ಜಿಲ್ಲೆಗೆ 2 ಸಾವಿರ ಕೋಟಿ ರೂ. ಬರ ಪರಿಹಾರ ನೀಡಿ

ಮಳವಳ್ಳಿಯ ಸಿಪಿಐಎಂ ಪಕ್ಷದಿಂದ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶನಿವಾರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಭರತ್ ರಾಜ್, ಲಿಂಗರಾಜ ಮೂರ್ತಿ, ಸುಶೀಲಾ, ಆನಂದ್, ಮಹದೇವಮ್ಮ, ಗುರುಸ್ವಾಮಿ, ಶಿವಕುಮಾರ್, ಪ್ರೇಮಾ, ಜಯಶೀಲಾ, ಶಿವಕುಮಾರ್, ಬಸವರಾಜು, ಸರೋಜಮ್ಮ, ತಿಮ್ಮೇಗೌಡ, ಶಿವಮಲ್ಲಯ್ಯ ಇದ್ದರು.
ಮಳವಳ್ಳಿಯ ಸಿಪಿಐಎಂ ಪಕ್ಷದಿಂದ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶನಿವಾರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಭರತ್ ರಾಜ್, ಲಿಂಗರಾಜ ಮೂರ್ತಿ, ಸುಶೀಲಾ, ಆನಂದ್, ಮಹದೇವಮ್ಮ, ಗುರುಸ್ವಾಮಿ, ಶಿವಕುಮಾರ್, ಪ್ರೇಮಾ, ಜಯಶೀಲಾ, ಶಿವಕುಮಾರ್, ಬಸವರಾಜು, ಸರೋಜಮ್ಮ, ತಿಮ್ಮೇಗೌಡ, ಶಿವಮಲ್ಲಯ್ಯ ಇದ್ದರು.
Published on

ಮಳವಳ್ಳಿ :

ಮಂಡ್ಯ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ತೀವ್ರ ಬರ ಆವರಿಸಿದ್ದು, ರಾಜ್ಯ ಸರ್ಕಾರ ಕೂಡಲೇ ಜಿಲ್ಲೆಗೆ 2 ಸಾವಿರ ಕೋಟಿ ರೂ. ಬರ ಪರಿಹಾರ ನೀಡಬೇಕು ಹಾಗೂ ರೈತರು, ಕೂಲಿಕಾರರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ ಸಿಪಿಐ(ಎಂ) ತಾಲೂಕು ಸಮಿತಿಯಿಂದ ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.

ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಬಳಿಯಿಂದ ಮೆರವಣಿಗೆ ಹೊರಟ ನೂರಾರು ಪ್ರತಿಭಟನಾಕಾರರು, ತಾಲೂಕು ಕಚೇರಿಯವರೆಗೆ ತೆರಳಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆಗಳನ್ನು ಕೂಗಿ, ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಸಿಪಿಐಎಂ ಜಿಲ್ಲಾ ಕಾರ್ಯಕಾರಿ ಮಂಡಳಿ ಸದಸ್ಯ ಭರತ್ ರಾಜ್ ಮಾತನಾಡಿ, ಮಂಡ್ಯ ಜಿಲ್ಲೆ ಕಳೆದ ಹಲವು ವರ್ಷಗಳಲ್ಲಿ ಕಾಣದಷ್ಟು ಮಳೆ ಕೊರತೆ ಎದುರಿಸುತ್ತಿದೆ. ಒಣಭೂಮಿ ಪ್ರದೇಶದ ರೈತರು ಬಿತ್ತನೆಯನ್ನೇ ಮಾಡಲಾಗದೆ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಇತ್ತ ಕಾವೇರಿ ಜಲಾನಯನ ಪ್ರದೇಶದಲ್ಲೂ ಮಳೆ ಇಲ್ಲದೆ ಕೆಆರ್‌ಎಸ್ ತುಂಬುವುದು ಅನುಮಾನವಾಗಿದೆ. ಸರ್ಕಾರ ಕೇವಲ ನಾಲ್ಕು ಕಟ್ಟು ನೀರು ಕೊಡುತ್ತೇವೆ ಎಂದು ಹೇಳಿರುವುದು ರೈತರಲ್ಲಿ ಆತಂಕ ಸೃಷ್ಟಿಸಿದೆ ಎಂದರು.
ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿರುವುದು ಸ್ವಾಗತಾರ್ಹ. ಆದರೆ ಅದು ಕಾಗದದ ಮೇಲೆ ಉಳಿಯಬಾರದು ಎಂದ ಅವರು, ಕೇಂದ್ರ ಸರ್ಕಾರ ಕಾವೇರಿ ವಿವಾದದಲ್ಲಿ ಮಧ್ಯಪ್ರವೇಶಿಸಿ ಶಾಶ್ವತ ಪರಿಹಾರ ಸೂತ್ರ ರೂಪಿಸಬೇಕು ಎಂದು ಆಗ್ರಹಿಸಿದರು. ಆಳುವ ಕಾಂಗ್ರೆಸ್ ಸರ್ಕಾರವಾಗಲಿ, ವಿರೋಧ ಪಕ್ಷಗಳಾಗಲಿ ರೈತ-ಕೂಲಿಕಾರರ ನೋವಿಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಪಿಐಎಂ ತಾಲೂಕು ಕಾರ್ಯದರ್ಶಿ ಲಿಂಗರಾಜಮೂರ್ತಿ ಮಾತನಾಡಿ, ಬರಪೀಡಿತ ಮಂಡ್ಯ ಜಿಲ್ಲೆಯ ನಿರ್ವಹಣೆಗೆ 2 ಸಾವಿರ ಕೋಟಿ ರೂ. ಅನುದಾನ ನೀಡಬೇಕು. ಬೆಳೆ ನಷ್ಟಕ್ಕೆ ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ಮತ್ತು ಕೂಲಿಕಾರರಿಗೆ ಕೂಲಿ ನಷ್ಟ ಪರಿಹಾರ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ಕುಟುಂಬಕ್ಕೆ ವಾರ್ಷಿಕ 200 ದಿನ ಕೆಲಸ ಹಾಗೂ ದಿನಗೂಲಿ 700 ರೂ.ಗೆ ಹೆಚ್ಚಿಸಬೇಕು. ಮಂಡ್ಯ ಜಿಲ್ಲೆಯ ಎಲ್ಲ ರೈತರ ಸಾಲ ಮತ್ತು ಕೂಲಿಕಾರರ ಮೈಕ್ರೋಫೈನಾನ್ಸ್ ಸಾಲ ಮನ್ನಾ ಮಾಡಬೇಕು. ಕಾವೇರಿ ನೀರಿನ ಕೊರತೆ ಸಂದರ್ಭಕ್ಕೆ 5 ಸಾವಿರ ಕೋಟಿ ರೂ. ಶಾಶ್ವತ ಪರಿಹಾರ ನಿಧಿ ಸ್ಥಾಪಿಸಬೇಕು. ಶಾಶ್ವತ ಸಂಕಷ್ಟ ಪರಿಹಾರ ಸೂತ್ರ ರೂಪಿಸಿ ಕಾವೇರಿ ವಿವಾದಕ್ಕೆ ತೆರೆ ಎಳೆಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಸುಶೀಲಾ, ಟಿ.ಎಚ್.ಆನಂದ್, ಮಹದೇವಮ್ಮ, ಗುರುಸ್ವಾಮಿ, ಎನ್.ಶಿವಕುಮಾರ್, ಪ್ರೇಮಾ, ಜಯಶೀಲಾ, ಎ.ಎಲ್.ಶಿವಕುಮಾರ್, ಟಿ.ಎಚ್.ಬಸವರಾಜು, ಸರೋಜಮ್ಮ, ಎಚ್.ಕೆ. ತಿಮ್ಮೇಗೌಡ, ಬಿ.ಎಂ.ಶಿವಮಲ್ಲಯ್ಯ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net