ವೈದ್ಯರ ಸೇವೆಗೆ ಆಗ್ರಹಿಸಿ ಹಲಗೂರಿನಲ್ಲಿ ಪ್ರತಿಭಟನೆ

ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಜನವಾದಿ ಮಹಿಳಾ ಸಂಘಟನೆಯಿಂದ ಹಲಗೂರಿನಲ್ಲಿ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಜನವಾದಿ ಮಹಿಳಾ ಸಂಘಟನೆಯಿಂದ ಹಲಗೂರಿನಲ್ಲಿ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
Published on
ಹಲಗೂರು : ಹಲಗೂರು ಸಾರ್ವಜನಿಕ ಆಸ್ಪತ್ರೆಗೆ 24*7 ವೈದ್ಯರ ಸೇವೆ ಕಲ್ಪಿಸುವುದು, ಆಸ್ಪತ್ರೆ ಮೇಲ್ದರ್ಜೆಗೇರಿಸುವುದು, ಮುತ್ತತ್ತಿ ಪ್ರವಾಸಿ ತಾಣದಲ್ಲಿ ಸುರಕ್ಷತಾ ಕ್ರಮ ಹಾಗೂ ಮೂಲ ಸೌಲಭ್ಯಗಳನ್ನು ಒದಗಿಸುವುದೂ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಜನವಾದಿ ಮಹಿಳಾ ಸಂಘಟನೆಯಿಂದ ಹಲಗೂರಿನಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್. ಭರತ್ ರಾಜ್ ಮಾತನಾಡಿ, ಹಲಗೂರು ಹೋಬಳಿ ಸೇರಿದಂತೆ ಸುತ್ತಮುತ್ತಲಿನ ನೂರಾರು ಗ್ರಾಮಗಳ ಸಾವಿರಾರು ಜನರು ಆರೋಗ್ಯ ಸೇವೆಗಾಗಿ ಹಲಗೂರು ಸಾರ್ವಜನಿಕ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅವಲಂಬಿಸಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ 24 ಗಂಟೆಗಳ ವೈದ್ಯರ ಸೇವೆ ಲಭ್ಯವಿಲ್ಲದ ಕಾರಣ ತುರ್ತು ಪರಿಸ್ಥಿತಿಯಲ್ಲಿ ರೋಗಿಗಳು ಮಂಡ್ಯ, ಮಳವಳ್ಳಿ, ಕನಕಪುರ ಹಾಗೂ ಮೈಸೂರು ನಗರಗಳಿಗೆ ತೆರಳಬೇಕಾದ ದುಸ್ಥಿತಿ ಎದುರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮುತ್ತತ್ತಿ ಪ್ರವಾಸಿ ತಾಣ ಹಾಗೂ ರಾಷ್ಟ್ರೀಯ ಹೆದ್ದಾರಿ ಇರುವುದರಿಂದ ದಿನವೂ ಅಪಘಾತಗಳು, ಹೃದಯಾಘಾತ, ಹೆರಿಗೆ ಸೇರಿದಂತೆ ತುರ್ತು ಆರೋಗ್ಯ ಸಮಸ್ಯೆಗಳು ಸಂಭವಿಸುವ ಸಾಧ್ಯತೆ ಇದೆ. ಇಂಥ ಸಂದರ್ಭಗಳಲ್ಲಿ ವೈದ್ಯರು ಲಭ್ಯವಿಲ್ಲದಿರುವುದು ಜನರ ಜೀವದೊಂದಿಗೆ ಆಟವಾಡಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮೀಣ ಬಡವರು, ಕೃಷಿ ಕಾರ್ಮಿಕರು ಹಾಗೂ ದುರ್ಬಲ ವರ್ಗಗಳ ಜೀವನಾಧಾರವಾಗಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ)ಯನ್ನು ಇನ್ನಷ್ಟು ಬಲಪಡಿಸಬೇಕು. ಪ್ರತಿ ಗ್ರಾಮೀಣ ಪ್ರದೇಶದ ಕುಟುಂಬಕ್ಕೆ ವರ್ಷಕ್ಕೆ 200 ದಿನ ಉದ್ಯೋಗ ಹಾಗೂ ದಿನಕ್ಕೆ 600 ರೂ. ಕೂಲಿ ನೀಡಬೇಕು ಎಂದು ಆಗ್ರಹಿಸಿದರು. ಜತೆಗೆ, ಯೋಜನೆಯಲ್ಲಿ ಖಾಸಗೀಕರಣ ಹಾಗೂ ಗುತ್ತಿಗೆ ಪದ್ಧತಿಗಳನ್ನು ಜಾರಿಗೊಳಿಸುವುದರಿಂದ ಕಾರ್ಮಿಕರ ಹಕ್ಕುಗಳಿಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಮುತ್ತತ್ತಿ ಪ್ರವಾಸಿ ತಾಣದಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಅಗತ್ಯ ಕ್ರಮಗಳು ಇಲ್ಲದಿರುವುದರಿಂದ ಪ್ರತಿವರ್ಷ ಅನೇಕರು ನದಿಯಲ್ಲಿ ಮುಳುಗಿ ಸಾವಿಗೀಡಾಗುತ್ತಿದ್ದಾರೆ. ಅಪಾಯದ ಸ್ಥಳಗಳಲ್ಲಿ ಎಚ್ಚರಿಕೆ ಫಲಕಗಳು, ರಕ್ಷಣಾ ಸಿಬ್ಬಂದಿ, ಜೀವ ರಕ್ಷಕ ಸಾಧನಗಳು, ಸಿಸಿಟಿವಿ, ಪ್ರಥಮ ಚಿಕಿತ್ಸೆ ಕೇಂದ್ರ, ಕುಡಿಯುವ ನೀರು, ಶೌಚಗೃಹ, ವಾಹನ ನಿಲುಗಡೆ ಸೇರಿದಂತೆ ಮೂಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
ರೈತ ಸಂಘದ ತಾಲೂಕು ಅಧ್ಯಕ್ಷ ಎಂ.ಇ.ಮಹದೇವು, ತಾಲೂಕು ಕಾರ್ಯದರ್ಶಿ ಗುರುಸ್ವಾಮಿ, ಜನವಾದಿ ಮಹಿಳಾ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ, ಜಿಲ್ಲಾ ಕಾರ್ಯದರ್ಶಿ ಸುಶೀಲಾ, ಉಪಾಧ್ಯಕ್ಷೆ ಪ್ರಮೀಳಾ, ಎಸ್.ಕೆ. ಶಿವಕುಮಾರ್, ಗಣೇಶ್, ಎ.ಎಲ್. ಶಿವಕುಮಾರ್, ಮಹಾದೇವು, ಪ್ರದೀಪ್, ಸಣ್ಣಶೆಟ್ಟಿ, ಸುನಂದಾ, ಜ್ಯೋತಿ, ಶಾಂಭವಿ, ಮಹದೇವಮ್ಮ, ನಾಗೇಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net