ಮಂಡ್ಯ:ನಾಲೆಗೆ ನೀರು ಹರಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಸರ್‌ಎಂವಿ ಪ್ರತಿಮೆ ಎದುರು ಜಮಾಯಿಸಿದ ಕಾರ್ಯಕರ್ತರು, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಿಸಿದರು. ಇದರಿಂದಾಗಿ ಕೆಲವೊತ್ತು ವಾಹನ ಸಂಚಾರ ಅಸ್ತವ್ಯಸ್ತಗೊಳ್ಳುವಂತಾಯಿತು.
ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಜಿಲ್ಲೆಯಲ್ಲಿ ಬೆಳೆಗಳು ಒಣಗಿ ನಿಂತಿವೆ. ಈ ವರ್ಷ ಮುಂಗಾರು ಮಳೆಯಾಗಿಲ್ಲ. ಪರಿಣಾಮ ಬೆಳೆ ನಾಶವಾಗುವ ಹಂತ ತಲುಪಿದೆ. ಆದ್ದರಿಂದ ಕೂಡಲೇ ಕೆಆರ್‌ಎಸ್ ಡ್ಯಾಂನಿಂದ ಒಂದು ಕಟ್ಟು ನೀರನ್ನು ನಾಲೆಗೆ ಹರಿಸಬೇಕು. ಆಗ ಮಾತ್ರ ಕೋಟ್ಯಂತರ ರೂ ಮೌಲ್ಯದ ಬೆಳೆ ಉಳಿಸಿಕೊಳ್ಳಬಹುದು. ಇಲ್ಲದಿದ್ದರೆ ರೈತರಿಗೆ ನಷ್ಟವಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಸುಮಾರು 37 ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬೆಳೆ ಒಣಗುತ್ತಿದೆ. ಕೆ.ಆರ್.ಎಸ್ ಡ್ಯಾಂನಲ್ಲಿ 80 ಅಡಿಗೂ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಮಾತ್ರವಲ್ಲದೆ ಅಣೆಕಟ್ಟೆಯಲ್ಲಿ 70 ಅಡಿ ನೀರು ಇದ್ದ ಸಂದರ್ಭದಲ್ಲೂ ಬೆಳೆ ರಕ್ಷಣೆಗಾಗಿ ನೀರು ಹರಿಸಿರುವ ಉದಾಹರಣೆಗಳು ಇವೆ. ಹೀಗಿರುವಾಗ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಬೆಳೆ ರಕ್ಷಣೆಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.
ಇನ್ನು ರಾಜ್ಯಸರ್ಕಾರ ಬೆಂಗಳೂರಿಗೆ ನೀರು ತೆಗೆದುಕೊಂಡು ಹೋಗಲು ಆರನೇ ಹಂತದ ಯೋಜನೆ ರೂಪಿಸಿದೆ. ಇದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಯಾವುದೇ ಕಾರಣಕ್ಕೂ ಈ ಯೋಜನೆ ಮಾಡಬಾರದು. ಸರ್ಕಾರ ತನ್ನ ನಿಲುವಿನಿಂದ ಹಿಂದೆ ಸರಿಯಬೇಕು. ಬೆಂಗಳೂರಿನಲ್ಲಿದ್ದ ನೀರಿನ ಮೂಲವಾಗಿದ್ದ ಎಲ್ಲ ಕೆರೆಗಳನ್ನೂ ಮುಚ್ಚಿ ಬಡಾವಣೆಗಳನ್ನಾಗಿ ಮಾಡಲಾಗಿದೆ. ಇದೀಗ ಅಲ್ಲಿನ ಜನರಿಗೆ ನೀರು ಒದಗಿಸಲು ಕೃಷ್ಣರಾಜಸಾಗರ ಜಲಾಶಯದಿಂದ ನೀರು ಕೊಂಡೊಯ್ಯಲು ಸರ್ಕಾರ ಹುನ್ನಾರ ನಡೆಸುತ್ತಿದೆ. ಯಾವುದೇ ಕಾರಣಕ್ಕೂ 6ನೇ ಹಂತದ ಯೋಜನೆ ಕೈಗೊಳ್ಳಬಾರದು ಎಂದು ಒತ್ತಾಯಿಸಿದರು.
ಪ್ರತಿ ಟನ್ ಕಬ್ಬಿಗೆ 50 ರೂ ಪ್ರೋತ್ಸಾಹ ಧನ ನೀಡಬೇಕು ಎಂದು ರಾಜ್ಯ ಸರ್ಕಾರ ಕಾರ್ಖಾನೆಯವರಿಗೆ ತಾಕೀತು ಮಾಡಿದೆ. ಆದರೆ ಇದನ್ನು ಪ್ರಶ್ನಿಸಿ ಕಾರ್ಖಾನೆ ಮಾಲೀಕರು ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ. ಇದು ಸರಿಯಾದ ಕ್ರಮವಲ್ಲ. ತಕ್ಷಣ ಸರ್ಕಾರ ನಿಗದಿ ಮಾಡಿರುವ ಪ್ರೋತ್ಸಾಹ ಧನವನ್ನು ರೈತರಿಗೆ ವಿತರಿಸಬೇಕು ಎಂದು ಆಗ್ರಹಿಸಿದರು.