ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ
ಮಂಡ್ಯ: ಸಂಸತ್‌ನಲ್ಲಿ ಮಂಡನೆಯಾದ ಮಹಿಳಾ ಮೀಸಲು ಮಸೂದೆಗೆ ಐಎನ್‌ಡಿಐಎ ಒಕ್ಕೂಟ ವಿರೋಧ ವ್ಯಕ್ತಪಡಿಸಿರುವುದನ್ನು ಖಂಡಿಸಿ ಜಿಲ್ಲಾ ಜೆಡಿಎಸ್ ಮಹಿಳಾ ಘಟಕದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ಐಎನ್‌ಡಿಐಎ ಒಕ್ಕೂಟದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 1996ರಲ್ಲಿ ಎಚ್.ಡಿ.ದೇವೇಗೌಡರ ನೇತೃತ್ವದ ಸರ್ಕಾರವು ಮಹಿಳೆಯರಿಗೆ ಶೇ.33 ಮೀಸಲಾತಿ ನೀಡಲು ಕ್ರಾಂತಿಕಾರಿ ಮಸೂದೆ ಮಂಡಿಸಿತ್ತು. ಆದರೆ, ಅಂದು ಕಾಂಗ್ರೆಸ್ ಮತ್ತು ಅದರ ಸಹಚರರು ಸಂಘಟಿತವಾಗಿ ಆ ಪ್ರಯತ್ನವನ್ನು ವಿಫಲಗೊಳಿಸಿದ್ದರು. ಈ ಅನ್ಯಾಯವನ್ನು ಸರಿಪಡಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದಿಟ್ಟ ಹೆಜ್ಜೆ ಇರಿಸಿದ್ದರು. ಈಗಲೂ ಕಾಂಗ್ರೆಸ್ ಮತ್ತು ಐಎನ್‌ಡಿಐಎ ಕೂಟದ ಪಕ್ಷಗಳು ಮಸೂದೆಗೆ ತಡೆಯೊಡ್ಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್‌ನವರು ಮಹಿಳಾ ವಿರೋಧಿಗಳು. ಹೆಣ್ಣು ಮಕ್ಕಳು ರಾಜಕೀಯಕ್ಕೆ ಬಾರದಂತೆ ತಡೆಯುತ್ತಿದ್ದಾರೆ. ಕೇವಲ ಒಂದು ಕುಟುಂಬದ ಮಹಿಳೆಯರು ಅಧಿಕಾರದಲ್ಲಿರಬೇಕೆಂಬ ದುರಾಸೆ ಹೊಂದಿದ್ದಾರೆ. ಮಹಿಳಾ ಮೀಸಲಾತಿಗೆ ಅಡ್ಡಗಾಲಾಗಿರುವ ಕಾಂಗ್ರೆಸ್ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು. ಪ್ರಧಾನಿ ನರೇಂದ್ರ ಮೋದಿ ದಿಟ್ಟ ನಿರ್ಧಾರಗಳೊಂದಿಗೆ ನಾರಿಶಕ್ತಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿಯನ್ನು ಅನುಷ್ಠಾನಕ್ಕೆ ತರಲು ಮುಂದಾಗಿದ್ದರು. ಅದರಂತೆ ದೇಶದ ಮಹಿಳೆಯರು ಖುಷಿಯಲ್ಲಿದ್ದರು. ಆದರೆ ಮಸೂದೆ ವಿರೋಧಿಸಿರುವುದು ಕಾಂಗ್ರೆಸ್‌ನ ಮಹಿಳಾ ವಿರೋಧಿ ನೀತಿಗೆ ಸಾಕ್ಷಿಯಾಗಿದೆ. ಕಾಂಗ್ರೆಸ್ ನಾಯಕರು ಈ ಮಸೂದೆ ವಿರೋಧಿಸಿ ಜಯ ಸಾಧಿಸಿರುವುದಾಗಿ ಭಾವಿಸುತ್ತಿದ್ದರೂ, ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಂಜುಳಾ ಉದಯಶಂಕರ್, ವತ್ಸಲಾ ಪ್ರಕಾಶ್, ಜಯಶೀಲಮ್ಮ, ಪ್ರೇಮಾ, ರಾಧಾಮಣಿ, ಸುಮತಿ, ಗಾಯಿತ್ರಿ, ಲೀಲಾವತಿ, ಮಂಜುಳಾ ಇತರರಿದ್ದರು.