾಡಿದರು. ಎಲ್. ಚೇತನ್ ಕುಮಾರ್, ಟಿ.ಎಂ. ಪ್ರಕಾಶ್, ಚುಂಚಣ್ಣ ಕಲ್ಲಾರೆಪುರ, ಮಂಗಲ ಎಂ.ಇ. ಶಿವಣ್ಣ ಇದ್ದರು
Published on
ಮಳವಳ್ಳಿ: ಪ್ರಕೃತಿ ಮತ್ತು ಸಾಹಿತ್ಯ ಮನುಷ್ಯನ ಬದುಕಿನ ಎರಡು ಮುಖ್ಯ ನೆಲೆಗಳಾಗಿದ್ದು, ಮನುಕುಲದ ಮಾನವೀಕರಣಕ್ಕೆ ಈ ಎರಡು ನೆಲೆಗಳು ಮಾತೃ ಹೃದಯದ ಮೌಲ್ಯಗಳನ್ನು ನೀಡುತ್ತವೆ ಎಂದು ಸಾಹಿತಿ ಟಿ.ಸತೀಶ್ ಜವರೇಗೌಡ ಅಭಿಪ್ರಾಯಪಟ್ಟರು.
ಪಟ್ಟಣದ ಕೋಟೆ ಬೀದಿಯಲ್ಲಿರುವ ಮಳವಳ್ಳಿ ಒನ್ ಕಂಪ್ಯೂಟರ್ ಸೆಂಟರ್ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ದಲಿತ ಸಾಹಿತ್ಯ ಪರಿಷತ್ತು ಹಾಗೂ ಯೂನಿವರ್ಸಲ್ ಸೇವಾ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಕವಿ-ಕಾವ್ಯ ಸಮ್ಮಿಲನ ಹಾಗೂ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಸಮಾರಂಭದಲ್ಲಿ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದರು.
ಪ್ರಕೃತಿ ಮನುಷ್ಯ ಮತ್ತು ಇತರ ಸಹ ಜೀವಿಗಳಿಗೆ ಉಸಿರಾಗುವ ಮೂಲಕ ಆಸರೆಯ ತಾಣವಾಗಿದೆ. ಪ್ರಕೃತಿಯಿಂದಲೇ ಭೂಮಿಗೆ ಒಂದು ಮೆರುಗು ಬಂದಿದೆ. ಆದರೆ, ಮನುಷ್ಯ ಭೋಗ ಜೀವಿಯಾದ ಮೇಲೆ ನಗರೀಕರಣದ ಪ್ರಭಾವಕ್ಕೆ ಸಿಲುಕಿ ಪ್ರಕೃತಿ ಮೇಲೆ ನಿರಂತರ ದೌರ್ಜನ್ಯ ಎಸಗುತ್ತಿದ್ದಾನೆ. ಪ್ರಕೃತಿಯ ಒಡನಾಟದಷ್ಟೇ ಮನುಷ್ಯನಿಗೆ ಸಾಹಿತ್ಯದ ಒಡನಾಟ ಅಗತ್ಯವಾಗಿದೆ. ಸಮಾಜದಲ್ಲಿನ ಜನಸಮುದಾಯದ ಹೃದಯದಲ್ಲಿ ಅರಿವಿನ ಹಣತೆ ಹಚ್ಚಬಲ್ಲ ಶಕ್ತಿ ಸಾಹಿತ್ಯಕ್ಕಿದೆ ಎಂದರು.
ಪರಿಸರ ಸಂರಕ್ಷಕ ಸಾಲು ಮರದ ನಾಗರಾಜು ಅವರಿಗೆ ಸಾಲು ಮರದ ತಿಮ್ಮಕ್ಕ ಪ್ರಶಸ್ತಿ ನೀಡಲಾಯಿತು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಕವಿಗೋಷ್ಠಿಗೆ ಸಾಹಿತಿ ದೇವರಾಜ್ ಕೊದೇನಕೊಪ್ಪಲು ಚಾಲನೆ ನೀಡಿದರು. ಸಾಹಿತಿ ರಾಚಯ್ಯ ಶೆಟ್ಟಹಳ್ಳಿ ಅಧ್ಯಕ್ಷತೆ ವಹಿಸಿದ್ದರು.
ತಾಲೂಕು ಕಸಾಪ ಅಧ್ಯಕ್ಷ ಎಲ್.ಚೇತನ್ ಕುಮಾರ್, ಟಿಎಪಿಸಿಎಂಎಸ್ ಅಧ್ಯಕ್ಷ ಮೋಳೆದೊಡ್ಡಿ ಲಿಂಗರಾಜು, ತಾಲೂಕು ದಸಾಪ ಅಧ್ಯಕ್ಷ ಚುಂಚಣ್ಣ ಕಲ್ಲಾರೆಪುರ, ಯೂನಿವರ್ಸಲ್ ಸೇವಾ ಟ್ರಸ್ಟ್ ಕಾರ್ಯದರ್ಶಿ ಟಿ.ಎಂ.ಪ್ರಕಾಶ್, ಲೇಖಕ ಮಂಗಲ ಎಂ.ಇ.ಶಿವಣ್ಣ, ಕವಿ ಜೆ.ಕೆ.ಬಸವರಾಜು, ಚಲನಚಿತ್ರ ನಟ ಚೇತನ್ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net