ಅತಿಥಿ ಶಿಕ್ಷಕರನ್ನು ಕಾಯಂಗೊಳಿಸದಿದ್ದರೆ ಹೋರಾಟ

ಮಳವಳ್ಳಿ ಪಟ್ಟಣದ ಭಕ್ತ ಕನಕದಾಸ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಅತಿಥಿ ಶಿಕ್ಷಕರ ಸಂಘದ ಸಭೆಯಲ್ಲಿ ತಾಲೂಕು ಅಧ್ಯಕ್ಷ ಮಹೇಶ್‌ಕುಮಾರ್ ಮಾತನಾಡಿದರು. ಎನ್.ಎಲ್.ಭರತ್ ರಾಜ್, ಜೆ.ಶಿವಕುಮಾರ್, ನಂಜುಂಡಸ್ವಾಮಿ, ಶರತ್ ಕುಮಾರ್, ಚುಂಚಣ್ಣ, ಮಹದೇವು, ವಿಷಕಂಠಮೂರ್ತಿ, ರೇಖಾ, ನಯನಾ ಇದ್ದರು.
ಮಳವಳ್ಳಿ ಪಟ್ಟಣದ ಭಕ್ತ ಕನಕದಾಸ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಅತಿಥಿ ಶಿಕ್ಷಕರ ಸಂಘದ ಸಭೆಯಲ್ಲಿ ತಾಲೂಕು ಅಧ್ಯಕ್ಷ ಮಹೇಶ್‌ಕುಮಾರ್ ಮಾತನಾಡಿದರು. ಎನ್.ಎಲ್.ಭರತ್ ರಾಜ್, ಜೆ.ಶಿವಕುಮಾರ್, ನಂಜುಂಡಸ್ವಾಮಿ, ಶರತ್ ಕುಮಾರ್, ಚುಂಚಣ್ಣ, ಮಹದೇವು, ವಿಷಕಂಠಮೂರ್ತಿ, ರೇಖಾ, ನಯನಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಹೇಶ್ ಕುಮಾರ್ ಎಚ್ಚರಿಕೆ
  • ಭಕ್ತ ಕನಕದಾಸ ಕ್ರೀಡಾಂಗಣದಲ್ಲಿ ಸಭೆ
ಮಳವಳ್ಳಿ: ಅತಿಥಿ ಶಿಕ್ಷಕರನ್ನು ಕಾಯಂಗೊಳಿಸಿ ನುಡಿದಂತೆ ನಡೆಯಲು ಸರ್ಕಾರ ಕ್ರಮ ವಹಿಸದಿದ್ದರೆ ಅನಿವಾರ್ಯವಾಗಿ ಹೋರಾಟಕ್ಕೆ ಇಳಿಯ ಬೇಕಾಗುತ್ತದೆ ಎಂದು ಅತಿಥಿ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಹೇಶ್ ಕುಮಾರ್ ತಿಳಿಸಿದರು.
ಪಟ್ಟಣದ ಭಕ್ತ ಕನಕದಾಸ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಅತಿಥಿ ಶಿಕ್ಷಕರ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಸುಮಾರು 52 ಸಾವಿರ ಅತಿಥಿ ಶಿಕ್ಷಕರು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಶೈಕ್ಷಣಿಕ ಅರ್ಹತೆ, ಕಾರ್ಯಭಾರ ಎಲ್ಲವೂ ಕಾಯಂ ನೌಕರರಿಗೆ ಸಮನಾಗಿದ್ದರೂ ವೇತನದಲ್ಲಿ ಮಾತ್ರ ಗೌರವಧನ ನೀಡಿ ಶೋಷಣೆ ಮಾಡಲಾಗುತ್ತಿದೆ ಎಂದರು.
ಕನಿಷ್ಠ ವೇತನವೂ ಇಲ್ಲ, ಸೇವಾ ಭದ್ರತೆಯೂ ಇಲ್ಲ, ನೇಮಕಾತಿ ವಿಧಾನಗಳು ಅವೈಜ್ಞಾನಿಕವಾಗಿವೆ. ಈ ಎಲ್ಲ ವಿಷಯಗಳನ್ನು ಸತತವಾಗಿ ಸಂಬಂಧಿಸಿದ ಇಲಾಖೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಸಹ ಪ್ರಯೋಜನವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಅತಿಥಿ ಶಿಕ್ಷಕರನ್ನು ಕಾಯಂ ಮಾಡುವುದಾಗಿ ಭರವಸೆ ನೀಡಿತ್ತು. ಪ್ರಸ್ತುತ ಸರ್ಕಾರ ರಚನೆಯಾಗಿ ಮೂರು ವರ್ಷ ಕಳೆದರೂ ಕಾಯಮಾತಿಯ ಯಾವುದೇ ಸುಳಿವಿಲ್ಲ. ಈ ವಿಚಾರದಲ್ಲಿ ಆಯಾ ವಿಧಾನಸಭಾ ಕ್ಷೇತ್ರಗಳ ಹಾಗೂ ಪದವೀಧರ ಕ್ಷೇತ್ರ, ಶಿಕ್ಷಕರ ಕ್ಷೇತ್ರದ ಜನಪ್ರತಿನಿಧಿಗಳು ಮಾತನಾಡದೆ ಮೌನವಹಿಸಿರುವುದು ವಿಪರ್ಯಾಸದ ಸಂಗತಿಯಾಗಿದೆ. ಚುನಾವಣೆಗೆ ಬಂದಾಗ ಮತಗಳು ಮಾತ್ರ ಬೇಕು. ಗೆದ್ದ ನಂತರ ಎಲ್ಲವೂ ಮರೆತು ಅಧಿಕಾರದ ಅಮಲಿನಲ್ಲಿ ಕಾಲ ದೂಡುತ್ತಾರೆ. ಇದೆಲ್ಲದರ ಪರಿಣಾಮವನ್ನು ಮುಂದಿನ ಚುನಾವಣೆಗಳಲ್ಲಿ ಎದುರಿಸಬೇಕಾಗುತ್ತದೆ ಎಂದು ಜನಪ್ರತಿನಿಧಿಗಳ ವಿರುದ್ಧ ಕಿಡಿಕಾಡಿದರು. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತಿಥಿ ಶಿಕ್ಷಕರ ಕಾಯಮಾತಿಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಮೂಲಕ ಅತಿಥಿ ಶಿಕ್ಷಕರ ಬದುಕಿಗೆ ಆಸರೆಯಾಗಬೇಕಿದೆ ಎಂದರು.
ಸೇವೆಗೆ ಸೇರಿದ ವರ್ಷಗಳಿಂದಲೂ ಅನ್ವಯವಾಗುವಂತೆ ವರ್ಷಕ್ಕೆ ಶೇ.5ರಷ್ಟು ಕೃಪಾಂಕ ನೀಡುವುದರ ಜತೆಗೆ ಸೇವಾ ಭದ್ರತೆ ಹಾಗೂ ಸೇವಾ ದೃಢೀಕರಣ ಪತ್ರ ನೀಡಬೇಕು. ಕನಿಷ್ಠ ವೇತನ 34 ಸಾವಿರ ರೂ.ನಿಗದಿ ಸೇರಿದಂತೆ ಶೈಕ್ಷಣಿಕ ಅರ್ಹತೆ ಸಲ್ಲಿಸಿರುವ ಸೇವೆ ಪರಿಗಣಿಸಿ ಕಾಯಮಾತಿ ಮಾಡಬೇಕೆಂದು ಆಗ್ರಹಿಸಿದರು.
ಸರ್ಕಾರ ಈ ನಿರ್ಣಯಗಳನ್ನು ಕೈಗೊಳ್ಳದೆ ತಾತ್ಸಾರ ತೋರಿದರೆ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಎಲ್ಲರೂ ಸಿದ್ಧರಾಗೋಣ ಎಂದು ಕರೆ ನೀಡಿದರು.
ಗೌರವಾಧ್ಯಕ್ಷ ಎನ್.ಎಲ್.ಭರತ್ ರಾಜ್, ಉಪಾಧ್ಯಕ್ಷ ಜೆ.ಶಿವಕುಮಾರ್, ಸದಸ್ಯರಾದ ನಂಜುಂಡಸ್ವಾಮಿ, ಶರತ್ ಕುಮಾರ್, ಚುಂಚಣ್ಣ, ಮಹದೇವು, ವಿಷಕಂಠಮೂರ್ತಿ, ರೇಖಾ, ನಯನಾ ಸೇರಿದಂತೆ ಐವತ್ತಕ್ಕೂ ಹೆಚ್ಚು ಅತಿಥಿ ಶಿಕ್ಷಕರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net