ನಾಗಮಂಗಲದ ಡಾ.ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತದಿಂದ ಶನಿವಾರ ಆಯೋಜಿಸಿದ್ದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸಚಿವ ಎನ್.ಚಲುವರಾಯಸ್ವಾಮಿ ಸೌಲಭ್ಯದ ದಾಖಲೆಗಳನ್ನು ವಿತರಿಸಿದರು.
ನಾಗಮಂಗಲ: ನಾಡಿನ ಪ್ರಜೆಗಳ ಸಮಸ್ಯೆಗಳನ್ನು ಸರ್ಕಾರ ಹತ್ತಿರದಿಂದ ಅರಿತು ಅವುಗಳನ್ನು ಇತ್ಯರ್ಥಪಡಿಸುವ ಸದುದ್ದೇಶದಿಂದ ಪ್ರಜೆಗಳ ಸಮಸ್ಯೆ ನಿವಾರಣೆಗಾಗಿಯೇ ಪ್ರಜಾಸೇವಾ ಇಲಾಖೆ ಎಂಬ ಹೊಸ ಇಲಾಖೆಯನ್ನು ಸೃಷ್ಟಿಸಿದೆ ಎಂದು ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತದಿಂದ ಶನಿವಾರ ಆಯೋಜಿಸಿದ್ದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಜನರ ಸಮಸ್ಯೆಗಳನ್ನು ಆಲಿಸಲು ಹೊಸ ಇಲಾಖೆಯನ್ನೆ ಸೃಷ್ಟಿಸಲಾಗಿದೆ. ಜನರಿಂದ ಸರ್ಕಾರವೇ ಹೊರತು ಸರ್ಕಾರದಿಂದ ಜನರಲ್ಲ. ಆದ್ದರಿಂದ ಜನರ ಸೇವೆ ಮಾಡಲು ಒಂದು ಹೊಸ ಇಲಾಖೆಯನ್ನು ತೆರೆಯಲಾಗಿದೆ. ನಾಡಿನ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಕಾನೂನಾತ್ಮಕವಾಗಿ ಅವುಗಳನ್ನು ಇತ್ಯರ್ಥಪಡಿಸುವ ಉದ್ದೇಶದಿಂದ ಜಾರಿಗೊಳಿಸಲಾಗಿದೆ. ಸಾರ್ವಜನಿಕರು ಇದನ್ನು ಸದುಪಯೋಗಿಸಿಕೊಂಡು ಯಾವುದೇ ಸಮಸ್ಯೆಗಳಿದ್ದರೂ ಬಗೆಹರಿಸಿಕೊಳ್ಳಲು ನೆರವಾಗಲಿದೆ ಎಂದರು.
ಸರ್ಕಾರದ ಭಾಗವಾಗಿ ಎಲ್ಲ ಸಚಿವರು ಈ ಆಂದೋಲನದಲ್ಲಿ ಆಯಾ ಜಿಲ್ಲೆಗಳಲ್ಲಿ ಭಾಗಿಯಾಗಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಸಚಿವರು ಮೊದಲ ಹಾಗೂ ಕೊನೆಯ ಶನಿವಾರ ಅವರ ಕ್ಷೇತ್ರದಲ್ಲಿ ಪ್ರಜಾಸೇವಾ ಆಂದೋಲನದಲ್ಲಿ ಭಾಗಿಯಾಗಲಿದ್ದಾರೆ. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರುವುದು ಇದರ ಮುಖ್ಯ ಉದ್ದೇಶವಾಗಿದ್ದು, ಆ ನಿಟ್ಟಿನಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕಿದೆ. ಪ್ರಜಾಸೇವಾ ಆಂದೋಲನದಲ್ಲಿ ಬಂದಂತಹ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ಬಗೆಹರಿಸದಿದ್ದರೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ. ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆ ಇದಾಗಿದ್ದು, ಯಾರೂ ನಿರ್ಲಕ್ಷ್ಯ ಮಾಡುವುದು ಬೇಡ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಂದಾಯ, ಪಂಚಾಯತ್ ರಾಜ್ ಸೇರಿದಂತೆ ವಿವಿಧ ಇಲಾಖೆಯ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಿದರು. ತಹಸೀಲ್ದಾರ್ ಡಾ.ಅಶೋಕ್, ತಾಪಂ ಇಒ ಸತೀಶ್, ಸಿಡಿಪಿಒ ಕೃಷ್ಣಮೂರ್ತಿ, ವಲಯ ಅರಣ್ಯಾಧಿಕಾರಿ ಸಂಪತ್ ಪಾಟೀಲ್ ಇದ್ದರು.