ಅಕ್ಕ ಕೆಫೆಗಳಲ್ಲಿ ಶುಚಿ ರುಚಿಯಾದ ಆಹಾರ ಪೂರೈಕೆ

ಪಾಂಡವಪುರ ಪಟ್ಟಣದ ತಾಪಂ ಆವರಣದಲ್ಲಿ ತೆರೆಯಲಾದ ಅಕ್ಕ ಕೆಫೆಯನ್ನು ಜಿಪಂ ಕಾರ್ಯ ನಿರ್ವಹಣಾಧಿಕಾರಿ ಕೆ.ಆರ್.ನಂದಿನಿ ಉದ್ಘಾಟಿಸಿದರು.
ಪಾಂಡವಪುರ ಪಟ್ಟಣದ ತಾಪಂ ಆವರಣದಲ್ಲಿ ತೆರೆಯಲಾದ ಅಕ್ಕ ಕೆಫೆಯನ್ನು ಜಿಪಂ ಕಾರ್ಯ ನಿರ್ವಹಣಾಧಿಕಾರಿ ಕೆ.ಆರ್.ನಂದಿನಿ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿ.ಪಂ ಸಿಇಒ ಕೆ.ಆರ್.ನಂದಿನಿ ಹೇಳಿಕೆ
  • ಪಾಂಡವಪುರದಲ್ಲಿ ಕ್ಯಾಂಟೀನ್ ಉದ್ಘಾಟನೆ
ಪಾಂಡವಪುರ: ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯ ಆಹಾರವನ್ನು ಶುಚಿ ರುಚಿಯಾಗಿ ಕೈಗೆಟುವ ದರದಲ್ಲಿ ಸಾರ್ವಜನಿಕರಿಗೆ ಒದಗಿಸಲು ಎನ್.ಆರ್.ಎಲ್.ಎಂ ಸ್ವಸಹಾಯ ಸಂಘದ ಮಹಿಳೆಯರು ನಿರ್ವಹಿಸುವ 6 ಅಕ್ಕ ಕೆಫೆಗಳನ್ನು ಜಿಲ್ಲೆಯಲ್ಲಿ ಪ್ರಾರಂಭಿಸಲು ಉದ್ದೇಶಿಸಲಾಗಿದೆ.
ಈಗ ಮೊದಲ ಹಂತದಲ್ಲಿ ಕೆ.ಬೆಟ್ಟಹಳ್ಳಿ ಮಹಿಳಾ ಸ್ವಸಾಹಯ ಸಂಘದ ನಿರ್ವಹಣೆಯಲ್ಲಿ ಪಾಂಡವಪುರದಲ್ಲಿ ಪ್ರಾರಂಭಿಸಲಾಗಿದ್ದು, ಶೀಘ್ರದಲ್ಲಿಯೇ ಶ್ರೀರಂಗಪಟ್ಟಣ, ಮಳವಳ್ಳಿ ಪ್ರಾರಂಭಿಸಲಾಗುವುದು ಎಂದು ಜಿ.ಪಂ ಸಿಇಒ ಕೆ.ಆರ್.ನಂದಿನಿ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಬಲವರ್ಧನೆ ಸಂಸ್ಥೆ ಬೆಂಗಳೂರು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಕಾರ್ಯಾಲಯ ಸಹಯೋಗದಲ್ಲಿ ನಿರ್ಮಿಸಿದ್ದ ಅಕ್ಕ ಕೆಫೆ ಕ್ಯಾಂಟೀನ್ ಉದ್ಫಾಟಿಸಿ ಅವರು ಮಾತನಾಡಿದರು.
ಎರಡನೇ ಹಂತದಲ್ಲಿ ಮಂಡ್ಯ ಮದ್ದೂರು ಮತ್ತು ನಾಗಮಂಗಲ ತಾಲೂಕಿನಲ್ಲಿ ಅಕ್ಕ ಕೆಫೆಗಳನ್ನು ಪ್ರಾರಂಭಿಸಲಾಗುವುದು. ರಾಜ್ಯದಲ್ಲಿಯೇ ಮೊದಲ ಬಾರಿಗೆ ಮಂಡ್ಯ ಜಿಲ್ಲೆಯಲ್ಲಿ 13 ಕಡೆ ಮೀನಿನ ಊಟದ ಕ್ಯಾಂಟೀನ್‌ಗಳನ್ನು ಪ್ರಾರಂಭಿಸಿರುವ ಹೆಮ್ಮೆ ನಮ್ಮದಾಗಿದೆ. ಈಗ ಸಿದ್ಧಪಡಿಸಿ ಆಹಾರ ಪೂರೈಕೆಯಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಗೆ ಸುಸ್ಥಿರ ಜೀವನೋಪಾಯ ಚಟುವಟಿಕೆ ಒದಗಿಸುವ ದೂರದೃಷ್ಟಿಯನ್ನು ಹೊಂದಲಾಗಿದೆ. ಸ್ವಸಹಾಯ ಗುಂಪಿನ ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸರ್ಕಾರವು ಅಕ್ಕ ಕೆಫೆಗಳ ಸ್ಥಾಪನೆಗೆ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಮತ್ತು ಅನುದಾನವನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ನಮ್ಮ ಗ್ರಾಮೀಣ ಮಹಿಳೆಯರು ಸ್ವಾವಲಂಬನೆ ಸಾಧಿಸುವುದೇ ನಿಜವಾದ ಅಭಿವೃದ್ಧಿಯಾಗಿದೆ. ಮಹಿಳಾ ಸ್ವಸಹಾಯ ಸಂಘಗಳು ಸ್ಥಳೀಯ ಉತ್ಪನ್ನಗಳನ್ನು ಬಳಸಿಕೊಂಡು ಉದ್ಯಮಗಳನ್ನು ಸೃಷ್ಠಿಮಾಡಿಕೊಳ್ಳಬೇಕಿದೆ. ಇದನ್ನು ನಾವೆಲ್ಲರೂ ಪ್ರೋತ್ಸಾಹಿಸಿ ಬೆಂಬಲಿಸಬೇಕಿದೆ ಎಂದರು.
ಸಾವಯವ ಆಹಾರ ಬಳಸಿ: ಪುಟ್ಟಣ್ಣಯ್ಯ ಫೌಂಡೇಷನ್ ವತಿಯಿಂದ ಆರೋಗ್ಯದ ಬಗ್ಗೆ ಸಮೀಕ್ಷೆ ನಡೆಸಿದಾಗ 40 ವಯಸ್ಸಿನ ಹಂತದ ಶೇ.60ರಷ್ಟು ಜನರಿಗೆ ಸಕ್ಕರೆ ಕಾಯಿಲೆ ಇರುವುದಾಗಿ ಕಂಡು ಬಂದಿದೆ. ಹಾಗಾಗಿ ಸಮತೋಲನ ಆಹಾರದ ಜತೆಗೆ ಸಾವಯವ ಉತ್ಪನ್ನಗಳ ಆಹಾರಗಳನ್ನು ಬಳಸಬೇಕು ಎಂದು ಮನವಿ ಮಾಡಿದರು.
ಊಟ ಸವಿದ ಶಾಸಕ, ಅಧಿಕಾರಿಗಳು: ಅಕ್ಕ ಕೆಫೆ ಉದ್ಪಾಟನೆಯ ಬಳಿಕ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಜಿ.ಪಂ.ಸಿಇಒ ಕೆ.ಆರ್.ನಂದಿನಿ, ತಾ.ಪಂ,ಇಒ ಎಂ.ಎಸ್.ವೀಣಾ ಅವರು ಅಕ್ಕ ಕೆಫೆ ತಯಾರಿಸಿದ್ದ ರೈಸ್ ಬಾತ್, ಕೇಸರಿ ಬಾತ್‌ನ್ನು ಪರಿಸ್ಪರ ಬಡಿಸಿಕೊಂಡು ಸವಿದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ, ಜಿ.ಪಂ ಸಿಇಒ ಕೆ.ಆರ್.ನಂದಿನಿ, ತಾ.ಪಂ.ಇಒ ಎಂ.ಎಸ್.ವೀಣಾ, ಜಿ.ಪಂ.ಸಂಯೋಜನಾ ನಿರ್ದೇಶಕ ಸುಂದರ್ ರಾಜ್, ಸಹಾಯಕ ಯೋಜನಾಧಿಕಾರಿ ಹರ್ಷ, ಜಿಲ್ಲಾ ಆಹಾರ ಸುರಕ್ಷಣಾ ಅಧಿಕಾರಿ ಡಾ.ಶಶಿಧರ್ , ಡಾ.ಸಿ.ಎ.ಅರವಿಂದ್, ಕೆ.ಆರ್.ಡಿ.ಎಲ್ ಇಇ ಸೋಮಶೇಖರ್, ನಾಗರಾಜ್, ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್, ರೈತ ಸಂಘದ ತಾಲ್ಲೂಕು ಅಧ್ಯಕ್ಷ ವೈ.ಪಿ.ಮಂಜುನಾಥ್, ಕಾರ್ಯದರ್ಶಿ ಅಶೋಕ್, ಸರ್ವೋದಯ ಕರ್ನಾಟಕ ಪಕ್ಷದ ತಾಲ್ಲೂಕು ಅಧ್ಯಕ್ಷ ಎಸ್.ದಯಾನಂದ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net